ಭಟ್ಕಳ | ಎಫ್ಐಆರ್ ನಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಿದ ನಾಯಕರ ಹೆಸರೇ ಇಲ್ಲ, ಕಾರ್ಯಕರ್ತರದ್ದಷ್ಟೇ ಹೆಸರು!

Update: 2025-04-12 23:40 IST
ಭಟ್ಕಳ | ಎಫ್ಐಆರ್ ನಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಿದ ನಾಯಕರ ಹೆಸರೇ ಇಲ್ಲ, ಕಾರ್ಯಕರ್ತರದ್ದಷ್ಟೇ ಹೆಸರು!
  • whatsapp icon

ಭಟ್ಕಳ: ಭಟ್ಕಳ ಪೊಲೀಸ್ ಠಾಣೆಯೆದುರು ನಡೆದಿದ್ದ ಪ್ರತಿಭಟನೆಯ ಸಂಬಂಧ ಎರಡು ಎಫ್ಐಆರ್ ಗಳು ದಾಖಲಾಗಿದ್ದು, ಈ ಪ್ರತಿಭಟನೆಯಲ್ಲಿ ಹಾಜರಿದ್ದ ಹಾಗೂ ಮೆರವಣಿಗೆಯನ್ನು ಮುನ್ನಡೆಸಿದ್ದ ಪ್ರಮುಖ ಬಿಜೆಪಿ ಹಾಗೂ ಹಿಂದುತ್ವವಾದಿ ನಾಯಕರು ಹೆಸರುಗಳನ್ನು ಕೈಬಿಡಲಾಗಿದೆ. ಇದರಿಂದಾಗಿ, ಪೊಲೀಸ್ ಇಲಾಖೆಯ ನ್ಯಾಯಪರತೆ ಹಾಗೂ ಪಾರದರ್ಶಕತೆ ಕುರಿತು ಪ್ರಜ್ಞಾವಂತ ನಾಗರಿಕರು ಗಂಭೀರ ಪ್ರಶ್ನೆಗಳನ್ನೆತ್ತಿದ್ದಾರೆ.

ಶಿರಸಿಯಲ್ಲಿ ನಡೆದ ರೌಡಿ ಶೀಟರ್ ಗಳ ಪರೇಡ್ ವೇಳೆ ಸಂಘ ಪರಿವಾರದ ಕಾರ್ಯಕರ್ತ ಶ್ರೀನಿವಾಸ್ ನಾಯಕ್ ನ ಮೇಲೆ ಉತ್ತರ ಕನ್ನಡದ ಎಸ್ಪಿ ಎಂ.ನಾರಾಯಣ್ ಹಲ್ಲೆ ನಡೆಸಿದ್ದಾರೆ ಎಂಬ ವರದಿಗಳು ಪ್ರಕಟವಾಗುತ್ತಿದ್ದಂತೆಯೆ, ಎಪ್ರಿಲ್ 8 ಹಾಗೂ 9ರಂದು ಸಂಘಪರಿವಾರದ ಸದಸ್ಯರು ಮೊದಲಿಗೆ ರಾಷ್ಟ್ರೀಯ ಹೆದ್ದಾರಿ 66 ಅನ್ನು ಬಂದ್ ಮಾಡಿ, ನಂತರ, ಪೊಲೀಸ್ ಠಾಣೆಯೆದುರು ಜಮಾಯಿಸುವ ಮೂಲಕ, ಆಕ್ರಮಣಕಾರಿ ಪ್ರತಿಭಟನೆ ನಡೆಸಿದ್ದರು.

