ಅರಣ್ಯದ ಕುರಿತ ಸಂಶೋಧನೆಗಳು ಕನ್ನಡದಲ್ಲಿ ನಡೆಯಲಿ: ಡಾ.ಪುರುಷೋತ್ತಮ ಬಿಳಿಮಲೆ

Update: 2025-03-29 19:53 IST
ಅರಣ್ಯದ ಕುರಿತ ಸಂಶೋಧನೆಗಳು ಕನ್ನಡದಲ್ಲಿ ನಡೆಯಲಿ: ಡಾ.ಪುರುಷೋತ್ತಮ ಬಿಳಿಮಲೆ
  • whatsapp icon

ಬೆಂಗಳೂರು : ಅರಣ್ಯದ ಕುರಿತಾದ ಸಂಶೋಧನಾ ಚಟುವಟಿಕೆಗಳು ಕನ್ನಡದಲ್ಲಿ ನಿರ್ವಹಿಸಿದಲ್ಲಿ ಅದು ಕನ್ನಡದ ಉಳಿವಿಗೆ ತನ್ನದೇ ಕಾಣಿಕೆಯನ್ನು ನೀಡುತ್ತದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಅಭಿಪ್ರಾಯಪಟ್ಟಿದ್ದಾರೆ.

ನಗರದ ಅರಣ್ಯ ಇಲಾಖೆಯ ಪ್ರಧಾನ ಕಚೇರಿಯಲ್ಲಿ ಶನಿವಾರ ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, ಅರಣ್ಯ ಪರಿಸರ ನಾಶವಾಗುವುದು ಸಾಂಸ್ಕೃತಿಕ ದೃಷ್ಠಿಕೋನದಿಂದ ಒಳ್ಳೆಯ ಬೆಳವಣಿಗೆಯಲ್ಲ. ಅರಣ್ಯವನ್ನು ಸಂರಕ್ಷಿಸಿದರೆ ಕನ್ನಡ ಸಂಸ್ಕೃತಿ ಉಳಿಯುವುದು ಎಂದು ಹೇಳಿದರು.

ಕನ್ನಡೇತರ ಅಧಿಕಾರಿಗಳು ಕನ್ನಡದ ಬಗ್ಗೆ ಸಾಕಷ್ಟು ಅಭಿಮಾನ ಹೊಂದಿದ್ದಾರೆ. ಆದರೆ ಹಲವು ಬಾರಿ ಕನ್ನಡದ ಅಧಿಕಾರಿಗಳೇ ಕನ್ನಡದ ಅನುಷ್ಠಾನಕ್ಕೆ ಹಿಂಜರಿಕೆ ತೋರುತ್ತಾರೆ. ಕನ್ನಡದವರಿಗೆ ಕನ್ನಡ ಕಲಿಸುವ ದುಸ್ಥಿತಿಯಲ್ಲಿ ನಾವಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.

ಕನ್ನಡವನ್ನು ಕಡೆಗಣಿಸಿದ ಅಧಿಕಾರಿಗಳ ವಿರುದ್ಧ ಸರಕಾರವು ಕಠಿಣ ಕ್ರಮಕ್ಕೆ ಮುಂದಾದರಷ್ಟೇ ಒಂದು ಹಂತದ ಪರಿಹಾರ ದೊರಕಬಹುದು. ಕನ್ನಡ ಬೆಳವಣಿಗೆ ನಿರೀಕ್ಷೆಗಿಂತಲೂ ಕಡಿಮೆಯಾಗಿರುವುದಕ್ಕೆ ಸಂವಹನದ ಕೊರತೆ ಕಾರಣ. 90ರ ದಶಕದ ಜಾಗತಿಕರಣದ ಬಳಿಕ ಅಸಂಖ್ಯ ಸಣ್ಣ ಭಾಷೆಗಳು ಜನ ಬಳಕೆಯಿಂದ ಮರೆಯಾಗುತ್ತಿದ್ದು, ಕನ್ನಡಕ್ಕೆ ಈ ದುಸ್ಥಿತಿ ಒದಗದೆ ಇರಬೇಕಾದರೆ ಇಲಾಖೆಗಳು ಜನಸಾಮಾನ್ಯರೊಂದಿಗೆ ಕನ್ನಡದಲ್ಲಿ ಉತ್ತಮ ಸಂವಹನವನ್ನು ಸಾಧಿಸಬೇಕು ಎಂದರು.

