ಕಾಂಗ್ರೆಸ್‌ ವಿರುದ್ಧ ಯುದ್ಧ ಆರಂಭ, ನನ್ನನ್ನು ಕೆಣಕಬೇಡಿ : ಡಿಕೆಶಿ ವಿರುದ್ಧ ಕುಮಾರಸ್ವಾಮಿ ಆಕ್ರೋಶ

Update: 2025-04-05 18:56 IST
ಕಾಂಗ್ರೆಸ್‌ ವಿರುದ್ಧ ಯುದ್ಧ ಆರಂಭ, ನನ್ನನ್ನು ಕೆಣಕಬೇಡಿ : ಡಿಕೆಶಿ ವಿರುದ್ಧ ಕುಮಾರಸ್ವಾಮಿ ಆಕ್ರೋಶ

 ಎಚ್‌.ಡಿ.ಕುಮಾರಸ್ವಾಮಿ 

  • whatsapp icon

ಬೆಂಗಳೂರು : ರಾಜ್ಯದ ಜನರನ್ನು ಕಿತ್ತು ತಿನ್ನುತ್ತಿರುವ ಈ ಜನ ವಿರೋಧಿ ಸರಕಾರದ ವಿರುದ್ಧ ಇಂದಿನಿಂದ ನೇರ ಯುದ್ಧ ಆರಂಭ ಮಾಡುತ್ತಿದ್ದೇನೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಗುಡುಗಿದರು.

ಶನಿವಾರ ನಗರದಲ್ಲಿರುವ ಜೆಡಿಎಸ್ ಕಚೇರಿ(ಜೆ.ಪಿ.ಭವನ)ಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸುಖಾಸುಮ್ಮನೆ ನನ್ನನ್ನು ಕೆಣಕಬೇಡಿ. ನಾನು ಕನಕಪುರದಲ್ಲಿ ಮಾತ್ರ ಬಂಡೆ ಒಡೆದಿದ್ದೇನೆ, ಬಳ್ಳಾರಿಗೂ ನನಗೂ ಏನು ಸಂಬಂಧ ಎಂದು ಹೇಳಿಕೊಂಡಿದ್ದಾರೆ. ನನ್ನ ಬಳಿ ಟನ್ ಗಟ್ಟಲೆ ದಾಖಲೆಗಳು ಇವೆ. ಗಾಳಿಯಲ್ಲಿ ಗುಂಡು ಹೊಡೆಯುತ್ತಿಲ್ಲ. ಇರುವ ಸತ್ಯ ಹೇಳುತ್ತಿದ್ದೇನೆ ಎಂದು ಡಿ.ಕೆ.ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು.

2003-2004ರಲ್ಲಿ ಎಸ್.ಎಂ.ಕೃಷ್ಣ ಸರಕಾರದಲ್ಲಿ ನಗರಾಭಿವೃದ್ಧಿ ಸಚಿವರಾಗಿದ್ದ ಅವರು, ಅದಿರಿನ ಮಣ್ಣಿನ ನೆಪದಲ್ಲಿ ಸಾವಿರಾರು ಟನ್ ಕಬ್ಬಿಣದ ಅದಿರನ್ನು ಬಳ್ಳಾರಿಯಲ್ಲಿ ಕದ್ದು ಸಾಗಿಸಿದರು. ಆ ಅದಿರು ಎಲ್ಲಿಗೆ ಹೋಯಿತು? ಏನು ಮಾಡಿದರು. ಅವರು ಯಾರಿಗೆಲ್ಲ ಪತ್ರ ಬರೆದು ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ ಎಂಬ ಬಗ್ಗೆ ನನ್ನ ಬಳಿ ದಾಖಲೆಗಳು ಇವೆ ಎಂದು ಡಿ.ಕೆ.ಶಿವಕುಮಾರ್ ವಿರುದ್ಧ ಅವರು ಕಿಡಿಗಾರಿದರು.

