ಪಾದಯಾತ್ರೆ ಮಾಡುವ ನೈತಿಕತೆ ಬಿಜೆಪಿಗರಿಗೆ ಇಲ್ಲ: ಸಚಿವ ಡಾ. ಮಹದೇವಪ್ಪ

Update: 2025-04-12 23:42 IST
ಪಾದಯಾತ್ರೆ ಮಾಡುವ ನೈತಿಕತೆ ಬಿಜೆಪಿಗರಿಗೆ ಇಲ್ಲ: ಸಚಿವ ಡಾ. ಮಹದೇವಪ್ಪ

ಸಚಿವ ಡಾ.ಎಚ್.ಸಿ.ಮಹದೇವಪ್ಪ

  • whatsapp icon

ಬೆಂಗಳೂರು: ಡಾ.ಅಂಬೇಡ್ಕರ್ ಬಹಿಷ್ಕೃತ ಹಿತಕಾರಣಿ ಸಭೆಗೆ ಭೇಟಿ ನೀಡಿದ 100ನೇ ವರ್ಷದ ನೆನಪಿಗೆ ಬೆಳಗಾವಿಯ ನಿಪ್ಪಾಣಿಯ ಕಡೆಗೆ ಬಿಜೆಪಿಯವರು ಪಾದಯಾತ್ರೆಯನ್ನು ಕೈಗೊಂಡಿದ್ದಾರೆ. ಅವರ ಆಶಯಗಳಿಗೆ ವಿರುದ್ಧವಾಗಿರುವ ಬಿಜೆಪಿಗರು ಹಮ್ಮಿಕೊಂಡಿರುವ ಈ ಪಾದಯಾತ್ರೆಯು ಅನೈತಿಕ ಯಾತ್ರೆಯಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಟೀಕಿಸಿದ್ದಾರೆ.

ಶನಿವಾರ ಈ ಸಂಬಂಧ ಪ್ರಕಟಣೆ ನೀಡಿರುವ ಅವರು, ‘ಜಾತಿ ಶ್ರೇಷ್ಠತೆಯ ಕಾರಣಕ್ಕಾಗಿ ತಮ್ಮ ಸಹಜೀವಿಗಳನ್ನು ಅಮಾನವೀಯವಾಗಿ ಶೋಷಣೆ ಮಾಡುತ್ತಿದ್ದ ಮನುವಾದಿಗಳ ಅಹಂಕಾರಕ್ಕೆ ಎದುರಾಗಿ, ಶಿಕ್ಷಣ ಸಂಘಟನೆ ಮತ್ತು ಹೋರಾಟದ ಆಶಯಗಳನ್ನು ಇಟ್ಟುಕೊಂಡು ಅಂಬೇಡ್ಕರ್ ಅವರು 1924ರಲ್ಲಿ ಬಹಿಷ್ಕೃತ ಹಿತಕಾರಣಿ ಸಭೆಯನ್ನು ನಡೆಸುತ್ತಾರೆ. ಅದಾದ ಮರು ವರ್ಷವೇ ಅಂಬೇಡ್ಕರ್ ಆಶಯಗಳಿಗೆ ಎದುರಾಗಿ, ನಮ್ಮೊಳಗಿದ್ದ ಮನುವಾದಿಗಳು ಆರೆಸೆಸ್ಸ್ ಎಂಬ ಸಂಸ್ಥೆಯನ್ನು ಹುಟ್ಟುಹಾಕುತ್ತದೆ. ಅಸಂವಿಧಾನಿಕವಾದಂತಹ ಮನುಸ್ಮೃತಿಯನ್ನು ಈ ದೇಶದ ಬಹುಜನರ ಮೇಲೆ ಹೇರಲು ಆರಂಭಿಸಿದ ಆರೆಸೆಸ್ಸ್ ಈ ನೆಲದ ಮೂಲ ನಿವಾಸಿಗಳ ಅಸ್ತಿತ್ವವನ್ನು ಇಲ್ಲವಾಗಿಸುವತ್ತ ಸಾಕಷ್ಟು ಪ್ರಯತ್ನಗಳನ್ನು ನಡೆಸುತ್ತದೆ. ಇದು ಸಾಲದು ಎಂಬಂತೆ ಅಂಬೇಡ್ಕರ್ ಅವರಿಗೆ ನೀರು ಕೊಡದೇ, ಇರಲು ಮನೆ ನೀಡದೇ, ಸದಾ ಅವರ ಮೇಲೆ ಅಸೂಯೆ ದ್ವೇಷ ಕಾರುತ್ತಾ ಅವರನ್ನು ಅವಮಾನಿಸುತ್ತಲೇ ಬಂದಿದ್ದಾರೆ ಎಂದು ದೂರಿದ್ದಾರೆ.

