‘ಡಿಕೆಶಿ ಅಕ್ರಮಗಳ ಟನ್ ಗಟ್ಟಲೆ ದಾಖಲೆಗಳಿವೆ’ ಎಂದ ಕುಮಾರಸ್ವಾಮಿ; ವಾಹನ ತೆಗೆದುಕೊಂಡು ದಾಖಲೆ ಪಡೆಯಲು ಮುಂದಾದ ‘ಕೈ’ ಕಾರ್ಯಕರ್ತರು
ಬೆಂಗಳೂರು: ‘ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಅಕ್ರಮಗಳ ದಾಖಲೆ ಟನ್ ಗಟ್ಟಲೆ ಇದೆ. ಎಲ್ಲವನ್ನೂ ಬಿಡುಗಡೆ ಮಾಡುತ್ತೇನೆ’ ಎಂಬ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಹೇಳಿಕೆ ವಿರುದ್ಧ ಕಾಂಗ್ರೆಸ್ ಮುಖಂಡರು ಶನಿವಾರ ನಗರದ ಹಳೆ ಕಾಂಗ್ರೆಸ್ ಕಚೇರಿಯಲ್ಲಿ ಪ್ರತಿಭಟನೆ ನಡೆಸಿ ವಾಹನ ತೆಗೆದುಕೊಂಡು ದಾಖಲೆಗಳ ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದಾರೆ.
ಶನಿವಾರ ಈ ಪ್ರತಿಭಟನೆಯಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರು ಯಾವ ದಾಖಲೆ ಕೊಡುತ್ತಾರೋ ಕೊಡಲಿ. ಬೇಕಾದರೆ ಲಾರಿಯನ್ನೇ ಬುಕ್ ಮಾಡಿ ಕಳುಹಿಸಿಕೊಡುತ್ತೇವೆ ಎಂದು ಕಾಂಗ್ರೆಸ್ ಮುಖಂಡರು ಸವಾಲು ಹಾಕಿದ್ದಾರೆ.
ಇದೇ ವೇಳೆಯಲ್ಲಿ ಮಾತನಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಮನೋಹರ್, ಎರಡು ದಿನಗಳ ಹಿಂದೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿಯವರು ಡಿ.ಕೆ.ಶಿವಕುಮಾರ್ ಅವರ ಅಕ್ರಮ ಟನ್ ಗಟ್ಟಲೇ ಇದೆ ದಾಖಲೆ ಸಮೇತ ಬಿಡುಗಡೆ ಮಾಡುತ್ತೇನೆಂದು ಹೇಳಿದ್ದರು. ಕುಮಾರಸ್ವಾಮಿಯವರೇ ನಾವೇ ಲಾರಿ ತೆಗೆದುಕೊಂಡು ನಿಮ್ಮ ಬಳಿ ಬರುತ್ತೇವೆ ನಿಮ್ಮಲ್ಲಿರತಕ್ಕಂತಹ ಭ್ರಷ್ಟಾಚಾರ ದಾಖಲೆಗಳನ್ನು ನಮಗೆ ನೀಡಿದರೆ ನಾವು ಅದನ್ನು ಪಡೆದು ರಾಜ್ಯಪಾಲರಿಗೆ ನೀಡುತ್ತೇವೆ ಎಂದು ವ್ಯಂಗ್ಯವಾಡಿದರು.
ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಪರಿಜ್ಞಾನವಿಲ್ಲದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಭ್ರಷ್ಟಾಚಾರದಲ್ಲಿ ಜೈಲಿಗೆ ಹೋಗುವ ಹಂತದಲ್ಲಿ ಇರುವಂತಹ ಬಿಜೆಪಿಗರು ಹಾಗೂ ಜೆಡಿಎಸ್‍ನ ನಾಯಕರು ಇಬ್ಬರು ಒಂದಾಗಿ ರಾಜ್ಯವನ್ನು ಈಗಾಗಲೇ ದರೋಡೆ ಮಾಡಿದ್ದಾರೆ ಎಂದು ಎಸ್.ಮನೋಹರ್ ಟೀಕಿಸಿದರು.
