ವಿಜಯನಗರ ಕಾಲದ ಹೊಸ ತಾಮ್ರದ ಪಟದ ಶಾಸನ ಪತ್ತೆ: ಫಾಲ್ಕನ್ ಕಾಯಿನ್ಸ್ ಗ್ಯಾಲರಿಯಲ್ಲಿ ಸಂರಕ್ಷಣೆ

Update: 2025-04-01 22:11 IST
ವಿಜಯನಗರ ಕಾಲದ ಹೊಸ ತಾಮ್ರದ ಪಟದ ಶಾಸನ ಪತ್ತೆ: ಫಾಲ್ಕನ್ ಕಾಯಿನ್ಸ್ ಗ್ಯಾಲರಿಯಲ್ಲಿ ಸಂರಕ್ಷಣೆ
  • whatsapp icon

ಬೆಂಗಳೂರು : ಕರ್ನಾಟಕ ಇತಿಹಾಸಕ್ಕೆ ಹೊಸ ಸೇರ್ಪಡೆಯಾಗಿ ತಾಮ್ರದ ಪಟದ ಶಾಸನ ಇದೀಗ ಬೆಳಕಿಗೆ ಬಂದಿದೆ. ಇತ್ತೀಚೆಗಷ್ಟೇ ಪತ್ತೆಯಾದ ಈ ತಾಮ್ರದ ಪಟದ ಶಾಸನ ವಿಜಯನಗರ ರಾಜವಂಶಕ್ಕೆ ಸೇರಿದ್ದಾಗಿದ್ದು, ಹೀಗೆ ಬೆಳಕಿಗೆ ಬಂದ ತಾಮ್ರದ ಈ ಶಾಸನವನ್ನು ನಗರದ ಫಾಲ್ಕನ್ ಕಾಯಿನ್ಸ್ ಗ್ಯಾಲರಿಯಲ್ಲಿ ಸಂರಕ್ಷಿಸಲಾಗಿದೆ.

ಮಂಗಳವಾರ ನಗರದಲ್ಲಿನ ಫಾಲ್ಕಾನ್ ಕಾಯಿನ್ಸ್ ಗ್ಯಾಲರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಪತ್ತೆಯಾದ ಶಾಸನದ ಕುರಿತು ಮಾಹಿತಿ ನೀಡಿದ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ನಿರ್ದೇಶಕ ಡಾ.ಕೆ.ಎಂ.ರೆಡ್ಡಿ, ತಾಮ್ರದ ಈ ಶಾಸನ ಕರ್ನಾಟಕ ಮೂಲದ್ದಾಗಿದೆ. ಇದು ವಿಜಯನಗರದ ಸಂಗಮ ದೊರೆ ದೇವರಾಯ-1 ಈತನ ಆಡಳಿತದಲ್ಲಿದ್ದವು. ಅಲ್ಲದೆ ಈ ತಾಮ್ರದ ಶಾಸನದ ಮೇಲೆ ಶ.ಕ.1328 ವ್ಯಾಯಾ, ಕಾರ್ತಿಕ, ಬಾ.10, ಶುಕ್ರವಾರದಂದು ಎಂದು ಕೆತ್ತಲಾದ ಸಂಸ್ಕೃತ ಭಾಷೆಯಲ್ಲಿನ ನಾಗರಿ ಲಿಪಿಯಲ್ಲಿ ಕನ್ನಡದ ಬರವಣಿಗೆಗಳು ಕಂಡು ಬಂದಿವೆ ಎಂದು ಮಾಹಿತಿ ನೀಡಿದರು.

ಇದು ಚಂದ್ರ, ಯದು, ಸಂಗಮ ಮತ್ತು ಅವನ ಐದು ಮಕ್ಕಳಾದ ಹರಿಹರ, ಕಂಪ, ಬುಕ್ಕ, ಮಾರಪ, ಮುದ್ದಪ್ಪರಿದ ಆರಂಭಗೊಂಡು ಸಂಗಮ ರಾಜವಂಶದ ವಂಶಾವಳಿಯನ್ನು ಪ್ರತಿನಿಧಿಸುತ್ತಿದೆ. ಬುಕ್ಕ ಎನ್ನುವವನು ಹರಿಹರ ಮತ್ತು ಅವನ ರಾಣಿ ಮೇಲಾಂಬಿಕಾಗೆ ಜನಿಸಿದ್ದನು. ನಂತರ ಬುಕ್ಕನ ಮಗನಾಗಿ ದೇವರಾಯ ಜನಿಸಿದನು. ಇನ್ನು ಪಟ್ಟಾಭಿಷೇಕದ ಸಮಯದಲ್ಲಿ ಹರಿಹರನ ಮಗನಾದ ರಾಜ ದೇವರಾಯ-1 ಗುಡಿಪಲ್ಲಿ ಗ್ರಾಮವನ್ನು ರಾಜೇಂದ್ರಮಡಾ ಮತ್ತು ಉದಯಪಲ್ಲಿ ಎಂಬ ಎರಡು ಕುಗ್ರಾಮಗಳ ಜೊತೆಗೆ ದೇವರಿಯಾಪುರ-ಅಗ್ರಹಾರ ಎಂದು ಮರುನಾಮಕರಣ ಮಾಡಿ ಅವುಗಳನ್ನು 61 ಭಾಗಗಳಾಗಿ ವಿಭಜಿಸಿದನು ಎಂದು ಅವರು ತಿಳಿಸಿದರು.

