ಕೇತಗಾನಹಳ್ಳಿ ಬಳಿ ಸರಕಾರಿ ಭೂಮಿ ಒತ್ತುವರಿ ಆರೋಪ : ತಹಶೀಲ್ದಾರ್ ನೋಟಿಸ್ ಪ್ರಶ್ನಿಸಿ ಕುಮಾರಸ್ವಾಮಿ ಅರ್ಜಿ

ಬೆಂಗಳೂರು : ರಾಮನಗರ ಜಿಲ್ಲೆಯ ಬಿಡದಿಯ ಕೇತಗಾನಹಳ್ಳಿ ಬಳಿ ಸರಕಾರಿ ಜಮೀನು ಒತ್ತುವರಿ ಆರೋಪಕ್ಕೆ ಸಂಬಂಧಿಸಿದಂತೆ ತಹಸೀಲ್ದಾರ್ ನೋಟಿಸ್ ಪ್ರಶ್ನಿಸಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅರ್ಜಿ ಸಲ್ಲಿಸಿದ್ದಾರೆ.
6 ಎಕರೆ ಒತ್ತುವರಿ ಸಂಬಂಧ ನೋಟಿಸ್ ಪ್ರಶ್ನಿಸಿ ಎಚ್.ಡಿ.ಕುಮಾರಸ್ವಾಮಿ ಸಲ್ಲಿಸಿರುವ ಅರ್ಜಿಯನ್ನು ಹೈಕೋರ್ಟ್ ನ್ಯಾಯಮೂರ್ತಿ ಎನ್.ಎಸ್. ಸಂಜಯಗೌಡ ಅವರಿದ್ದ ಹೈಕೋರ್ಟ್ ಪೀಠ ವಿಚಾರಣೆ ನಡೆಸಿತು.
ಈ ವೇಳೆ ಎಚ್.ಡಿ.ಕುಮಾರಸ್ವಾಮಿ ಪರವಾಗಿ ಹಿರಿಯ ವಕೀಲ ಉದಯ್ ಹೊಳ್ಳ, ಎ.ವಿ.ನಿಶಾಂತ್ ಅವರು ಅಧಿಕಾರ ವ್ಯಾಪ್ತಿ ಇಲ್ಲದಿದ್ದರೂ ತಹಸೀಲ್ದಾರ್ ನೋಟಿಸ್ ನೀಡಿದ್ದಾರೆ. 1985 ರಲ್ಲಿ ಕ್ರಯಪತ್ರವಾಗಿರುವ ಜಮೀನಿಗೆ ಈಗ ನೋಟಿಸ್ ನೀಡಲಾಗಿದೆ. ನ್ಯಾಯಾಂಗ ನಿಂದನೆ ಪ್ರಕರಣವನ್ನು ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸಲಾಗಿದೆ ಎಂದು ವಾದ ಮಂಡಿಸಿದರು.
ಎಚ್.ಡಿ.ಕುಮಾರಸ್ವಾಮಿ ಪರ ವಕೀಲರ ವಾದಕ್ಕೆ ಎಎಜಿ ಕಿರಣ್ ರೋಣ್ ಆಕ್ಷೇಪಿಸಿ, 2025 ರ ತಿದ್ದುಪಡಿಯನ್ವಯ ತಹಸೀಲ್ದಾರ್‌ಗೆ ಅಧಿಕಾರವಿದೆ. ಈ ಬಗ್ಗೆ ದಾಖಲೆ ಸಲ್ಲಿಸಲು ಕಾಲಾವಕಾಶ ಮನವಿ ಮಾಡಿದರು. ಮಾರ್ಚ್ 27ರವರೆಗೂ ಅರ್ಜಿದಾರರ ವಿರುದ್ಧ ಯಾವುದೇ ವಿಧವಾದ ಬಲವಂತದ ಕ್ರಮ ಕೈಗೊಳ್ಳುವುದಿಲ್ಲ ಎಂದು ಹೇಳಿದರು
ವಾದ ಪ್ರತಿವಾದ ಆಲಿಸಿದ ಪೀಠ ವಿಚಾರಣೆ ಮಾ.27ಕ್ಕೆ ನಿಗದಿಪಡಿಸಿದೆ.