ಎ.22ಕ್ಕೆ ದಲಿತ ಸಾಹಿತ್ಯ ಸಮ್ಮೇಳನ : ಸಮ್ಮೇಳನಾಧ್ಯಕ್ಷರಾಗಿ ಕೋಟಿಗಾನಹಳ್ಳಿ ರಾಮಯ್ಯ ಆಯ್ಕೆ

ಕೋಟಿಗಾನಹಳ್ಳಿ ರಾಮಯ್ಯ
ಬೆಂಗಳೂರು : ದಲಿತ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಂಡಿರುವ ಬೆಂಗಳೂರು ಜಿಲ್ಲಾ ಪ್ರಥಮ ದಲಿತ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಅವರು ಆಯ್ಕೆಯಾಗಿದ್ದಾರೆ.
ಎ22ರಂದು ಇಲ್ಲಿನ ಜೆ.ಸಿ.ರಸ್ತೆಯಲ್ಲಿನ ಕನ್ನಡ ಭವನದ ಸಭಾಂಗಣದಲ್ಲಿ ನಡೆಯಲಿರುವ ಸಮಾರಂಭವನ್ನು ನಾಡೋಜ ಪ್ರೊ.ಬರಗೂರು ರಾಮಚಂದ್ರಪ್ಪ ಉದ್ಘಾಟಿಸಲಿದ್ದಾರೆ. ಬಿಬಿಎಂಪಿ ಆವರಣದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಹಾಗೂ ಜಾನಪದ ಕಲಾ ತಂಡಗಳೊಂದಿಗೆ ನಯನ ಸಭಾಂಗಣದ ವರೆಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಲಿದೆ.
ಅಧ್ಯಕ್ಷತೆಯನ್ನು ದಲಿತ ಸಾಹಿತ್ಯ ಪರಿಷತ್ತು ರಾಜ್ಯಾಧ್ಯಕ್ಷ ಅರ್ಜುನ ಗೊಳಸಂಗಿ ವಹಿಸಲಿದ್ದು, ದಲಿತಪರ ಹೋರಾಟಗಾರ ಬಿ.ವಿ.ಚಂದ್ರಪ್ರಸಾದ್ ತ್ಯಾಗಿ ನೆನಪಿನಲ್ಲಿ ದಲಿತ ಸಾಹಿತ್ಯದ ಚಾರಿತ್ರಿಕ ಹಿನ್ನೆಲೆ ಕುರಿತು ಡಾ.ಎಚ್.ಲಕ್ಷ್ಮೀನಾರಾಯಣಸ್ವಾಮಿ, ದಲಿತಪರ ಹೋರಾಟಗಾರ ಎಂ.ಜಯಣ್ಣರ ನೆನಪಿನಲ್ಲಿ ದಲಿತ ಸಾಹಿತ್ಯ ಮತ್ತು ಚಳುವಳಿಯ ಮುಂದಿರುವ ಸವಾಲು ಮತ್ತು ಸಾಧ್ಯತೆಗಳು ಕುರಿತು ಡಾ.ಶೋಭ ಹಾಗೂ ಮತ್ತೊಬ್ಬ ದಲಿತ ಹೋರಾಟಗಾರ ಲಕ್ಷ್ಮೀನಾರಾಯಣ ನಾಗವಾರ ನೆನಪಿನಲ್ಲಿ ಸಮ್ಮೇಳನಾಧ್ಯಕ್ಷರ ಬದುಕು ಮತ್ತು ಬರಹ ಕುರಿತು ಸಾಹಿತಿ ಸುಬ್ಬು ಹೊಲೆಯಾರ್ ವಿಚಾರ ಮಂಡಿಸಲಿದ್ದಾರೆ.
ಕವಿ ಎನ್.ಕೆ ಹನುಮಂತಯ್ಯ ಮತ್ತು ಲಕ್ಕೂರು ಆನಂದ್ ನೆನಪಿನಲ್ಲಿ ನಡೆಯಲಿರುವ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಸಾಹಿತಿ ಪ್ರೊ.ಟಿ.ಯಲ್ಲಪ್ಪ ವಹಿಸಲಿದ್ದಾರೆ. ಹೋರಾಟಗಾರ ಜಿಗಣಿ ಶಂಕರ್ ನೆನಪಿನಲ್ಲಿ ಹೋರಾಟದ ಹಾಡುಗಳ ನೃತ್ಯ ರೂಪಕವನ್ನು ರೇಖಾ ಜಗದೀಶ್ ನಿರ್ದೇಶನದಲ್ಲಿ ನಡೆಸಿಕೊಡಲಿದ್ದು, ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ, ವಿವಿಧ ಕ್ಷೇತ್ರಗಳ ಗಣ್ಯರಿಗೆ ಸನ್ಮಾನ ಮತ್ತು ಪ್ರಬಂಧ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಬಹುಮಾನ ವಿತರಣೆಯೊಂದಿಗೆ ಸಮಾರೋಪ ಜರುಗಲಿದೆ ಎಂದು ಜಿಲ್ಲಾಧ್ಯಕ್ಷೆ ಗೌಡಗೆರೆ ಮಾಯುಶ್ರೀ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.