ಈ ಉಪ ಮುಖ್ಯಮಂತ್ರಿ ನನ್ನನ್ನು ಕೆಣಕುತ್ತಿದ್ದಾರೆ. ಸುಖಾಸುಮ್ಮನೆ ನನ್ನ ವಿರುದ್ಧ ರಾಜಕೀಯ ಹಗೆತನ ಸಾಧಿಸುತ್ತಿದ್ದಾರೆ. ನಾನು ಸುಮ್ಮನಿರಲು ಸಾಧ್ಯ ಇಲ್ಲ ಅಲ್ಲವೇ? ಅವರ ಒಂದೊಂದೇ ಹಗರಣಗಳನ್ನು ಬಯಲಿಗೆ ಎಳೆಯುತ್ತೇನೆ. ಅವರು ಹಗರಣಗಳ ಮಹಾನಾಯಕ ಎಂದು ಕುಮಾರಸ್ವಾಮಿ ಟೀಕಿಸಿದರು.

ಉಪ ಮುಖ್ಯಮಂತ್ರಿ ಏಳು ಕಂಪನಿಗಳ ಹೆಸರಿನಲ್ಲಿ ವ್ಯವಹಾರ ನಡೆಸಿದ್ದಾರೆ. ಎಲ್ಲಾ ದಾಖಲೆಗಳು ಇವೆ. ಅದಷ್ಟು ಬೇಗ ಬಿಡುಗಡೆ ಮಾಡುತ್ತೇನೆ. ನಾನು ಯುವಕನಾಗಿದ್ದಾಗ ಜೀವನೋಪಾಯಕ್ಕಾಗಿ ಬೆಂಗಳೂರಿನ ಹೊಂಬೇಗೌಡನಗರ, ಸುಧಾಮನಗರ ಮತ್ತು ವಿಲ್ಸನ್ ಗಾರ್ಡನ್ ವಾರ್ಡ್‌ಗಳಲ್ಲಿ ಕಸ ಎತ್ತುವ ಗುತ್ತಿಗೆ ತೆಗೆದುಕೊಂಡಿದ್ದೆ. ಆಮೇಲೆ ನಮ್ಮ ತಂದೆ ಬೇಡ ಎಂದು ತಾಕೀತು ಮಾಡಿದ ಮೇಲೆ ಅದನ್ನು ಬಿಟ್ಟೆ ಎಂದು ಅವರು ಹೇಳಿದರು.

ಬಿಬಿಎಂಪಿ ಕಸದ ಗುತ್ತಿಗೆ ನೀಡುವುದರಲ್ಲಿ 15 ಸಾವಿರ ಕೋಟಿ ರೂ. ಲೂಟಿ ಹೊಡೆಯಲು ಹೊರಟಿದ್ದರು. ಮೂವತ್ತು ವರ್ಷಗಳಷ್ಟು ಸುದೀರ್ಘ ಅವಧಿಗೆ ಬೆಂಗಳೂರಿನ ಕಸ ಎತ್ತಲು ಚೆನ್ನೈನ ಒಬ್ಬ ವ್ಯಕ್ತಿಗೆ ಗುತ್ತಿಗೆ ನೀಡಿ, ಪ್ರತಿ ಟನ್ ಕಸ ಎತ್ತಲು 6500 ರೂ.ಕ್ಕಿಂತ ಹೆಚ್ಚು ಮೊತ್ತವನ್ನು ಪಾವತಿ ಮಾಡಿ ಅಲ್ಲಿಂದ ಕಮಿಷನ್ ಹೊಡೆಯಲು ಮುಂದಾಗಿದ್ದರು ಎಂದು ಕುಮಾರಸ್ವಾಮಿ ದೂರಿದರು.