ಮಹಾಡ್ ನದಿ ನೀರನ್ನು ಮುಟ್ಟಿದ ದಿನವಂತೂ ಈ ಮನುವಾದಿಗಳು ಅಂಬೇಡ್ಕರ್ ಮೇಲೆ ಅಕ್ಷರಶಃ ಹಲ್ಲೆ ಮಾಡಲು ಯೋಚಿಸಿದ್ದರು. ಆ ದಿನ ತಮ್ಮ ಮನೆ ಬಾಗಿಲನ್ನು ಬಡಿದ ಯಾವ ದಲಿತರಿಗೂ ರಕ್ಷಣೆ ನೀಡದೇ, ದೊಣ್ಣೆಯಿಂದ ಅವರ ಮೇಲೆ ಹಲ್ಲೆ ಮಾಡುತ್ತಾರೆ. ಇನ್ನು ಅಂಬೇಡ್ಕರ್ ತಮ್ಮ ಪತ್ರದಲ್ಲಿ ಬರೆದುಕೊಂಡಂತೆ ಇದೇ ಸಾವರ್ಕರ್ ಆದಿಯಾಗಿ ಆರೆಸೆಸ್ಸ್‍ನ ಮನುವಾದಿಗಳು ಅವರನ್ನು ಚುನಾವಣೆಯಲ್ಲಿ ಸೋಲುವ ಹಾಗೆ ಮಾಡಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

ಇನ್ನು ಈ ದೇಶದ ಆತ್ಮವಾದ ಸಂವಿಧಾನವನ್ನು ಬದಲಿಸುತ್ತೇವೆ, ಇನ್ನೆಷ್ಟು ದಿನ ಮೀಸಲಾತಿ ಎಂಬ ಕೆಟ್ಟದಾದ ವಾತಾವರಣನ್ನು ಸೃಷ್ಟಿ ಮಾಡುತ್ತಿರುವ ಬಿಜೆಪಿಗರು ಇದೀಗ ಅಂಬೇಡ್ಕರ್ ಪರವಾಗಿ ಪಾದಯಾತ್ರೆ ಮಾಡುತ್ತೇನೆಂದು ಹೇಳುತ್ತಿರುವುದು ಅತ್ಯಂತ ಬಾಲಿಷವಾದ ಮತ್ತು ಅಸಂಬದ್ಧವಾದಂತಹ ಸಂಗತಿಯಾಗಿದೆ. ಬಾಬಾ ಸಾಹೇಬರು ಎಲ್ಲ ಜನರಿಗೂ ಸಿಗಬೇಕೆಂದು ಬಯಸಿದ್ದ ನ್ಯಾಯ ಹಂಚಿಕೆಗೆ ಸದಾ ವಿರುದ್ಧವಾಗಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಇವರದೇ ಪಕ್ಷದ ಗೃಹ ಮಂತ್ರಿ ಅಮಿತ್ ಶಾ, ಅಂಬೇಡ್ಕರ್ ಬಗ್ಗೆ ಹಗುರವಾಗಿ ಮಾತನಾಡಿದಾಗ ಬಿಜೆಪಿಯ ಯಾವೊಬ್ಬ ನಾಯಕರೂ ಇದನ್ನು ಖಂಡಿಸಲಿಲ್ಲ ಮತ್ತು ಬಾಬಾ ಸಾಹೇಬರ ಪರವಾಗಿ ನಿಲ್ಲಲಿಲ್ಲ. ಹೀಗಿರುವಾಗ ಯಾವ ಕಾರಣಕ್ಕಾಗಿ ಬಿಜೆಪಿಗರು ಪಾದಯಾತ್ರೆ ಮಾಡುತ್ತಿದ್ದಾರೆ ಎಂಬುದು ನನಗೆ ಅರ್ಥವಾಗುತ್ತಿಲ್ಲ. ದೇಶದಲ್ಲಿ ಕೋಮುವಾದವನ್ನು ಹೆಚ್ಚು ಮಾಡುತ್ತಾ, ಜಾತಿ ಶ್ರೇಷ್ಠತೆಯ ವಿಷ ಬೀಜ ಬಿತ್ತುತ್ತಾ, ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿ ವರ್ತಿಸುತ್ತಿರುವ ಬಿಜೆಪಿಗರು ಎಂದೆಂದಿಗೂ ಅಂಬೇಡ್ಕರ್ ಪರವಾಗಿ ಇಲ್ಲ ಎಂದು ಅವರು ಹೇಳಿದ್ದಾರೆ.