ಋಗ್ವೇದರಿಗೆ 26.5 ಪಾಲುಗಳು, ಯಜುರ್ವೇದಿಗಳಿಗೆ 29.5 ಪಾಲುಗಳು, ಶುಕ್ಲ-ಯಜುರ್ವೇದಿಗಳಿಗೆ 3 ಪಾಲುಗಳು, ದೇವಭಾಗಕ್ಕೆ 2 ಪಾಲು ಸಾಮನಾಥಲೆ, ಶಿವ ಮತ್ತು ಜನಾರ್ದನರಿಗೆ ಹೀಗೆ ಪುರದಲ್ಲಿ ನೆಲೆಗೊಂಡಿರುವ ಗ್ರಾಮವನ್ನು ಉಲ್ಲೇಖಿಸಲಾಗಿದೆ. ಗಮನಾರ್ಹವೆಂದರೆ ಮುಳಬಾಗಿಲು ರಾಜ್ಯ, ಹೊಡೆನಾಡ-ಸ್ಥಳ ಎಂಬುದಾಗಿ ಕನ್ನಡ ಭಾಷೆಯಲ್ಲಿ ಇರುವುದು ತಾಮ್ರದ ಪಟ್ಟಿಗಳಲ್ಲಿ ಕಂಡು ಬಂದಿದೆ ಎಂದು ಕೆ.ಎಂ.ರೆಡ್ಡಿ ಮಾಹಿತಿ ನೀಡಿದರು.

ವಿಜಯನಗರ ಸಾಮ್ರಾಜ್ಯದ ರಾಜ ಲಾಂಛನವಾದ ವರಾಹ ಅನ್ನು ಸಾಮಾನ್ಯ ಚಿತ್ರದ ಸ್ಥಳದಲ್ಲಿ ಮುದ್ರೆಯ ಚಿತ್ರದಂತೆ ಕಂಡು ಬಂದಿರುವುದು ಆಸಕ್ತಿದಾಯಕವಾಗಿದೆ. ಇಲ್ಲಿಯವರೆಗೆ ದೃಢೀಕರಿಸದ ರಾಜ ದೇವರಾಯರ ಪಟ್ಟಾಭಿಷೇಕದ ದಿನಾಂಕವನ್ನು ಇದರಲ್ಲಿ ಉಲ್ಲೇಖಿಸಲಾಗಿದೆ. ಪಟ್ಟಾಭಿಷೇಕ ನಡೆಯುತ್ತಿರುವಾಗ ಅನುದಾನವನ್ನು ನೀಡಲಾಯಿತು ಎಂದು ತಿಳಿದು ಬಂದಿದೆ. ಹೀಗೆ ಐದು ತಾಮ್ರಗಳ ಪಟ್ಟಿಯುಳ್ಳ ಶಾಸನ ಬೆಳಕಿಗೆ ಬಂದಿರುವುದು ಕೇವಲ ಐತಿಹಾಸಿಕ ಆವಿಷ್ಕಾರ ಮಾತ್ರ ಅಲ್ಲದೇ, ವಿಜಯನಗರ ಸಾಮ್ರಾಜ್ಯವನ್ನು ನೋಡುವ ಇತಿಹಾಸವನ್ನು ಸಹ ಬದಲಾಯಿಸುತ್ತದೆ ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಫಾಲ್ಕಾನ್ ಕಾಯಿನ್ಸ್ ಗ್ಯಾಲರಿಯ ವ್ಯವಸ್ಥಾಪಕ ನಿರ್ದೇಶಕ ಕೀರ್ತಿ ಎಂ.ಪರೇಖ್, ಎಂ.ಡಿ.ಕೀರ್ತಿ ಪರೇಖ್, ಹಾರ್ದಿಕ್ ಪರೇಖ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News