ಬೆಲೆ ಏರಿಕೆ ವಿರುದ್ಧ ಎ.2ರಿಂದ ಬೆಂಗಳೂರಿನಲ್ಲಿ ಅಹೋರಾತ್ರಿ ಧರಣಿ: ವಿಜಯೇಂದ್ರ

Update: 2025-03-29 17:30 IST
ಬೆಲೆ ಏರಿಕೆ ವಿರುದ್ಧ ಎ.2ರಿಂದ ಬೆಂಗಳೂರಿನಲ್ಲಿ ಅಹೋರಾತ್ರಿ ಧರಣಿ: ವಿಜಯೇಂದ್ರ

ಬಿ.ವೈ.ವಿಜಯೇಂದ್ರ

  • whatsapp icon

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರಕಾರದ ಬೆಲೆ ಏರಿಕೆ ನೀತಿಯ ವಿರುದ್ಧ ಎ.2ರಂದು ಬೆಳಗ್ಗೆ 11 ಗಂಟೆಯಿಂದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಅಹೋರಾತ್ರಿ ಧರಣಿ ಪ್ರಾರಂಭಿಸಲಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು.

ಶನಿವಾರ ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಬಿಜೆಪಿಯ ಎಲ್ಲ ಶಾಸಕರು, ವಿಧಾನಪರಿಷತ್ ಸದಸ್ಯರು, ಮಾಜಿ ಶಾಸಕರು, ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳು, ಜಿಲ್ಲಾ ಅಧ್ಯಕ್ಷರು, ರಾಜ್ಯದ ಎಲ್ಲ ಪದಾಧಿಕಾರಿಗಳು ಈ ಅಹೋರಾತ್ರಿ ಧರಣಿಯಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಕೆಂಗಲ್ ಪ್ರತಿಮೆ ಎದುರು ಪ್ರತಿಭಟನೆ: ಅಧಿವೇಶನ ಮುಗಿಯುವ ಕೊನೆಯ ದಿನ ಸ್ಪೀಕರ್ ಅವರು ಬಿಜೆಪಿಯ 18 ಶಾಸಕರನ್ನು 6 ತಿಂಗಳ ಕಾಲ ಅಮಾನತು ಮಾಡಿದ್ದಾರೆ. ಸ್ಪೀಕರ್ ಅವರ ಸರ್ವಾಧಿಕಾರಿ ಧೋರಣೆ ಸರಿಯಲ್ಲ. ಎ.2ರಂದು ಬೆಳಗ್ಗೆ ವಿಧಾನಸೌಧ ಆವರಣದಲ್ಲಿರುವ ಕೆಂಗಲ್ ಹನುಮಂತಯ್ಯ ಪ್ರತಿಮೆಯ ಮುಂದೆ ನಮ್ಮೆಲ್ಲ ಶಾಸಕರು, ವಿಧಾನಪರಿಷತ್ ಸದಸ್ಯರು ಪ್ರತಿಭಟನೆ ಮಾಡುತ್ತೇವೆ. ಬಳಿಕ ಸ್ಪೀಕರ್ ಅವರಿಗೆ ಮನವಿ ಸಲ್ಲಿಸುತ್ತೇವೆ ಎಂದು ವಿಜಯೇಂದ್ರ ತಿಳಿಸಿದರು.

ನಮ್ಮ ಶಾಸಕರನ್ನು ಅಮಾನತು ಮಾಡಿದ ಸ್ಪೀಕರ್ ಅವರ ತೀರ್ಮಾನವು ಮತದಾರರಿಗೆ ಮಾಡಿದ ಅವಮಾನ. 18 ಶಾಸಕರ ಅಮಾನತನ್ನು ಹಿಂದಕ್ಕೆ ಪಡೆಯುವವರೆಗೆ ಬಿಜೆಪಿಯ ಶಾಸಕರು, ವಿಧಾನಪರಿಷತ್ ಸದಸ್ಯರು ವಿಧಾನಮಂಡಲದ ಸಮಿತಿಯ ಸಭೆಗಳಿಗೆ ಹಾಜರಾಗುವುದಿಲ್ಲ ಎಂದು ಅವರು ಹೇಳಿದರು.

