ಬೆಂಗಳೂರು | ಬೀದಿಬದಿ ವ್ಯಾಪಾರಿಗಳಿಗೆ 10 ಸಾವಿರ ತಳ್ಳುವಗಾಡಿ ವಿತರಣೆ: ಡಿ.ಕೆ.ಶಿವಕುಮಾರ್

ಡಿ.ಕೆ.ಶಿವಕುಮಾರ್
ಬೆಂಗಳೂರು : ನಗರದಲ್ಲಿನ ಬೀದಿಬದಿ ವ್ಯಾಪಾರಿಗಳಿಗೆ ಬಿಬಿಎಂಪಿಯಿಂದ ಪ್ರಸಕ್ತ ವರ್ಷದಲ್ಲಿ ಸುಮಾರು 10 ಸಾವಿರ ತಳ್ಳುವ ಗಾಡಿಗಳನ್ನು ನೀಡಲಿದ್ದೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಸೋಮವಾರ ವಿಕಾಸಸೌಧದಲ್ಲಿ 2025-26ನೇ ಸಾಲಿನ ಬಿಬಿಎಂಪಿ ಬಜೆಟ್ ಕುರಿತು ಬೆಂಗಳೂರು ನಗರದ ಶಾಸಕರು, ಸಚಿವರ ಜತೆ ಪೂರ್ವಭಾವಿ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ರಸ್ತೆಬದಿ ಮಳಿಗೆ ನಿರ್ಮಾಣಕ್ಕೆ ಮುಂದಿನ ದಿನಗಳಲ್ಲಿ ಅವಕಾಶವಿಲ್ಲ. ಈ ಬಗ್ಗೆ ನ್ಯಾಯಾಲಯದ ನಿರ್ದೇಶನವೂ ಇದೆ. ಈಗ ಸುಮಾರು 3,778 ಜನ ತಳ್ಳುವ ಗಾಡಿ ನೀಡಿ ಎಂದು ಅರ್ಜಿ ಹಾಕಿದ್ದಾರೆ. ಈ ವರ್ಷ ನಾವು ಸುಮಾರು 10 ಸಾವಿರ ತಳ್ಳುವ ಗಾಡಿಗಳನ್ನು ನೀಡಲಿದ್ದೇವೆ. ಗಾಡಿ ಬೇಕಾದವರು ನೋಂದಣಿ ಮಾಡಿಕೊಳ್ಳಬೇಕು ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ಗಾಡಿಯನ್ನು ಸುಮ್ಮನೆ ನಿಲ್ಲಿಸಿಕೊಳ್ಳುವಂತಿಲ್ಲ. ಪ್ರತಿದಿನ ಎಲ್ಲಿ, ಯಾವ ಜಾಗದಲ್ಲಿ ವಹಿವಾಟು ನಡೆಸಲಾಯಿತು ಎನ್ನುವ ಮಾಹಿತಿ ತಿಳಿದುಕೊಳ್ಳುವ ವ್ಯವಸ್ಥೆ ಜಾರಿಗೆ ತರಲಿದ್ದೇವೆ. ಗಾಡಿಯನ್ನು ಮನೆಯಲ್ಲಿ ನಿಲ್ಲಿಸಿಕೊಳ್ಳುವುದು, ಮತ್ತೊಬ್ಬರಿಗೆ ಮಾರುವುದಕ್ಕೆ ಅವಕಾಶವಿಲ್ಲ ಎಂದು ಡಿ.ಕೆ.ಶಿವಕುಮಾರ್ ಮಾಹಿತಿ ನೀಡಿದರು.
ಇದುವರೆಗೂ ಬಿಬಿಎಂಪಿಯಿಂದ 27,565 ಬೀದಿಬದಿ ವ್ಯಾಪಾರಿಗಳು ನೋಂದಣಿ ಮಾಡಿಕೊಂಡಿದ್ದಾರೆ. ನೋಂದಣಿ ದಿನಾಂಕವನ್ನು ಎಪ್ರಿಲ್ ಕೊನೆಯವರೆಗೆ ವಿಸ್ತರಿಸಲಾಗುವುದು. ನೋಂದಣಿ ಮಾಡಿಕೊಳ್ಳದ ವ್ಯಾಪಾರಿಗಳನ್ನು ಗಡುವು ನಂತರ ತೆರವುಗೊಳಿಸಲಾಗುವುದು. ನೋಂದಣಿ ಮಾಡಿಕೊಂಡವರಿಗೆ ಸಹಾಯಧನ ನೀಡಿ ತಳ್ಳುವ ಗಾಡಿಗಳನ್ನು ನೀಡಲಾಗುವುದು ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.