2022ರಲ್ಲಿ ಜಾರಿಗೆ ಬಂದಿರುವ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಕಾಯ್ದೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದ್ದು, ಈ ಕಾಯ್ದೆ ಅನುಸಾರ ಕನ್ನಡವನ್ನು ನಾಮಫಲಕಗಳಲ್ಲಿ ಶೇ.60ರ ಪ್ರಾತಿನಿಧ್ಯದೊಂದಿಗೆ ಪ್ರದರ್ಶಿಸಬೇಕಿರುತ್ತದೆ. ಅರಣ್ಯ ಇಲಾಖೆಗೆ ಸೇರಿದ ಕಚೇರಿಗಳು, ಸಾರ್ವಜನಿಕ ಸಂಪರ್ಕ ಸ್ಥಳಗಳಲ್ಲಿ ಕನ್ನಡ ಭಾಷೆಗೆ ಸಿಗಬೇಕಾದ ಪ್ರಾತಿನಿಧ್ಯ ದೊರಕುತ್ತಿಲ್ಲ. ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು ಈ ಕುರಿತಂತೆ ಕಾರ್ಯಪ್ರವೃತ್ತರಾಗಬೇಕು ಎಂದು ಸೂಚಿಸಿದರು.

ಆಡಳಿತ ವ್ಯವಸ್ಥೆಯ ಭಾಗವಾಗಿರುವ ಅಧೀನ ಅಧಿಕಾರಿ ಸಿಬ್ಬಂದಿಗೆ ಅರಣ್ಯ ಇಲಾಖೆಯ ತಾಂತ್ರಿಕ ಅಂಶಗಳ ಅರಿವು ಅವಶ್ಯ. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆ ಕೂಡಲೇ ಪಾರಿಭಾಷಿಕ ಪದಕೋಶ ರಚನೆಗೆ ಮುಂದಾಗಬೇಕು ಎಂದರು.

ಈ ಸಂದರ್ಭದಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಕೆ.ಅಮರನಾರಾಯಣ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಸಂತೋಷ ಹಾನಗಲ್ಲ, ಪ್ರಾಧಿಕಾರದ ಸದಸ್ಯ ಡಾ.ವಿ.ಪಿ.ನಿರಂಜನಾರಾಧ್ಯ, ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಟಿ.ಎಸ್.ಫಣಿಕುಮಾರ್, ಅಖಿಲ ಕರ್ನಾಟಕ ಶ್ರೀಗಂಧ ಮತ್ತು ಒಣಕೃಷಿ ಬೆಳೆಗಾರರ ಸಂಘದ ಪ್ರಧಾನ ಕಾರ್ಯದರ್ಶಿ ಛಾಯಾ ಎ.ಎಂ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಸುಭಾಷ್‌ ಕೆ ಮಾಲ್ಖಡೆ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಅಭಿವೃದ್ಧಿ) ಸೀಮಾ ಗರ್ಗ್, ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಅರಣ್ಯ ಸಂಪನ್ಮೂಲ ನಿರ್ವಹಣೆ) ವನಶ್ರೀ ಸಿಂಗ್, ಅಪರ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಆಡಳಿತ ಮತ್ತು ಸಮನ್ವಯ) ಕುಮಾರ್ ಪುಷ್ಕರ್ ಮತ್ತಿತರರು ಹಾಜರಿದ್ದರು.

ಅರಣ್ಯ ಇಲಾಖೆಯಯಲ್ಲಿ ಕನ್ನಡ ಘಟಕ ಸ್ಥಾಪಿಸಿ: ಅರಣ್ಯ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುವ ಕನ್ನಡಿಗರ ಹಿತವನ್ನು ಕಾಯಲು ಕೂಡಲೇ ಕನ್ನಡ ಘಟಕವನ್ನು ಸ್ಥಾಪಿಸಬೇಕು. ಕನ್ನಡಿಗರು ತಮ್ಮದೆ ನೆಲದಲ್ಲಿ ಅನಾಥ ಪ್ರಜ್ಞೆಯಿಂದ ನರಳದಿರಲು ಇಂತಹ ಕನ್ನಡಪರ ನಿಲುವುಗಳು ಅಗತ್ಯವಿದೆ. ಕಾಲಕಾಲಕ್ಕೆ ಕನ್ನಡ ಭಾಷೆ ಸಂಸ್ಕೃತಿಗಳನ್ನು ಪ್ರತಿಬಿಂಬಿಸುವ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಈ ರೀತಿಯ ಕನ್ನಡ ಘಟಕಗಳು ಕನ್ನಡಿಗರ ಸಂವೇದನಾಶೀಲತೆಗೆ ಸಹಕರಿಸಲಿವೆ ಎಂದು ಪುರುಷೋತ್ತಮ ಬಿಳಿಮಲೆ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News