ಸರಕಾರದಲ್ಲಿ ಘಜ್ನಿ, ಘೋರಿ ಇದ್ದಾರೆ: ರಾಜ್ಯದಲ್ಲಿ ನಡೆಯುತ್ತಿರುವ ಈ ಸರಕಾರದ ಅಕ್ರಮಗಳು, ದರೋಡೆಗಳು ಮಿತಿಮೀರಿವೆ. ವಿಧಾನಸೌಧದ ಮೂರನೇ ಮಹಡಿಯಲ್ಲಿ ಘಜ್ನಿ ಮುಹಮ್ಮದ್, ಘೋರಿ ಮುಹಮ್ಮದ್ ಹಾಗೂ ಮಲ್ಲಿಖಾಪರ್‌ ಇದ್ದಾರೆ. ಅವರನ್ನು ನಾಚುವ ರೀತಿಯಲ್ಲಿ ಕೊಳ್ಳೆ ಹೊಡೆಯುತ್ತಿದ್ದಾರೆ. ಹನಿಟ್ರ್ಯಾಪ್, ಸುಪಾರಿ ಕೊಲೆ ಬಗ್ಗೆ ಚರ್ಚೆ ಆಗುತ್ತಿದೆ. ಎಂತಹ ಪರಿಸ್ಥಿತಿಗೆ ಬಂದಿದ್ದಾರೆ ಇವರು ಎಂದು ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು.

ಕುಮಾರಸ್ವಾಮಿ ಹೆದರಲ್ಲ :

40 ವರ್ಷಗಳ ಹಿಂದೆಯೇ ನಾನು ಬಿಡದಿಯಲ್ಲಿ ಭೂಮಿ ಖರೀದಿ ಮಾಡಿದ್ದೆ. ಅಧಿಕಾರಿಗಳನ್ನು ದುರುಪಯೋಗ ಮಾಡಿಕೊಂಡು ರಾಜ್ಯದಲ್ಲಿ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ನಾನು ಮಾಜಿ ಪ್ರಧಾನಿ ಮಗ, ಎರಡು ಬಾರಿ ಮುಖ್ಯಮಂತ್ರಿ ಆಗಿದ್ದೆ. ನಾನು ನಾಲ್ಕು ಎಕರೆ ಜಮೀನನ್ನ ಒತ್ತುವರಿ ಮಾಡಿಕೊಳ್ಳುಬೇಕಾ? ಎಂದು ಅವರು ಪ್ರಶ್ನಿಸಿದರು.

70 ಎಕರೆ ಒತ್ತುವರಿ ಎಂದು ಯಾರೋ ಸಮಾಜ ಪರಿವರ್ತನೆ ಮಾಡುವ ವ್ಯಕ್ತಿ ಹೇಳಿದ್ದಾನೆ. ಬಂದು ತೋರಿಸಲಿ. ನಾನು ಅನುಭವದಲ್ಲಿ ಇರುವ ಭೂಮಿಯೇ 40 ರಿಂದ 42 ಎಕರೆ. ಅತಿಕ್ರಮಣ ಮಾಡಿಕೊಂಡಿದ್ದರೆ ದಾಖಲೆ ಬಿಡುಗಡೆ ಮಾಡಲಿ. ಈ ಸರಕಾರದಲ್ಲಿರುವವರು ನಾನು ಅಪರಾಧಿ ಎಂದು ಅಪಪ್ರಚಾರ ಮಾಡುವುದಕ್ಕೆ ಹೊರಟ್ಟಿದ್ದಾರೆ. ಇದಕ್ಕೆಲ್ಲ ಕುಮಾರಸ್ವಾಮಿ ಹೆದರಲ್ಲ. ಅಧಿಕಾರ ಯಾರಿಗೂ ಶಾಶ್ವತ ಅಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಮುಸ್ಲಿಂ ಸಮುದಾಯಕ್ಕೆ ಗುತ್ತಿಗೆಯಲ್ಲಿ ಶೇ.4ರಷ್ಟು ಮೀಸಲಾತಿ ಕೊಡಲು ಹೊರಟಿದ್ದೀರಲ್ಲ. ಕ್ರೆಡೆಲ್, ನಿರ್ಮಿತಿ ಕೇಂದ್ರ ಎಲ್ಲಾ ಯಾಕೆ ಇಟ್ಟುಕೊಂಡಿದ್ದೀರಿ? ಜನಗಳಿಗೆ ಈ ಮಟ್ಟಕ್ಕೆ ಟೋಪಿ ಹಾಕಲು ಹೊರಟಿದ್ದೀರಾ? ಇಲ್ಲಾ ಸಾಬರನ್ನು ಉದ್ದಾರ ಮಾಡಲು ಹೊರಟಿದ್ದೀರಾ? ಈ ವಿಚಾರದಲ್ಲಿ ಬಿಜೆಪಿ ಸ್ನೇಹಿತರಿಗೆ ಕಾಂಗ್ರೆಸ್ ನ ತಾಂತ್ರಿಕ ತಪ್ಪುಗಳನ್ನು ಹುಡುಕುವಂತೆ ಸಲಹೆ ನೀಡಿದ್ದೇನೆ ಎಂದು ಕುಮಾರಸ್ವಾಮಿ ತಿಳಿಸಿದರು.

