ವಕೀಲೆ ಎಸ್.ಜೀವಾ ಆತ್ಮಹತ್ಯೆ ಪ್ರಕರಣ: ಹೈಕೋರ್ಟ್‍ಗೆ ಅಂತಿಮ ವರದಿ ಸಲ್ಲಿಸಿದ ಎಸ್‍ಐಟಿ

Update: 2025-04-13 18:36 IST
ವಕೀಲೆ ಎಸ್.ಜೀವಾ ಆತ್ಮಹತ್ಯೆ ಪ್ರಕರಣ: ಹೈಕೋರ್ಟ್‍ಗೆ ಅಂತಿಮ ವರದಿ ಸಲ್ಲಿಸಿದ ಎಸ್‍ಐಟಿ
  • whatsapp icon

ಬೆಂಗಳೂರು : ಭೋವಿ ಅಭಿವೃದ್ಧಿ ನಿಗಮದಲ್ಲಿನ ಅಕ್ರಮದ ಕುರಿತು ತನಿಖೆ ಎದುರಿಸಿದ್ದ ವಕೀಲೆ ಎಸ್.ಜೀವಾ ಆತ್ಮಹತ್ಯೆ ಪ್ರಕರಣದ ತನಿಖೆ ನಡೆಸಿರುವ ಸಿಐಡಿಯ ಎಸ್‍ಐಟಿ ಒಟ್ಟು 2,300 ಪುಟಗಳ ಅಂತಿಮ ವರದಿಯನ್ನು ಹೈಕೋರ್ಟ್‍ಗೆ ಸಲ್ಲಿಕೆ ಮಾಡಿದೆ.

ಭೋವಿ ಅಭಿವೃದ್ಧಿ ನಿಗಮದ ಅಕ್ರಮ ಪ್ರಕರಣದ ವಿಚಾರಣೆಗೆ ಹಾಜರಾಗಿದ್ದ ಜೀವಾಗೆ ಸಿಐಡಿಯ ಡಿವೈಎಸ್‍ಪಿ ಕನಕಲಕ್ಷ್ಮಿ ಮಾನಸಿಕ ಕಿರುಕುಳ ನೀಡಿದ್ದಾರೆ ಹಾಗೂ 25ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟಿದ್ದಾರೆ ಎಂದು ಮೃತಳ ಸಹೋದರಿ ಸಂಗೀತಾ ಆರೋಪಿಸಿದ್ದರು.

ಜೀವಾ ಬರೆದಿಟ್ಟಿದ್ದ ಸುಮಾರು 10ಕ್ಕೂ ಹೆಚ್ಚು ಪುಟಗಳ ಡೆತ್ ನೋಟ್‍ಗಳ ಸಮೇತ ಅವರ ಸಹೋದರಿ ಸಂಗೀತಾ ಬನಶಂಕರಿ ಠಾಣೆಗೆ ದೂರು ನೀಡಿದ್ದರು. ಈ ದೂರು ಆಧರಿಸಿ ಬನಶಂಕರಿ ಠಾಣೆ ಪೊಲೀಸರು ಎಫ್‍ಐಆರ್ ದಾಖಲಿಸಿದ್ದರು.

ಬಳಿಕ ಪ್ರಕರಣದ ತನಿಖೆಯನ್ನು ಸಿಸಿಬಿ ಪೊಲೀಸರಿಗೆ ವಹಿಸಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಆದೇಶಿಸಿದ್ದರು. ಆ ನಂತರ ತನಿಖೆಯನ್ನು ಎಸ್‍ಐಟಿಗೆ ವಹಿಸಲಾಗಿತ್ತು. ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದ ಎಸ್‍ಐಟಿ ಅಧಿಕಾರಿಗಳು ಮಾರ್ಚ್ 11ರಂದು ಡಿವೈಎಸ್‍ಪಿ ಕನಕಲಕ್ಷ್ಮಿ ಅವರನ್ನು ಬಂಧಿಸಿದ್ದರು.

ಈ ಪ್ರಕರಣದ ತನಿಖಾ ವರದಿ ನೀಡುವಂತೆ ಹೈಕೋರ್ಟ್ ಸೂಚಿಸಿತ್ತು. ತನಿಖಾ ತಂಡದಲ್ಲಿ ಐಪಿಎಸ್ ಅಧಿಕಾರಿಗಳಾದ ವಿನಾಯಕ್ ವರ್ಮಾ, ಅಕ್ಷಯ್ ಮಚೀಂದ್ರ ಹಾಗು ನಿಶಾ ಜೇಮ್ಸ್ ಇದ್ದರು.

ಇನ್ನೂ, ಸಾಕ್ಷಿದಾರರ ಹೇಳಿಕೆ, ವಿಡಿಯೋ ಸಾಕ್ಷ್ಯ ಸೇರಿ ಮತ್ತಿತರ ಸಾಕ್ಷ್ಯಗಳನ್ನು ವರದಿ ಒಳಗೊಂಡಿದೆ. ಜೀವಾರಿಗೆ ಡಿವೈಎಸ್‍ಪಿ ಕನಕಲಕ್ಷ್ಮೀ ಕಿರುಕುಳ, ಹಿಂಸೆ ನೀಡಿರುವ ಬಗ್ಗೆ ಉಲ್ಲೇಖಿಸಲಾಗಿದೆ ಎಂದು ತಿಳಿದು ಬಂದಿದೆ.

ಜೀವಾ ಅವರನ್ನು ಸಿಐಡಿ ವಿಚಾರಣೆ ಮಾಡುವ ವೇಳೆ ಚಿತ್ರೀಕರಿಸಲಾಗಿದ್ದ ಕೆಲವು ವಿಡಿಯೊಗಳು ಡಿಲೀಟ್ ಆಗಿದ್ದವು. ಎಸ್‍ಐಟಿ ಎಫ್‍ಎಸ್‍ಎಲ್ ಮೂಲಕ ಆ ವಿಡಿಯೊಗಳನ್ನು ಮರು ಸಂಗ್ರಹಿಸಿದಾಗ, ಡೆತ್‍ನೋಟ್‍ನಲ್ಲಿ ಜೀವಾ ಅವರು ಮಾಡಿರುವ ಬಹುತೇಕ ಆರೋಪಗಳು ಸಾಬೀತಾಗಿವೆ. ಸದ್ಯ ಆ ಎಲ್ಲಾ ಸಾಕ್ಷ್ಯಾಧಾರಗಳನ್ನೊಳಗೊಂಡ ವರದಿಯನ್ನು ಹೈಕೋರ್ಟ್‍ಗೆ ಸಲ್ಲಿಸಲಾಗಿದೆ ಎಂದು ಎಸ್‍ಐಟಿ ಮೂಲಗಳು ತಿಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News