ಎಚ್.ಡಿ.ಕುಮಾರಸ್ವಾಮಿ ಅವರು ಕೇತಗಾನಹಳ್ಳಿ, ಗಂಗೇನಹಳ್ಳಿ, ಹಲಗೆ ವಡೇರಹಳ್ಳಿ ಹಾಗೂ ಶ್ರೀ ಸಾಯಿ ವೆಂಕಟೇಶ್ವರ ಮಿನರಲ್ಸ್‍ನಲ್ಲಿ ನಡೆದಿರುವ ಅಕ್ರಮದ ಬಗ್ಗೆ ಮೊದಲು ಉತ್ತರ ಕೊಡಲಿ. ಎಚ್.ಡಿ.ಕುಮಾರಸ್ವಾಮಿಯವರು ಕೇಂದ್ರದ ಮಂತ್ರಿಯಾಗಿ ನೈತಿಕತೆಯನ್ನು ಹೊಂದಿರುವ ವ್ಯಕ್ತಿ ಅಲ್ಲ ಎಂಬುದು ಮತ್ತೆ ಸಾಬೀತಾಗಿದೆ ಎಂದು ಎಸ್.ಮನೋಹರ್ ತಿಳಿಸಿದರು.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಎಚ್.ಡಿ.ಕುಮಾರಸ್ವಾಮಿ ಅವರ ಹೇಳಿಕೆಗೆ ಸಂಬಂಧಿಸಿದಂತೆ ವಾಹನದ ಮೂಲಕ ದಾಖಲಾತಿಗಳನ್ನು ಪಡೆಯಲು ತೆರಳುತ್ತಿದ್ದ ಸಂದರ್ಭದಲ್ಲಿ ಪೊಲೀಸರು ಕಾರ್ಯಕರ್ತರನ್ನು ವಶಕ್ಕೆ ಪಡೆದರು. ಇದೇ ಸಂದರ್ಭದಲ್ಲಿ ಕೆಪಿಸಿಸಿ ಮುಖಂಡರಾದ ಎ.ಆನಂದ್, ಎಂ.ಎ ಸಲೀಂ, ಪ್ರಕಾಶ್, ನವೀನ್, ಚಂದ್ರಶೇಖರ್, ಉಮೇಶ್, ರಂಜಿತ್, ಓಬಳೇಶ್, ಚಿನ್ನಿ ಪ್ರಕಾಶ್, ವಾಸು, ಸಂಜಯ್ ಸಶಿಮಠ ಸೇರಿದಂತೆ ಹಲವಾರು ಕಾಂಗ್ರೆಸ್ ಮುಖಂಡರು ಇದ್ದರು.
‘ಕಾಂಗ್ರೆಸ್ ನಾಯಕರು ದಾಖಲೆಗಳನ್ನು ನಮ್ಮ ಕಚೇರಿಗೆ ಲಾರಿ ಕಳುಹಿಸುವ ಬದಲು ನಗರದಲ್ಲಿ ತುಂಬಿರುವ ಕಸವನ್ನು ಎತ್ತಲು ಅದನ್ನು ಬಳಸಿ. ಇದರಿಂದ ನಗರದ ಜನರಿಗೆ ಉಪಯೋಗ ಆಗಲಿದೆ. ಬೆಂಗಳೂರು ಕಸದಿಂದ ನಾರುತ್ತಿದೆ, ನಿಮ್ಮ ಲಾರಿಯಲ್ಲಿ ಆ ಕಸವನ್ನು ತುಂಬಿಕೊಂಡು ಹೋಗಿ ಬೆಂಗಳೂರನ್ನು ಕಸಮುಕ್ತಗೊಳಿಸಿ. ಭ್ರಷ್ಟಾಚಾರದ ಅರೋಪಗಳ ದಾಖಲೆಗಳನ್ನು ಹೊತ್ತ ಒಂದು ಕ್ಯಾಂಟರ್ ಅನ್ನು ನಾವೇ ಕೆಪಿಸಿಸಿ ಕಚೇರಿಗೆ ಕಳುಹಿಸುತ್ತೇವೆ’
-ನಿಖಿಲ್ ಕುಮಾರಸ್ವಾಮಿ, ಜೆಡಿಎಸ್ ಯುವ ಘಟಕದ ಅಧ್ಯಕ್ಷ