ಈ ಪ್ರತಿಭಟನೆಯ ವೇಳೆ ಭಟ್ಕಳದ ಮಾಜಿ ಶಾಸಕ ಹಾಗೂ ಬಿಜೆಪಿ ನಾಯಕ ಸುನೀಲ್ ನಾಯ್ಕ್, ಭಟ್ಕಳ ಬಿಜೆಪಿ ಘಠಕದ ಮಾಜಿ ಅಧ್ಯಕ್ಷ ಗೋವಿಂದ ನಾಯ್ಕ್ ಹಾಗೂ ಹಿಂದುತ್ವವಾದಿ ನಾಯಕ ಹಾಗೂ ಬಿಜೆಪಿಯ ಜಿಲ್ಲಾ ಕಾರ್ಯದರ್ಶಿ ಶ್ರೀಕಾಂತ್ ಉಪಸ್ಥಿತರಿದ್ದದ್ದನ್ನು ಛಾಯಾಚಿತ್ರ ಹಾಗೂ ವಿಡಿಯೊ ಸಾಕ್ಷಿಗಳು ಸ್ಪಷ್ಟವಾಗಿ ತೋರಿಸುತ್ತಿದ್ದರೂ, ಅವರು ಹೆಸರುಗಳನ್ನು ಎಫ್ಐಆರ್ ನಲ್ಲಿ ಉಲ್ಲೇಖಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ. ಅದರ ಬದಲು, ಸಾಕಷ್ಟು ಪರಿಚಿತರಲ್ಲದ ಕಾರ್ಯಕರ್ತರು ಹಾಗೂ ಹತ್ತಾರು ಅಪರಿಚಿತ ವ್ಯಕ್ತಿಗಳು ಎಂದು ಸುಲಭವಾಗಿ ಹಣೆಪಟ್ಟಿ ಹಚ್ಚಿರುವ ವ್ಯಕ್ತಿಗಳ ಹೆಸರುಗಳು ಎಫ್ಐಆರ್ ನಲ್ಲಿ ಕಾಣಿಸಿಕೊಂಡಿದೆ.

ಹೀಗಾಗಿ, ಬಿಜೆಪಿ ಮತ್ತು ಸಂಘ ಪರಿವಾರದ ನಾಯಕರು ಪ್ರತಿಭಟನೆಯನ್ನು ಸ್ಪಷ್ಟವಾಗಿ ಮುನ್ನಡೆಸಿದ್ದರೂ, ಅವರನ್ನು ಹೇಗೆ ಅಪರಿಚಿತರು ಎಂದು ಉಲ್ಲೇಖಿಸಲಾಯಿತು ಎಂಬ ಗಂಭೀರ ಪ್ರಶ್ನೆಗಳೆದ್ದಿವೆ.

ಪೊಲೀಸರೇನಾದರೂ ಒತ್ತಡಕ್ಕೊಳಗಾಗಿ ಅಥವಾ ಬೇಕೆಂದೇ ರಾಜಕೀಯ ವ್ಯಕ್ತಿಗಳನ್ನು ಶಿಫಾರಸು ಹಾಗೂ ಪ್ರಭಾವದ ಕಾರಣಕ್ಕೆ ರಕ್ಷಿಸಿದರೆ? ಅಥವಾ ತಮಗೆ ತಿರುಗುಬಾಣವಾಗುವುದನ್ನು ಅಥವಾ ರಾಜಕೀಯ ಸಮಸ್ಯೆಗಳನ್ನು ತಪ್ಪಿಸಿಕೊಳ್ಳಲು ಪೊಲೀಸ್ ಅಧಿಕಾರಿಗಳೇನಾದರೂ ಉದ್ದೇಶಪೂರ್ವಕವಾಗಿ ಶಕ್ತಿಶಾಲಿ ವ್ಯಕ್ತಿಗಳ ಹೆಸರುಗಳನ್ನು ಕೈಬಿಟ್ಟರೆ ಎಂಬ ಪ್ರಶ್ನೆಗಳೂ ಪ್ರಜ್ಞಾವಂತರಿಂದ ಕೇಳಿಬರುತ್ತಿದೆ.

