ಬಿಜೆಪಿ-ಜೆಡಿಎಸ್ ಒಂದೇ ನಾಣ್ಯದ ಎರಡು ಮುಖಗಳು : ಡಿ.ಕೆ.ಶಿವಕುಮಾರ್

Update: 2025-04-03 18:25 IST
ಬಿಜೆಪಿ-ಜೆಡಿಎಸ್ ಒಂದೇ ನಾಣ್ಯದ ಎರಡು ಮುಖಗಳು : ಡಿ.ಕೆ.ಶಿವಕುಮಾರ್

ಡಿ.ಕೆ.ಶಿವಕುಮಾರ್

  • whatsapp icon

ಹೊಸದಿಲ್ಲಿ : ಈ ಹಿಂದೆ ಪೆಟ್ರೋಲ್, ಡೀಸೆಲ್, ಗ್ಯಾಸ್ ಸಿಲಿಂಡರ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಹೆಚ್ಚಳವಾಗಿತ್ತು. ಈಗ ಟೋಲ್ ದರ ಏಕೆ ಹೆಚ್ಚಳವಾಗಿದೆ? ಇದರ ಬಗ್ಗೆ ಬಿಜೆಪಿಯವರು ಏತಕ್ಕಾಗಿ ಪ್ರತಿಭಟನೆ ಮಾಡುತ್ತಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್, ಬಿಜೆಪಿ ನಡೆಯ ಬಗ್ಗೆ ಕುಹಕವಾಡಿದರು.

ಗುರುವಾರ ಹೊಸದಿಲ್ಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಹಾಲಿನ ದರ ಹೆಚ್ಚಳ ಮಾಡಿರುವುದರಿಂದ ರೈತರಿಗೆ ಹೆಚ್ಚು ಅನುಕೂಲವಾಗಲಿದೆ. ರೈತರ ಬದುಕನ್ನು ಸಹ ನಾವು ನೋಡಬೇಕಲ್ಲವೇ? ರೈತರ ಪಕ್ಷ ಎಂದು ಕೇವಲ ಹಸಿರು ಟವೆಲ್ ಹಾಕಿಕೊಂಡರೆ ಸಾಕೇ? ಎಂದು ಪ್ರಶ್ನಿಸಿದರು.

ಊರುಗಳಿಗೆ ನಾವುಗಳು ಹೋದಾಗ ರೈತರು ನಮ್ಮನ್ನು ಹೊಡೆಯಲು ಬಂದಿಲ್ಲ ಅದೇ ನಮ್ಮ ಪುಣ್ಯ. ಅನೇಕ ರೈತರು ಹಸುಗಳನ್ನು ಮಾರಾಟ ಮಾಡಲು ಹೋಗುತ್ತಿದ್ದಾರೆ. ಈ ಹಿಂದೆ ಬೆಲೆ ಹೆಚ್ಚಳವಾದಾಗ ಅವರು ಜನಪ್ರತಿನಿಧಿಗಳಾಗಿದ್ದರು ಅಲ್ಲವೇ? ಎಂದು ಶಿವಕುಮಾರ್ ಕುಟುಕಿದರು.

ಪ್ರತಿಭಟನೆ ವಿಚಾರವಾಗಿ ಜೆಡಿಎಸ್ ಹಾಗೂ ಬಿಜೆಪಿ ಮಧ್ಯೆ ಒಡಕು ಮೂಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್, ಅವರ ಪಕ್ಷದ ವಿಚಾರ ನನಗೆ ಬೇಡ. ಅವರು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಇದರ ಬಗ್ಗೆ ಸುಮ್ಮನೆ ಚರ್ಚೆ ಏಕೆ? ಬಿಜೆಪಿಯವರ ಪ್ರತಿಭಟನೆಗೆ ನಾನು ಶುಭಕೋರುತ್ತೇನೆ. ಅವರು ಪಕ್ಷ ಉಳಿಸಿಕೊಳ್ಳಲು ರಾಜಕೀಯ ಮಾಡುತ್ತಿದ್ದಾರೆ ಮಾಡಲಿ ಎಂದರು.

ಗ್ಯಾರಂಟಿ ವೆಚ್ಚ ಹೊರೆಯಾಗುತ್ತಿರುವ ಕಾರಣಕ್ಕೆ ಬೆಲೆ ಹೆಚ್ಚಳ ಮಾಡುತ್ತಿದ್ದಾರೆ ಎನ್ನುವ ಪ್ರತಿಪಕ್ಷಗಳ ಟೀಕೆಯ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಉಪ ಮುಖ್ಯಮಂತ್ರಿ, ಅವರು ಮಾತನಾಡ ಬೇಕಲ್ಲ ಎಂದು ಮಾತನಾಡುತ್ತಿದ್ದಾರೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮಲ್ಲಿ ಹಾಲಿನ ದರ ಕಡಿಮೆಯಿದೆ ಎಂದು ಹೇಳಿದರು.

ರಾಷ್ಟ್ರೀಯ ನಾಯಕರನ್ನು ಭೇಟಿಯಾಗುವುದು ಸಾಮಾನ್ಯ: ಮುಖ್ಯಮಂತ್ರಿ ಸಿದ್ದರಾಮಯ್ಯ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿಮಾಡಿದ್ದರ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ರಾಹುಲ್ ಗಾಂಧಿ ನಮ್ಮ ಪಕ್ಷದ ರಾಷ್ಟ್ರೀಯ ನಾಯಕರು ಅದಕ್ಕೆ ಭೇಟಿ ಮಾಡಿದ್ದಾರೆ ಎಂದು ಹೇಳಿದರು.

ನಾನು ಕೂಡ ಇಲ್ಲಿಗೆ ಬಂದಾಗ ಭೇಟಿ ಮಾಡಿದ್ದೇನೆ. ಹಲವಾರು ನಾಯಕರನ್ನು ಭೇಟಿಯಾಗುತ್ತೇವೆ. ಕಾಂಗ್ರೆಸ್ ಕಚೇರಿ ಪಕ್ಷದ ದೇವಸ್ಥಾನವಿದ್ದಂತೆ ಭೇಟಿ ನೀಡದರೆ ತಪ್ಪೇನಿದೆ?. ವಿಧಾನ ಪರಿಷತ್ ಸ್ಥಾನಗಳ ಬಗ್ಗೆ ಇನ್ನೂ ಚರ್ಚೆಯಾಗಿಲ್ಲ. ಚರ್ಚೆಗೆ ಬಂದಾಗ ಮಾತನಾಡುತ್ತೇವೆ ಎಂದು ಅವರು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News