ನಾವು ಜಾತಿಗಣತಿ ವಿರೋಧಿಗಳಲ್ಲ, ವೈಜ್ಞಾನಿಕ ಸಮೀಕ್ಷೆ ಮಾಡಲಿ: ಆರ್.ಅಶೋಕ್
ಆರ್.ಅಶೋಕ್
ಬೆಂಗಳೂರು : ‘ನಾವು ಜಾತಿಗಣತಿ ವಿರೋಧಿಗಳಲ್ಲ, ಸರಕಾರ ವೈಜ್ಞಾನಿಕವಾಗಿ ಸಮೀಕ್ಷೆ ಮಾಡಲಿ. ಪ್ರತೀ ಮನೆ ಮನೆಗೆ ತೆರಳಿ ವರದಿ ಕೊಡಲಿ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಸವಾಲು ಹಾಕಿದ್ದಾರೆ.
ರವಿವಾರ ನಗರದಲ್ಲಿ ಜಾತಿಗಣತಿ ವರದಿ ವಿಚಾರವಾಗಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವೈಜ್ಞಾನಿಕವಾದ ಸಮೀಕ್ಷೆ ನಡೆಸಿದರೆ ಜಾತಿಗಣತಿಗೆ ನಮ್ಮ ತಕರಾರಿಲ್ಲ, ಆದರೆ, ಈ ಸರಕಾರ ವೋಟಿಗಾಗಿ ಯಾರನ್ನೋ ಓಲೈಕೆ ಮಾಡಲು ಕೀಳು ಮಟ್ಟಕ್ಕೆ ಇಳಿಯಬಾರದು ಎಂದರು.
ಈಗಿನದು ಒಕ್ಕಲಿಗರು, ಲಿಂಗಾಯತರಲ್ಲಿ ಬೆಂಕಿ ಹಚ್ಚುವ ವರದಿಯಾಗಿದೆ. ಇದು ಯಾರೂ ಒಪ್ಪುವ ವರದಿ ಅಲ್ಲ. ಕಾಂತರಾಜು ಅವರನ್ನು ಮನೆಗೆ ಕರೆಸಿ ಸಿಎಂ ಸಿದ್ದರಾಮಯ್ಯ ಡಿಕ್ಟೇಟ್ ಮಾಡಿ ಜಾತಿಗಣತಿ ವರದಿ ಬರೆಸಿದ್ದಾರೆ. ಈ ವರದಿಯಲ್ಲಿ ರಹಸ್ಯ ಏನೂ ಇಲ್ಲ, ಎಲ್ಲ ಜಗಜ್ಜಾಹೀರು ಆಗಿದೆ ಎಂದು ಆರ್.ಅಶೋಕ್ ಕಿಡಿಕಾರಿದರು.
ಇದು ಜಾತಿ ಜಾತಿಗಳನ್ನು, ಧರ್ಮ ಧರ್ಮಗಳನ್ನು ಒಡೆಯುವ ವರದಿಯಾಗಿದೆ. ಜಾತಿ ಜನಗಣತಿ ವರದಿಯ ಮೂಲಕ ಲಿಂಗಾಯತರು, ಒಕ್ಕಲಿಗರು, ದಲಿತರಿಗೆ ಪಂಗನಾಮ ಹಾಕಿದ್ದಾರೆ. ಮುಸ್ಲಿಮರನ್ನು ಯಾಕೆ ವಿಭಜಿಸಿಲ್ಲ, ಲಿಂಗಾಯತರು, ಒಕ್ಕಲಿಗರನ್ನು ಮಾತ್ರ ವಿಭಜಿಸಿದ್ದೀರಿ. ನಿಮಗೆ ಬೇಕಿರುವ ಮುಸ್ಲಿಮ್ ಸಮುದಾಯವನ್ನು ವಿಭಜಿಸಲಿಲ್ಲ ಎಂದು ಸರಕಾರದ ವಿರುದ್ಧ ಆರ್.ಅಶೋಕ್ ಆಕ್ರೋಶ ಹೊರಹಾಕಿದರು.