ಪೊಲೀಸ್ ಸಬ್ ಇನ್ಸ್ ಪೆಕ್ಟರ್ ನವೀನ್ ಎಸ್. ನಾಯ್ಕ್ ಅವರು ದಾಖಲಿಸಿಕೊಂಡಿರುವ ಎಫ್ಐಆರ್ ಪ್ರಕಾರ, ಅದರಲ್ಲಿ 11 ಮಂದಿ ಹೆಸರುಗಳನ್ನು ಉಲ್ಲೇಖಿಸಲಾಗಿದ್ದು, ಅವುಗಳಲ್ಲಿ ಯಾವುದೇ ಪ್ರಮುಖ ನಾಯಕರ ಹೆಸರುಗಳನ್ನು ಉಲ್ಲೇಖಿಸಲಾಗಿಲ್ಲ. ಪೊಲೀಸ್ ಸಬ್ ಇನ್ಸ್ ಪೆಕ್ಟರ್ ತಿಮ್ಮಪ್ಪ ಬೆಡುಮನೆ ದಾಖಲಿಸಿಕೊಂಡಿರುವ ಎರಡನೆ ಎಫ್ಐಆರ್ ನಲ್ಲೂ ಕೂಡಾ ಇದೇ ಧೋರಣೆಯನ್ನು ಅನುಸರಿಸಲಾಗಿದೆ. ಘೋಷಣೆಗಳನ್ನು ಕೂಗುತ್ತಿದ್ದ ಹಾಗೂ ಪ್ರತಿಭಟನೆಯ ಮುಂಚೂಣಿ ಸಾಲಿನಲ್ಲಿದ್ದ ಚಿರಪರಿಚಿತ ನಾಯಕರ ಹೆಸರುಗಳನ್ನು ಅಧಿಕೃತ ದಾಖಲೆಗಳಲ್ಲಿ ಎಲ್ಲಿಯೂ ಉಲ್ಲೇಖಿಸಲಾಗಿಲ್ಲ. ಅಲ್ಲದೆ, ಈ ಎರಡೂ ಎಫ್ಐಆರ್ ಗಳಲ್ಲಿ ಕನಿಷ್ಠ ಪಕ್ಷ 60 ಮಂದಿ ಪ್ರತಿಭಟನಾಕಾರರನ್ನು ಅಪರಿಚಿತರು ಎಂದು ಪೊಲೀಸರು ನಮೂದಿಸಿದ್ದಾರೆ.

ಪ್ರತಿಭಟನಾಕಾರರನ್ನು ಗುರುತಿಸಲು ನಾವು ಸಿಸಿಟಿವಿ ದೃಶ್ಯಾವಳಿಗಳು ಹಾಗೂ ವಿಡಿಯೊ ತುಣುಕುಗಳನ್ನು ಪರಿಶೀಲಿಸುತ್ತಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ. ಆದರೆ, ಪ್ರತಿಭಟನೆಯ ನೇತೃತ್ವವನ್ನು ಸಾಕಷ್ಟು ಚಿರಪರಿಚಿತ ವ್ಯಕ್ತಿಗಳೇ ವಹಿಸಿದ್ದರೂ, ಅವರು ತಮ್ಮ ಹೆಸರುಗಳು ಎಫ್ಐಆರ್ ನಲ್ಲಿ ದಾಖಲಾಗುವುದರಿಂದ ತಪ್ಪಿಸಿಕೊಳ್ಳಲು ಹೇಗೆ ಸಾಧ್ಯತವಾಯಿತು ಎಂದು ಪ್ರಜ್ಞಾವಂತ ನಾಗರಿಕರು ಪ್ರಶ್ನಿಸುತ್ತಿದ್ದಾರೆ. ಈ ಪ್ರತಿಭಟನಾಕಾರರು ಅಪರಿಚಿತರಾಗಿರಲಿಲ್ಲ. ಅವರೆಲ್ಲ ಅನುಭವಿ ರಾಜಕಾರಣಿಗಳು ಹಾಗೂ ಹೋರಾಟಗಾರರಾಗಿದ್ದು, ಸಾರ್ವಜನಿಕ ವೇದಿಕೆಗಳು ಹಾಗೂ ಮಾಧ್ಯಮಗಳಲ್ಲಿ ಪದೇ ಪದೇ ಕಾಣಿಸಿಕೊಳ್ಳುತ್ತಿರುತ್ತಾರೆ ಎಂಬುದು ಇಂಥವರ ಆಕ್ಷೇಪವಾಗಿದೆ.

