‘ಫೋನ್ ಕದ್ದಾಲಿಕೆ’ ದೂರು ಬಂದರೆ ಪರಿಶೀಲಿಸಿ ಕ್ರಮ : ಗೃಹ ಸಚಿವ ಪರಮೇಶ್ವರ್

ಬೆಂಗಳೂರು : ‘ಕೆಲ ಸಚಿವರು ಮತ್ತು ಶಾಸಕರ ಫೋನ್ ಕದ್ದಾಲಿಕೆ ಆರೋಪದ ಬಗ್ಗೆ ಈವರೆಗೆ ಯಾವುದೇ ದೂರು ದಾಖಲಾಗಿಲ್ಲ. ದೂರು ಬಂದರೆ ಪರಿಶೀಲಿಸಿ, ಕದ್ದಾಲಿಕೆ ಮಾಡಿದವರ ಮೇಲೆ ಕ್ರಮ ಕೈಗೊಳ್ಳುತ್ತೇವೆ’ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಇಂದಿಲ್ಲಿ ಸ್ಪಷ್ಟಣೆ ನೀಡಿದ್ದಾರೆ.
ಸೋಮವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಯಾವುದೇ ಸಚಿವರು ಅಥವಾ ಶಾಸಕರ ಫೋನ್ ಕದ್ದಾಲಿಕೆಗೆ ನಾನಾಗಲಿ ಅಥವಾ ಮುಖ್ಯಮಂತ್ರಿ ಸಿದ್ದರಾಮಯ್ಯನವರಾಗಲಿ ಯಾರೂ ಅನುಮತಿ ನೀಡಿಲ್ಲ. ಹೀಗಿರುವಾಗ ಫೋನ್ ಕದ್ದಾಲಿಕೆ ಬಗ್ಗೆ ಹೆಚ್ಚಿನ ಮಾಹಿತಿಯೂ ಇಲ್ಲ ಎಂದು ವಿವರಣೆ ನೀಡಿದರು.
ಸಚಿವರೇ ಇರಲಿ ಅಥವಾ ಶಾಸಕರೇ ಆಗಿರಲಿ ತಮ್ಮ ಫೋನ್ ಕದ್ದಾಲಿಕೆಯ ಬಗ್ಗೆ ಸಂಶಯವಿದ್ದರೆ ಸಂಬಂಧಪಟ್ಟ ಪೊಲೀಸರಿಗೆ ದೂರು ನೀಡಿದರೆ ಅದನ್ನು ಪರಿಶೀಲನೆ ನಡೆಸಲಾಗುವುದು. ಅಲ್ಲದೆ, ಯಾರೇ ತಪ್ಪಿತಸ್ಥರಿದ್ದರೂ ಕಾನೂನು ರೀತಿಯಲ್ಲಿ ಕ್ರಮ ಜರುಗಿಸಲಾಗುವುದು ಎಂದು ಪರಮೇಶ್ವರ್ ತಿಳಿಸಿದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಂವಿಧಾನದ ಕುರಿತು ನೀಡಿರುವ ಹೇಳಿಕೆಯನ್ನು ನಾನು ಗಮನಿಸಿಲ್ಲ. ಅವರು ಯಾವ ಅರ್ಥದಲ್ಲಿ ಹೇಳಿದ್ದಾರೆ ಎನ್ನುವುದು ಗೊತ್ತಿಲ್ಲ. ನಮ್ಮ ಪಕ್ಷ ಹಾಗೂ ಸರಕಾರ ಸಂವಿಧಾನಕ್ಕೆ ಬದ್ಧವಾಗಿದೆ. ಈ ಆಶಯದೊಂದಿಗೆ ಬೆಳಗಾವಿಯಲ್ಲಿ ಜೈಬಾಪು, ಜೈಭೀಮ್, ಜೈ ಸಂವಿಧಾನ ಸಮಾವೇಶವನ್ನು ಮಾಡಿದ್ದೇವೆ. ಸಂವಿಧಾನದ ಆಶಯ ಅನುಷ್ಠಾಗೊಳಿಸಲು ಸರಕಾರ ಬದ್ಧವಾಗಿದೆ ಎಂದು ಪರಮೇಶ್ವರ್ ಹೇಳಿದರು.