ಒಳ ಮೀಸಲಾತಿ ಬಗ್ಗೆ ಅನುಮಾನ ಬೇಡ, ಯಾರಿಗೂ ಅನ್ಯಾಯವಾಗದಂತೆ ಜಾರಿ ಮಾಡುತ್ತೇವೆ : ಸಿಎಂ ಸಿದ್ದರಾಮಯ್ಯ

ಬೆಂಗಳೂರು : ಒಳ ಮೀಸಲಾತಿ ಬಗ್ಗೆ ಅನುಮಾನ ಬೇಡ. ಜಾರಿ ಮಾಡೇ ಮಾಡ್ತೀವಿ. ನೀವು ಬೇಡ ಅಂದರೂ ನಾವು ಜಾರಿ ಮಾಡ್ತೀವಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ವಿಧಾನಸೌಧದ ಮೆಟ್ಟಿಲುಗಳ ಮೇಲೆ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಿದ್ದ ಡಾ.ಬಾಬು ಜಗಜೀವನ್ ರಾಮ್ ಅವರ 118 ನೇ ಜನ್ಮ ದಿನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸುಪ್ರೀಂಕೋರ್ಟ್ ಆದೇಶವನ್ನು ನಾವು ಖಚಿತವಾಗಿ ಪಾಲಿಸುತ್ತೇವೆ. ನಾಗಮೋಹನ್ ದಾಸ್ ಅವರು ಎರಡು ತಿಂಗಳ ಕಾಲಾವಧಿ ಕೇಳಿದ್ದಾರೆ. ನಾವು ಕೊಟ್ಟಿದ್ದೇವೆ. ಬಳಿಕ ಯಾರಿಗೂ ಅನ್ಯಾಯ ಆಗದಂತೆ ಜಾರಿ ಮಾಡುತ್ತೇವೆ ಎಂದು ಸಿಎಂ ಭರವಸೆ ನೀಡಿದರು.
ಮೀಸಲಾತಿ ವಿರೋಧಿಸುವವರು ಯಾರೂ ಇಲ್ಲ :
ಮೀಸಲಾತಿ ವಿರುದ್ಧ ಮಾತಾಡುತ್ತಿದ್ದವರೆಲ್ಲಾ ಈಗ ಮೀಸಲಾತಿ ಪಡೆದು ಸವಲತ್ತುಗಳನ್ನು ಅನುಭವಿಸುತ್ತಿದ್ದಾರೆ. ಆದ್ದರಿಂದ ಈಗ ಮೀಸಲಾತಿ ವಿರೋಧಿಸುವವರು ಯಾರೂ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.
ಬಾಬು ಜಗಜೀವನ್ ರಾಮ್ ಸ್ವಾತಂತ್ರ್ಯ ಪ್ರೇಮಿ, ಸಾಮಾಜಿಕ ನ್ಯಾಯದ ಪರವಾಗಿದ್ದವರು. ಜಾತಿ ವ್ಯವಸ್ಥೆ ಕಾರಣದಿಂದ ಸಮಾಜದಲ್ಲಿ ಅಸಮಾನತೆ ಇದೆ. ಜಾತಿ ಇರುವವರೆಗೂ ಮೀಸಲಾತಿ ಇರಬೇಕು ಎಂದು ಸ್ಪಷ್ಟವಾದ ನಿಲುವು ಹೊಂದಿದ್ದರು ಎಂದು ವಿವರಿಸಿದರು.
ನಮ್ಮ ರಾಜ್ಯದಲ್ಲಿ ಮತ್ತು ತೆಲಂಗಾಣ, ಆಂಧ್ರದಲ್ಲಿ ಮಾತ್ರ ಎಸ್‌ಸಿಪಿ-ಟಿಎಸ್‌ಪಿ ಕಾಯ್ದೆ ಜಾರಿಯಲ್ಲಿದೆ. ಸಾಮಾಜಿಕ ನ್ಯಾಯದ ಬಗ್ಗೆ ಭಾಷಣ ಮಾಡುವ ಬಿಜೆಪಿ ಅವರ ಆಡಳಿತದ ರಾಜ್ಯಗಳಲ್ಲಿಈ ಕಾಯ್ದೆ ತಂದೇ ಇಲ್ಲ ಏಕೆ? ಬರೀ ಭಾಷಣ ಮಾಡಿದರೆ ಸಾಕಾ, ಅದು ಕ್ರಿಯೆಯಲ್ಲಿ ಕಾಣಬಾರದಾ ಎಂದು ಪ್ರಶ್ನಿಸಿದರು.
ಹಬ್ಬದ ದಿನ ಮಾತ್ರ ಅನ್ನ ಸಿಗುತ್ತಿತ್ತು :
ಬಾಬು ಜಗಜೀವನ್ ರಾಮ್ ಅವರು ಕೇಂದ್ರ ಸಚಿವರಾಗಿ ಹಸಿರು ಕ್ರಾಂತಿ ಮಾಡಿ ಎಲ್ಲರಿಗೂ ಆಹಾರ ಸಿಗುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ನಮಗೆಲ್ಲಾ ಹಬ್ಬದ ದಿನ ಮಾತ್ರ ಅನ್ನ ಸಿಗುತ್ತಿತ್ತು. ಈ ಪರಿಸ್ಥಿತಿ ಯಾರಿಗೂ ಬರಬಾರದು, ಯಾರೂ ಹಸಿವಿನಿಂದ ಮಲಗಬಾರದು ಎನ್ನುವ ಉದ್ದೇಶದಿಂದ ಅನ್ನ ಭಾಗ್ಯ ಜಾರಿ ಮಾಡಿದೆ ಎಂದು ವಿವರಿಸಿದರು.
ಹೀಗಾಗಿ ಮಹಾನ್ ಚೇತನ ಬಾಬು ಜಗಜೀವನ್ ರಾಮ್ ಅವರ ಕಾಳಜಿಗಳನ್ನು ಸ್ಮರಿಸಬೇಕು. ಅವರು ಹಾಕಿಕೊಟ್ಟರುವ ಹೆಜ್ಜೆ ಗುರುತುಗಳನ್ನು ಪಾಲಿಸಬೇಕು. ಜಗಜೀವನ್ ರಾಮ್ ಮತ್ತು ಅಂಬೇಡ್ಕರ್ ಇಬ್ಬರಿಗೂ ಸಮಾಜದ ಕಷ್ಟ ಗೊತ್ತಿತ್ತು. ಈ ಕಷ್ಟಗಳಿಗೆ ಪರಿಹಾರ ಕಂಡುಕೊಳ್ಳುವ ಮಾರ್ಗವಾಗಿ ಸಂವಿಧಾನ ಬಂತು, ನಮಗೆಲ್ಲಾ ಶಿಕ್ಷಣ ಸಿಕ್ಕಿತು ಎಂದರು.