ಶಿವಮೊಗ್ಗ | ಮನೆಗೆ ತಲುಪಿದ ಮಂಜುನಾಥ್ ಮೃತದೇಹ: ಅಂತಿಮ ದರ್ಶನಕ್ಕೆ ಜಮಾಯಿಸಿದ ಜನರು

ಶಿವಮೊಗ್ಗ: ಕಾಶ್ಮೀರದ ಪಹಲ್ಗಾಮ್ ನಲ್ಲಿ ಉಗ್ರರ ಗುಂಡಿನ ದಾಳಿಗೆ ಬಲಿಯಾದ ಮಂಜುನಾಥ್ ರಾವ್ ಪಾರ್ಥಿವ ಶರೀರವನ್ನು ಶಿವಮೊಗ್ಗದ ವಿಜಯ ನಗರ ಬಡಾವಣೆಯಲ್ಲಿರುವ ನಿವಾಸಕ್ಕೆ ತರಲಾಗಿದೆ.
ಇದಕ್ಕೂ ಮೊದಲು ಬೆಕ್ಕಿನಕಲ್ಮಠದಿಂದ ಪಾರ್ಥಿವ ಶರೀರವನ್ನು ಮೆರವಣಿಗ ಮೂಲಕ ಶಿವಮೊಗ್ಗದ ವಿಜಯನಗರ ನಿವಾಸಕ್ಕೆ ತರಲಾಯಿತು. ಪಾರ್ಥಿವ ಶರೀರ ಆಗಮಿಸುತ್ತಿದ್ದಂತೆ ಸೇರಿದ್ದ ಜನರು 'ಅಮರ್ ರಹೇ ಅಮರ್ ರಹೇ ಮಂಜುನಾಥ್' ಎಂದು ಘೋಷಣೆ ಕೂಗಿದರು.

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಚಿವ ಮಧು ಬಂಗಾರಪ್ಪ, ಸಂಸದ ಬಿ.ವೈ ರಾಘವೇಂದ್ರ,ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ,ಶಾಸಕ ಎಸ್.ಎನ್ ಚನ್ನಬಸಪ್ಪ,ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್ ಆರುಣ್,ಡಾ.ಧನಂಜಯ ಸರ್ಜಿ ಸೇರಿದಂತೆ ಗಣ್ಯರು ಅಂತಿಮ ದರ್ಶನ ಪಡೆದುಕೊಂಡರು.

ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ:
ಪಾರ್ಥಿವ ಶರೀರ ಮನೆಗೆ ಆಗಮಿಸುತ್ತಿದ್ದಂತೆ ಮೃತ ಮಂಜುನಾಥ್ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತು. ಪ್ರವಾಸಕ್ಕೆ ಹೋದ ಮಗ ಶವವಾಗಿ ಬಂದದ್ದನ್ನು ಕಂಡು ತಾಯಿ ಬಿಕ್ಕಿಬಿಕ್ಕಿ ಅಳತೊಡಗಿದರು. ಇತ್ತ ಪತಿಯನ್ನು ಕಳೆದುಕೊಂಡ ಪತ್ನಿ, ತಂದೆಯನ್ನು ಕಳೆದುಕೊಂಡ ಮಗ ಕಣ್ಣೀರಿಡುತ್ತಿದ್ದಾರೆ.
ಸಹಸ್ರಾರು ಸಂಖ್ಯೆಯಲ್ಲಿ ಜಮಾಯಿಸಿದ ಸಾರ್ವಜನಿಕರು:
ಮಂಜುನಾಥ್ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯಲು ಸಹಸ್ರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಿದ್ದರು.
ಭಯೋತ್ಪಾದನೆಗೆ ಕುಮ್ಮಕ್ಕು ನೀಡುವ ಪಾಕಿಸ್ತಾನಕ್ಕೆ ದಿಕ್ಕಾರ, ಮುರ್ದಾಬಾದ್ ಮುರ್ದಾಬಾದ್ ಪಾಕಿಸ್ತಾನ್ ಮುರ್ದಾಬಾದ್, ಅಮರ್ ರಹೇ.. ಅಮರ್ ರಹೇ ಮಂಜುನಾಥ್ ಅಮರ್ ರಹೇ ಎಂಬ ಘೋಷಣೆ ಮಂಜುನಾಥ್ ಅವರ ಮನೆಯ ಮುಂದೆ ಸಹಸ್ರಾರು ಸಂಖ್ಯೆಯಲ್ಲಿ ಜಮಾವಣೆಗೊಂಡ ಸಾರ್ವಜನಿಕರು ಘೋಷಣೆ ಕೂಗಿದರು.