ಬೀದಿಬದಿ ವ್ಯಾಪಾರದ ಗಾಡಿಗಳು ಆಟೋ, ಬೈಸಿಕಲ್, ಬೈಕ್ ಹಾಗೂ ಸಾಂಪ್ರದಾಯಿಕ ತಳ್ಳುವ ಗಾಡಿ ಮಾದರಿಯಲ್ಲಿ ಪಾಲಿಕೆ ಸಿದ್ಧಪಡಿಸಿದೆ. ಇವುಗಳನ್ನು ತಯಾರಿಸಲು ಟೆಂಡರ್ ಸಹ ಕರೆಯಲಾಗುವುದು. ನೋಂದಣಿ ಮಾಡಿಸಿಕೊಂಡವರ ಪೈಕಿ ಶೇಕಡವಾರು ಪ್ರಮಾಣದಲ್ಲಿ ಈ ಸೌಲಭ್ಯ ನೀಡಲಾಗುವುದು. ಪ್ರತಿ ಬೀದಿಬದಿ ವ್ಯಾಪಾರಿಗಳ ಲೆಕ್ಕಾಚಾರ ಪಾಲಿಕೆ ಬಳಿ ಇರಬೇಕು. ಪೊಲೀಸರು, ಅಧಿಕಾರಿಗಳು, ಗೂಂಡಾಗಳು ತೊಂದರೆ ಕೊಡುತ್ತಾರೆ ಎನ್ನುವ ದೂರುಗಳನ್ನು ತಪ್ಪಿಸಲು ಈ ವ್ಯವಸ್ಥೆ ತರಲಾಗುತ್ತಿದೆ. ಒಂದು ಕುಟುಂಬಕ್ಕೆ ಒಂದೇ ಗಾಡಿ ಎಂದು ತಿಳಿಸಿದರು.
ಶೀಘ್ರದಲ್ಲೇ ಬಿಬಿಎಂಪಿ ಚುನಾವಣೆ: ಬಿಬಿಎಂಪಿ ಚುನಾವಣೆಯನ್ನು ಆದಷ್ಟು ಶೀಘ್ರದಲ್ಲಿಯೇ ನಡೆಸಲು ಸರಕಾರ ತಯಾರಿ ಮಾಡಿಕೊಂಡಿದೆ. ಗ್ರೇಟರ್ ಬೆಂಗಳೂರು ವಿಧೇಯಕಕ್ಕೆ ಈಗಾಗಲೇ ಒಪ್ಪಿಗೆ ಸಿಕ್ಕಿದೆ. ಇದರ ಬಗ್ಗೆ ವಿಪಕ್ಷಗಳು ಜಂಟಿ ಸದನ ಸಮಿತಿ ರಚಿಸುವಂತೆ ಮನವಿ ಮಾಡಿದ್ದೆವು. ಈಗಾಗಲೇ ಅನೇಕರು ತಮ್ಮ ಸಲಹೆಗಳನ್ನು ನೀಡಿದ್ದಾರೆ. ರಾಜ್ಯಪಾಲರು ಎಷ್ಟು ಬೇಗ ಸಹಿ ಹಾಕಿ ಕಳುಹಿಸುತ್ತಾರೋ, ಅಷ್ಟು ಬೇಗ ಪ್ರದೇಶಗಳನ್ನು ಗುರುತಿಸಿ, ಶಾಸಕರ ಬಳಿ ಮತ್ತೊಮ್ಮೆ ಚರ್ಚೆ ಮಾಡಿ ಚುನಾವಣೆಗೆ ತೆರಳುತ್ತೇವೆ. 73, 74ನೇ ತಿದ್ದುಪಡಿ ಬಗ್ಗೆ ನಮಗೆ ಬದ್ಧತೆಯಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.