ಜೂನ್ ಅಂತ್ಯದೊಳಗೆ ಪಾದರಾಯನಪುರ-ಹೊಸಹಳ್ಳಿ ನಡುವಿನ ರಸ್ತೆ ಮೇಲ್ಸೇತುವೆ ಕಾಮಗಾರಿ ಪೂರ್ಣ : ವಿ.ಸೋಮಣ್ಣ
ಬೆಂಗಳೂರು : ಇಲ್ಲಿನ ಪಾದರಾಯನಪುರ ಮತ್ತು ಹೊಸಹಳ್ಳಿ ನಡುವಿನ ರಸ್ತೆ ಮೇಲ್ಸೇತುವೆ ಕಾಮಗಾರಿ ನಿಂತು ಹೋಗಿದ್ದು, ಈಗ ಕಾಮಗಾರಿಯನ್ನು ಪುನಾರಂಭಿಸಿ ಜೂನ್ ಅಂತ್ಯದೊಳಗೆ ಮೇಲ್ಸೇತುವೆ ಲೋಕಾರ್ಪಣೆ ಮಾಡಲಾಗುವುದು ಎಂದು ರೈಲ್ವೆ ಇಲಾಖೆಯ ರಾಜ್ಯ ಸಚಿವ ವಿ.ಸೋಮಣ್ಣ ಭರವಸೆ ನೀಡಿದ್ದಾರೆ.
ಶನಿವಾರ ಪಾದರಾಯನಪುರ ಮತ್ತು ಹೊಸಹಳ್ಳಿ ನಡುವಿನ ರಸ್ತೆ ಮೇಲ್ಸೇತುವೆ ಕಾಮಗಾರಿ ಪರಿಶೀಲಿಸಿ, ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾದರಾಯನಪುರ ಮತ್ತು ಹೊಸಹಳ್ಳಿ ನಡುವಿನ ರಸ್ತೆ ಮೇಲುಸೇತುವೆಯು ಸುಮಾರು ಎರಡು ವರ್ಷಗಳಿಂದ ಕಾಮಗಾರಿ ನಿಂತು ಹೋಗಿತ್ತು. ಸಂಸದ ತೇಜಸ್ವಿ ಸೂರ್ಯರವರ ಒತ್ತಾಯದ ಮೇರೆಗೆ ಕಾಮಗಾರಿ ಮಾಡಲಾಗುತ್ತಿದೆ ಎಂದರು.
ಮೇಲ್ಸೇತುವೆಯನ್ನು ಮೊದಲಗಿಂತ ಹೆಚ್ಚು ವಿಸ್ತಾರವಾಗಿ ನಿರ್ಮಿಸಲಾಗುತ್ತಿದೆ. ಹೀಗಾಗಿ 12 ಕೋಟಿ ರೂ.ಗಳ ಕಾಮಗಾರಿಯು ಇದೀಗ 18 ಕೋಟಿ ರೂ.ಗೆ ಏರಿಕೆಯಾಗಿದೆ. ಈ ಹೊಸ ಮೇಲ್ಸೇತುವೆ ವಿಜಯನಗರ ಮತ್ತು ಮೈಸೂರು ರಸ್ತೆ ನಡುವೆ ಸಂಪರ್ಕವನ್ನು ಒದಗಿಸುತ್ತದೆ. ಕಾಮಗಾರಿಯನ್ನು ಜೂ.30ರೊಳಗೆ ಮುಗಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಅವರು ಹೇಳಿದರು.
ಲೆವೆಲ್ ಕ್ರಾಸಿಂಗ್ ಮಾಡಲು ಕೇಂದ್ರದಿಂದ ಶೇ.50, ರಾಜ್ಯದಿಂದ ಶೇ.50 ಖರ್ಚು ಮಾಡಬೇಕು. ಇದಕ್ಕೆ ಯಾವುದೇ ರಾಜ್ಯ ಸರಕಾರವು ಸ್ಪಂದನೆ ನೀಡದ ಕಾರಣ ಸಂಪೂರ್ಣ ಹಣವನ್ನು ಕೇಂದ್ರ ಸರಕಾರ ಭರಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿಯವರು ತೀರ್ಮಾನ ಮಾಡಿದ್ದರು. ಅದರಂತೆ ಕರ್ನಾಟಕಕ್ಕೆ 650ಕ್ಕೂ ಮೇಲ್ಪಟ್ಟ ರೈಲುಹಳಿಯ ಮೇಲೆ ಸೇತುವೆ(ಆರ್‌ಒಬಿ) ಕಾಮಗಾರಿ ನಡೆಯುತ್ತಿದೆ. ಇದಕ್ಕೆ ಸಾವಿರಾರು ಕೋಟಿ ರೂ.ಮೊತ್ತವನ್ನು ಕೇಂದ್ರ ಸರಕಾರದಿಂದ ನೀಡಲಾಗುತ್ತಿದೆ ಎಂದು ವಿ. ಸೋಮಣ್ಣ ಹೇಳಿದರು.
ಇದೇ ವೇಳೆ ಕೃಷ್ಣದೇವರಾಯ ಹಾಲ್ಟ್ ನಿಲ್ದಾಣ ಮತ್ತು ನಾಯಂಡಹಳ್ಳಿ ನಿಲ್ದಾಣವನ್ನು ಪರಿಶೀಲಿಸಿ, ಸಾರ್ವಜನಿಕರೊಂದಿಗೆ ಸಂವಾದ ನಡೆಸಿದರು. ಸಂಸದ ತೇಜಸ್ವಿ ಸೂರ್ಯ, ಬೆಂಗಳೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅಮಿತೇಶ್ ಕುಮಾರ್ ಸಿನ್ಹಾ ಮುಂತಾದವರಿದ್ದರು.