‘ನಾನು ಹಿಂದೂವಾಗಿ ಹುಟ್ಟಿರಬಹುದು ಆದರೆ, ಹಿಂದೂವಾಗಿ ಸಾಯಲಾರೆ’ ಎಂದು ಬಹಳ ನೋವಿನಿಂದ ಅಂಬೇಡ್ಕರ್ ಹೇಳಿ, ದೀಕ್ಷಾಭೂಮಿಯಲ್ಲಿ ಬೌದ್ಧಧರ್ಮ ಸ್ವೀಕರಿಸಿದ್ದರು. ಬಾಬಾ ಸಾಹೇಬರನ್ನು ಅಷ್ಟೊಂದು ನೋಯಿಸಿದ ಈ ಮನುವಾದಿ ಬಿಜೆಪಿಗರು, ಅಂಬೇಡ್ಕರ್ ಹೆಸರಲ್ಲಿ ಮಾಡುತ್ತಿರುವ ಪಾದಯಾತ್ರೆಯು ಅವರಿಗೆ ಮಾಡುತ್ತಿರುವ ಅವಮಾನವಾಗಿದೆ ಎಂದು ಅವರು ಟೀಕಿಸಿದ್ದಾರೆ.

‘ಪರಿಶಿಷ್ಟ ಸಮುದಾಯಗಳನ್ನು ಅತ್ಯಂತ ಕನಿಷ್ಟವಾಗಿ ಕಾಣುವ ಬಿಜೆಪಿಗರು ತಮ್ಮ ಸರಕಾರದ ಅವಧಿಯಲ್ಲಿ ಅವರಿಗೆ ನೀಡಿದ ರಾಜಕೀಯ ಪ್ರಾತಿನಿಧ್ಯ ಮತ್ತು ಅಧಿಕಾರ ಅತ್ಯಲ್ಪ. ಇನ್ನು ದೇಶದ ಬಹುತ್ವದ ತತ್ವಕ್ಕೆ ವಿರುದ್ಧವಾಗಿರುವ ಆರೆಸ್ಸೆಸ್ ನಂತಹ ಧಾರ್ಮಿಕ ಮೌಢ್ಯದ ಸಂಘಟನೆಯ ದಾಸರಾಗಿ ವರ್ತಿಸುವ ಇವರು, ಆರೆಸೆಸ್ಸ್ ಅನ್ನು ಕಟುವಾಗಿ ವಿರೋಧಿಸುತ್ತಿದ್ದ ಅಂಬೇಡ್ಕರ್ ಪರವಾಗಿ ಪಾದಯಾತ್ರೆ ಹೊರಟಿರುವುದು ನಿಜಕ್ಕೂ ದುರಂತಮಯ ಎಂದು ಅವರು ಲೇವಡಿ ಮಾಡಿದ್ದಾರೆ.

‘ಬಿಜೆಪಿಗರೇ ಮೊದಲು ಅಂಬೇಡ್ಕರ್ ಅವರ ಆಶಯಗಳನ್ನು ಬದುಕಲ್ಲಿ ಅಳವಡಿಸಿಕೊಂಡು, ಸಾರ್ವಜನಿಕರಲ್ಲಿ ಸಾಮರಸ್ಯ ಮೂಡಿಸುವ ಮತ್ತು ದೇಶವನ್ನು ಕಟ್ಟುವ ಕೆಲಸ ಮಾಡಿ. ಅದೇ ನೀವು ಬಾಬಾ ಸಾಹೇಬರಿಗೆ ತೋರುವ ನಿಜವಾದ ಗೌರವ ಎಂಬ ಸಂಗತಿ’

-ಡಾ.ಎಚ್.ಸಿ.ಮಹದೇವಪ್ಪ, ಸಮಾಜ ಕಲ್ಯಾಣ ಸಚಿವ

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News