ಅಲ್ಲದೇ, ಎ.4ರಂದು ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ, 5ರಂದು ಎಲ್ಲ ಮಂಡಲಗಳಲ್ಲಿಯೂ ಬೆಲೆ ಏರಿಕೆಯ ಧೋರಣೆಯನ್ನು ಖಂಡಿಸಿ ಪ್ರತಿಭಟನೆ ಮಾಡಲಿದ್ದೇವೆ. ಪಕ್ಷದ ಎಲ್ಲ ಮುಖಂಡರು ಕುಳಿತು ಇನ್ನೂ ಅನೇಕ ವಿಚಾರಗಳನ್ನು ಚರ್ಚಿಸಿದ್ದೇವೆ ಎಂದು ವಿಜಯೇಂದ್ರ ತಿಳಿಸಿದರು.

ವಿಶೇಷವಾಗಿ ರಾಜ್ಯ ಸರಕಾರವು ಬೆಲೆ ಏರಿಕೆಯ ಗ್ಯಾರಂಟಿ ನೀಡಿದೆ. ನೀರಿನ ದರ, ಪೆಟ್ರೋಲ್ ದರ ಹೆಚ್ಚಿಸಿದ್ದಾರೆ. ಹಾಲಿನ ದರವನ್ನು ಮೂರನೇ ಬಾರಿ ಜಾಸ್ತಿ ಮಾಡಿದ್ದಾರೆ. ಹಾಲಿನ ಬೆಲೆ ಏರಿಕೆ ಜನರಿಗೆ ಯುಗಾದಿ ಕೊಡುಗೆಯಂತಿದೆ ಎಂದು ವ್ಯಂಗ್ಯವಾಡಿದ ಅವರು, ಬೆಲೆ ಏರಿಕೆ ಸರಕಾರದ ವಿರುದ್ಧ ಜನಾಂದೋಲನ ಮಾಡಲಿದ್ದೇವೆ. ಜನರಲ್ಲಿ ಜಾಗೃತಿ ಮೂಡಿಸಲಿದ್ದೇವೆ ಎಂದರು.

ಬಿಎಸ್‌ವೈ ಯಾರನ್ನೂ ತುಳಿಯುವ ಕೆಲಸ ಮಾಡಿಲ್ಲ : 

ಕೇಂದ್ರದ ವರಿಷ್ಠರು ಹಲವು ಬಾರಿ ಬಸನಗೌಡಪಾಟೀಲ್ ಯತ್ನಾಳ್ ಅವರಿಗೆ ನೋಟಿಸ್ ಕೊಟ್ಟು ಅವರನ್ನು ತಿದ್ದುವ ಪ್ರಯತ್ನ ಮಾಡಿದ್ದಾರೆ. ರಾಜ್ಯಾಧ್ಯಕ್ಷನಾಗಿ ನಾನು ಪಕ್ಷದ ಮುಖಂಡರ ಜೊತೆ ಯತ್ನಾಳರನ್ನು ಭೇಟಿ ಮಾಡಿ ಪಕ್ಷದ ಹಿತದೃಷ್ಟಿಯಿಂದ ಸಣ್ಣಪುಟ್ಟ ಗೊಂದಲ ಸರಿಪಡಿಸಿಕೊಳ್ಳೋಣ ಎಂದಿದ್ದೆ. ಸದನ ಇದ್ದಾಗ ಭೋಜನಕೂಟಕ್ಕೂ ನಾನೇ ಆಹ್ವಾನಿಸಿದ್ದೆ ಎಂದು ಅವರು ಹೇಳಿದರು.

ಯಡಿಯೂರಪ್ಪನವರು ಅನೇಕರನ್ನು ಬೆಳೆಸಿದ್ದಾರೆ. ಅವರು ತಮ್ಮ ಜೀವನದಲ್ಲಿ ಮತ್ತೊಬ್ಬರನ್ನು ತುಳಿಯುವ ಕೆಲಸ ಮಾಡಿಲ್ಲ. ರಾಜ್ಯಾಧ್ಯಕ್ಷನಾಗಿ ನನ್ನ ಕರ್ತವ್ಯದ ಅರಿವು ನನಗೂ ಇದೆ. ಎಲ್ಲವನ್ನೂ ಸರಿಪಡಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಪಕ್ಷದ ಕೇಂದ್ರದ ವರಿಷ್ಠರು ಸಾಕಷ್ಟು ಸಮಯ ಕಾದಿದ್ದಾರೆ. ವರಿಷ್ಠರು ಇದೆಲ್ಲವನ್ನೂ ಗಮನಿಸಿ ಅಂತಿಮವಾಗಿ ಬಸನಗೌಡ ಪಾಟೀಲ್ ಅವರನ್ನು ಉಚ್ಚಾಟಿಸುವ ನಿರ್ಧಾರ ಪ್ರಕಟಿಸಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News