ವೀರಶೈವ ಲಿಂಗಾಯತರನ್ನು ಭಾಗ ಮಾಡಿದ್ದೀರಿ, ಒಕ್ಕಲಿಗರಿಗೆ ಇರುವುದು ಒಂದೇ ಮಠ, ಆದಿಚುಂಚನಗಿರಿ ಮಠ. ಈ ವರದಿಯಲ್ಲಿ ಮುಸ್ಲಿಮರನ್ನು ಫೋಕಸ್ ಮಾಡಲಾಗಿದೆ, ಇದರಿಂದ ಏನು ಸಂದೇಶ ಕೊಡುತ್ತೀರಿ? ನೆಹರೂ ಅವರೂ ಇದೇ ತಪ್ಪು ಮಾಡಿದ್ದರು. ಅಂಬೇಡ್ಕರ್ ಸ್ಪರ್ಧಿಸಿದ್ದ ಕ್ಷೇತ್ರವನ್ನು ಪಾಕಿಸ್ತಾನಕ್ಕೆ ಸೇರಿಸಿದರು ಎಂದು ಆರ್.ಅಶೋಕ್ ಆರೋಪಿಸಿದರು.
ಸಿದ್ದರಾಮಯ್ಯ ಮುಸ್ಲಿಮ್ ಧರ್ಮ ಓಲೈಕೆ ಮಾಡುತ್ತಿದ್ದಾರೆ. ಜನರನ್ನು ಕೂಡಿಸುವುದು ಕಷ್ಟ, ಆದರೆ, ಒಡೆಯುವುದು ಸುಲಭ. ಸಿದ್ದರಾಮಯ್ಯ ಒಡೆಯುವುದರಲ್ಲಿ ಎಕ್ಸ್ ಪರ್ಟ್. ಜಾತಿ, ಧರ್ಮಗಳ ಮಧ್ಯೆ ಒಡಕು ತರುತ್ತಿದ್ದಾರೆ. ಇದು ಸಿದ್ದರಾಮಯ್ಯ ಪ್ರಾಯೋಜಕತ್ವದ ಅವೈಜ್ಞಾನಿಕ ವರದಿ. ಲಕ್ಷಾಂತರ, ಕೋಟ್ಯಂತರ ಮನೆಗಳಿಗೆ ಭೇಟಿ ಮಾಡದೇ ವರದಿ ಕೊಟ್ಟಿದ್ದಾರೆ ಎಂದು ಆರ್.ಅಶೋಕ್ ಟೀಕಿಸಿದರು.
ಈ ಸರಕಾರ ಬಹಳ ದಿನ ಇರುವುದಿಲ್ಲ: ‘ಹನಿಟ್ರ್ಯಾಪ್, 500ಕೋಟಿ ರೂ. ಕಿಕ್‍ಬ್ಯಾಕ್, ಗುತ್ತಿಗೆದಾರರ ಆರೋಪ ವಿಚಾರ ಡೈವರ್ಟ್ ಮಾಡಲು, ಅವರ ಎಲ್ಲ ಹುಳುಕುಗಳ ಸೈಡ್‍ಲೈನ್ ಮಾಡುವ ಉದ್ದೇಶದಿಂದ ಸಿದ್ದರಾಮಯ್ಯ ಅವರು ಜಾತಿಗಣತಿ ವರದಿಯನ್ನು ಮುನ್ನೆಲೆಗೆ ತಂದಿದ್ದಾರೆ. ಸಿದ್ದರಾಮಯ್ಯ ಒಬ್ಬ ಕುತಂತ್ರಗಾರ, ಅವರು ತಂತ್ರಗಾರ ಅಲ್ಲ. ಕುತಂತ್ರ ಮಾಡಿಯೇ ಜೆಡಿಎಸ್ ಒಡೆದರು. ಅದಕ್ಕೆ ಅವರನ್ನು ಹೊರಗೆ ಹಾಕಿದರು. ಈಗ ಕಾಂಗ್ರೆಸ್‍ನಿಂದಲೂ ಯಾವಾಗ ಹೊರಗೆ ಹಾಕುತ್ತಾರೋ ಗೊತ್ತಿಲ್ಲ. ಈ ಸರಕಾರ ಬಹಳ ದಿನ ಇರುವುದಿಲ್ಲ, ಸರ್ವನಾಶ ಆಗುತ್ತದೆ’ ಎಂದು ಆರ್.ಅಶೋಕ್ ತಿಳಿಸಿದರು.