ಜನಾಂದೋಲನ: ಬೆಂಗಳೂರಿನ 198 ವಾರ್ಡ್ ಗಳಲ್ಲಿಯೂ ನಮಗೆ ಶಕ್ತಿ ಇಲ್ಲ. ಆದರೆ ಇರುವ ಅಲ್ಪ ಸ್ವಲ್ಪ ಕಾರ್ಯಕರ್ತರ ಶಕ್ತಿ ಬಳಸಿಕೊಂಡು ಪಕ್ಷವನ್ನು ಮುನ್ನಡೆಸುತ್ತೇವೆ. ಬೆಂಗಳೂರಿನಲ್ಲಿ ಆಗುತ್ತಿರುವ ಅನಾಹುತ, ಮಾಡಬೇಕಾದ ಕೆಲಸಗಳ ಬಗ್ಗೆ ಜನಾಂದೋಲನ ಮಾಡುತ್ತೇವೆ ಎಂದು ಅವರು ಹೇಳಿದರು.

ಜೆಡಿಎಸ್-ಬಿಜೆಪಿ ಹೊಂದಾಣಿಕೆ ಸಮಸ್ಯೆ ಇಲ್ಲ: ಬಿಜೆಪಿ ಜೊತೆ ಮೈತ್ರಿ ಉತ್ತಮವಾಗಿದೆ. ಯಾವ ಹೊಂದಾಣಿಕೆಯ ಸಮಸ್ಯೆ ಇಲ್ಲ. ಸಮನ್ವಯ ಸಮಿತಿ ರಚನೆ ಬಗ್ಗೆ ಸುರೇಶ್ ಬಾಬು ಅವರ ಅಭಿಪ್ರಾಯ ಹೇಳಿದ್ದಾರೆ. ನಿಖಿಲ್ ಕೂಡ ಮಾತನಾಡಿದ್ದಾರೆ. ನಾನು ಈ ಬಗ್ಗೆ ಬಿಜೆಪಿ ನಾಯಕರ ಜತೆ ಮಾತನಾಡುತ್ತೇನೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವ ಆಲ್ಕೋಡ ಹನುಮಂತಪ್ಪ, ಶಾಸಕ ನೇಮಿರಾಜ್ ನಾಯಕ, ವಿಧಾನ ಪರಿಷತ್ ಸದಸ್ಯರಾದ ಭೋಜೇಗೌಡ, ಜವರಾಯ ಗೌಡ, ಜೆಡಿಎಸ್ ನಗರ ಘಟಕ ಅಧ್ಯಕ್ಷ ಎಚ್.ಎಂ.ರಮೇಶ್ ಗೌಡ, ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ರಶ್ಮಿ ರಾಮೇಗೌಡ, ವಿಧಾನ ಪರಿಷತ್ ಮಾಜಿ ಸದಸ್ಯ ಚೌಡರೆಡ್ಡಿ ತೂಪಲ್ಲಿ, ನಗರ ಘಟದ ಮಹಿಳಾ ವಿಭಾಗದ ಅಧ್ಯಕ್ಷೆ ಶೈಲಜಾ ರಾವ್ ಮುಂತಾದವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News