‘ಜಾತಿ ಗಣತಿ ವರದಿ ಅನುಷ್ಠಾನ’ ಚುನಾವಣಾ ಪ್ರಣಾಳಿಕೆಯಲ್ಲಿನ ಭರವಸೆ : ಬಿ.ಕೆ.ಹರಿಪ್ರಸಾದ್
ಬಿ.ಕೆ.ಹರಿಪ್ರಸಾದ್
ಬೆಂಗಳೂರು: ಜಾತಿ ಗಣತಿ ವರದಿ ಅನುಷ್ಠಾನ ಮಾಡುವುದು ನಮ್ಮ ಚುನಾವಣಾ ಪ್ರಣಾಳಿಕೆಯಲ್ಲಿನ ಭರವಸೆಯಾಗಿದೆ. ತಡವಾದರೂ ಈ ವರದಿಯನ್ನು ಅನುಷ್ಠಾನ ಮಾಡುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿರುವ ರಾಜ್ಯ ಸರಕಾರದ ಕ್ರಮ ಸ್ವಾಗತಾರ್ಹ ಎಂದು ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ತಿಳಿಸಿದರು.
ಜಾತಿ ಗಣತಿ ವರದಿಗೆ ಹಿರಿಯ ಕಾಂಗ್ರೆಸ್ ಶಾಸಕ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಡಾ.ಶಾಮನೂರು ಶಿವಶಂಕರಪ್ಪ ವಿರೋಧ ವ್ಯಕ್ತಪಡಿಸುತ್ತಿರುವ ಕುರಿತು ರವಿವಾರ ನಗರದಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಅವರು ಈ ಮೇಲಿನಂತೆ ಪ್ರತಿಕ್ರಿಯಿಸಿದರು.
ಜಾತಿ ಗಣತಿ ವರದಿಗೆ ವಿರೋಧ ವ್ಯಕ್ತಪಡಿಸುವವರು ಪ್ರಣಾಳಿಕೆ ಸಿದ್ಧಪಡಿಸುವಾಗಲೇ ವಿರೋಧ ಮಾಡಬೇಕಿತ್ತು. ಪ್ರಣಾಳಿಕೆಯನ್ನು ರಹಸ್ಯವಾಗಿ ಸಿದ್ಧಪಡಿಸಿಲ್ಲ. ಅದನ್ನು ಜನತೆಯ ಮುಂದೆ ಇಟ್ಟು ನಾವು ಮತಯಾಚನೆ ಮಾಡಿದ್ದೇವೆ. ಜನ ನಮಗೆ ಆಶೀರ್ವಾದ ಮಾಡಿದ್ದಾರೆ ಎಂದು ಹರಿಪ್ರಸಾದ್ ಹೇಳಿದರು.
ಜಾತಿ ಗಣತಿ ವರದಿಯನ್ನು ಸಚಿವ ಸಂಪುಟದ ಮುಂದೆ ಮಂಡಿಸಲಾಗಿದೆ. ಈ ಸಂಬಂಧ ನಮ್ಮ ಪಕ್ಷದವರಿಗೆ ಏನಾದರೂ ವಿರೋಧ ಇದ್ದರೆ ಅದನ್ನು ಶಾಸಕಾಂಗ ಪಕ್ಷದ ಸಭೆಯಲ್ಲಿ ಚರ್ಚೆ ಮಾಡಲಿ. ಅದನ್ನು ಬಿಟ್ಟು, ರಾಜ್ಯ ಸರಕಾರಕ್ಕೆ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಬೆದರಿಕೆ ಹಾಕುವುದು ಒಳ್ಳೆಯ ನಡವಳಿಕೆಯಲ್ಲ ಎಂದು ಅವರು ತಿಳಿಸಿದರು.
ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿ ಕುರಿತು ಚರ್ಚೆ ನಡೆಸಿ ಅಂಗೀಕರಿಸಲಾಗುತ್ತದೆ. ಈ ವರದಿಯಲ್ಲಿನ ಅಂಕಿ ಅಂಶಗಳನ್ನು ನೋಡಿ ಯಾವ ಸಮುದಾಯಗಳು ಬೇಸರಪಟ್ಟುಕೊಳ್ಳುವ ಅವಶ್ಯಕತೆಯಿಲ್ಲ. ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸರಕಾರದ ಸೌಲಭ್ಯ ಸಿಗಬೇಕು ಅನ್ನೋದು ನಮ್ಮ ಸರಕಾರದ ನಿಲುವು. ಅದಕ್ಕಾಗಿ, ಆಯಾ ಸಮುದಾಯಗಳ ಸ್ಥಿತಿಗತಿಗಳ ಬಗ್ಗೆಯೂ ಸರಕಾರಕ್ಕೆ ಗೊತ್ತಾಗಬೇಕಲ್ಲವೇ? ಎಂದು ಹರಿಪ್ರಸಾದ್ ಪ್ರಶ್ನಿಸಿದರು.
ಜಾತಿ ಗಣತಿ ವರದಿಯನ್ನು ಮುಂದಿಟ್ಟುಕೊಂಡು ನಾವು ಜನರನ್ನು ವಿಭಜನೆ ಮಾಡುತ್ತಿದ್ದೇವೆ ಎಂದು ಬಿಜೆಪಿಯವರು ಆರೋಪಿಸುತ್ತಿದ್ದಾರೆ. ಆದರೆ, ವಾಸ್ತವವಾಗಿ ಜನರು ಹಾಗೂ ಸಮುದಾಯಗಳನ್ನು ವಿಭಜನೆ ಮಾಡುತ್ತಿರುವುದು ಬಿಜೆಪಿಯವರೇ ಹೊರತು ನಾವಲ್ಲ ಎಂದು ಅವರು ತಿರುಗೇಟು ನೀಡಿದರು.
ಕೇಂದ್ರ ಸರಕಾರವು ಇಡೀ ದೇಶದಲ್ಲಿ ಜಾತಿ ಗಣತಿ ಮಾಡಿದರೆ ಅದಕ್ಕೆ ನಾವು ವಿರೋಧ ವ್ಯಕ್ತಪಡಿಸುವುದಿಲ್ಲ. ಈ ವರದಿಯೂ ಯಾವುದೇ ಸಮುದಾಯದ ವಿರುದ್ಧವಾಗಿಲ್ಲ. ಕಾಂಗ್ರೆಸ್ ಪಕ್ಷವು ಎಲ್ಲರನ್ನೂ ಸಮಾನವಾಗಿ ಕಾಣುವ ಹಾಗೂ ಜೊತೆಯಲ್ಲಿ ಕರೆದುಕೊಂಡು ಹೋಗುವ ಪಕ್ಷವಾಗಿದೆ ಎಂದು ಹರಿಪ್ರಸಾದ್ ಹೇಳಿದರು.