ಇದು ಆಯ್ದ ಮರೆವೊ ಅಥವಾ ಆಯ್ದ ರಕ್ಷಣೆಯೊ?

ಪೊಲೀಸರು ಪಕ್ಷಾತೀತವಾಗಿ ವರ್ತಿಸಬೇಕು ಹಾಗೂ ನೆಲದ ಕಾನೂನನ್ನು ಎತ್ತಿ ಹಿಡಿಯಬೇಕು ಎಂಬ ನಿರೀಕ್ಷೆಗಳಿರುವ ಹೊತ್ತಿನಲ್ಲಿ ಇಂತಹ ಕೈಬಿಡುವ ಕ್ರಮಗಳಿಂದ ಪೊಲೀಸ್ ಇಲಾಖೆಯ ಸಾರ್ವಜನಿಕ ವಿಶ್ವಾವಸಾರ್ಹತೆ ಹಾಗೂ ತಟಸ್ಥತತೆ ಬಗ್ಗೆ ಅನುಮಾನಗಳು ಮೂಡುತ್ತವೆ ಎಂದು ಪ್ರಜ್ಞಾವಂತ ನಾಗರಿಕರು ಕಳವಳ ವ್ಯಕ್ತಪಡಿಸಿದ್ದಾರೆ.

ನ್ಯಾಯವು ಬಲಿಷ್ಠರು ಹಾಗೂ ದುರ್ಬಲರ ನಡುವೆ ತಾರತಮ್ಯ ತೋರಬಾರದು ಒಂದು ವೇಳೆ ಸಾಮಾನ್ಯ ಕಾರ್ಯಕರ್ತರ ವಿರುದ್ಧ ಎಫ್ಐಆರ್ ದಾಖಲಾಗುವುದಾದರೆ, ಅವರಿಗೆ ಮಾರ್ಗದರ್ಶನ ನೀಡಿದ ನಾಯಕರನ್ನೂ ಉತ್ತರದಾಯಿಗಳನ್ನಾಗಿಸಬೇಕು. ಕಾನೂನು ಕೇವಲ ಕ್ರಮ ಮಾತ್ರ ತೆಗೆದುಕೊಳ್ಳಬಾರದು, ಬದಲಿಗೆ, ಅದು ಯಾವುದೇ ಭೀತಿ ಅಥವಾ ಪಕ್ಷಪಾತವಿಲ್ಲದೆ ಕೆಲಸ ನಿರ್ವಹಿಸುವುದು ಕಣ್ಣಿಗೆ ಕಾಣಬೇಕು ಎಂಬುದು ಇಂಥವರ ಆಗ್ರಹವಾಗಿದೆ.

ಒಂದು ವೇಳೆ ಪ್ರಮುಖ ವ್ಯಕ್ತಿಗಳಿಗೆ ಈಗಲೂ ಅಪರಿಚಿತರು ಎಂದು ಹಣೆಪಟ್ಟಿ ಹಚ್ಚುವುದಾದರೆ, ಇದು ಕೇವಲ ಪೊಲೀಸ್ ವ್ಯವಸ್ಥೆಯ ವೈಫಲ್ಯ ಮಾತ್ರವಲ್ಲ; ಬದಲಿಗೆ, ಪ್ರಾಮಾಣಿಕತೆಯ ವೈಫಲ್ಯ ಕೂಡಾ ಎಂಬುದು ಪ್ರಜ್ಞಾವಂತರ ಅಭಿಪ್ರಾಯವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Contributor - -ಇಸ್ಮಾಯೀಲ್‌ ಝೌರೆಝ್‌

contributor

Similar News