ಪ್ರಮುಖ ನಾಯಕರ ಫೋನ್ ಕದ್ದಾಲಿಕೆ: ಆರ್.ಅಶೋಕ್ ಆರೋಪ

ಆರ್.ಅಶೋಕ್
ಬೆಂಗಳೂರು: ಕಾಂಗ್ರೆಸ್ ಸರಕಾರವು ರಾಜ್ಯದ ಪ್ರಮುಖ ನಾಯಕರ ಫೋನ್ ಕದ್ದಾಲಿಕೆ ಮಾಡುತ್ತಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಆರೋಪ ಮಾಡಿದ್ದಾರೆ.
ಸೋಮವಾರ ವಿಧಾನಸೌಧದ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಸರಕಾರದ ಮಾಡುತ್ತಿರುವ ಫೋನ್ ಕದ್ದಾಲಿಕೆ ಬಗ್ಗೆ ಆಡಳಿತ ಪಕ್ಷದ ಶಾಸಕರೇ ಹೇಳಿದ್ದಾರೆ, ಇದರಲ್ಲಿ ಯಾವುದೇ ಅನುಮಾನವೇ ಬೇಡ ಎಂದರು.
ಫೋನ್ ಕದ್ದಾಲಿಕೆ ಮಾಡುತ್ತಿರುವುದು ನೂರಕ್ಕೆ ನೂರರಷ್ಟು ನಿಜ. ವಿರೋಧಿಗಳನ್ನು ಬಗ್ಗು ಬಡಿಯಬೇಕು ಎಂಬ ಕಾರಣಕ್ಕೆ ಹೀಗೆ ಮಾಡಲಾಗುತ್ತಿದೆ. ಇದರಲ್ಲಿ ಯಾವುದೇ ಅನುಮಾನ ಬೇಡ. ಆಡಳಿತ ಮತ್ತು ವಿರೋಧ ಪಕ್ಷದ ನಾಯಕರ ಫೋನ್ ಕದ್ದಾಲಿಕೆ ಆಗುತ್ತಿದೆ. ನನ್ನ ಮತ್ತು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಫೋನ್ ಕದ್ದಾಲಿಕೆ ಆಗುತ್ತಿದೆ. ಸಚಿವ ಕೆ.ಎನ್. ರಾಜಣ್ಣ ಹಾಗೂ ಅವರ ಪುತ್ರ ಎಂಎಲ್‍ಸಿ ರಾಜೇಂದ್ರ ಅವರ ಫೋನ್ ಕದ್ದಾಲಿಕೆಯೂ ಆಗಿದೆ ಎಂದು ಆರ್.ಅಶೋಕ್ ಆರೋಪಿಸಿದರು.
ಹಲವು ಶಾಸಕರ ಫೋನ್ ಕದ್ದಾಲಿಕೆ ಆಗಿದೆ. ಆಡಳಿತ ಪಕ್ಷದವರದ್ದು ಆಗಿದೆ. ವಿಪಕ್ಷದವರದ್ದು ಆಗಿದೆ. ಫೋನ್ ಕದ್ದಾಲಿಕೆ ಬಗ್ಗೆ ನಾನು ಮತ್ತು ಎಚ್.ಡಿ.ಕುಮಾರಸ್ವಾಮಿ ಅವರು ಮೊದಲಿಂದಲೂ ಆರೋಪ ಮಾಡುತ್ತಿದ್ದೆವು. ಎರಡು ವರ್ಷಗಳಿಂದ ನಮ್ಮ ಫೋನ್ ಕದ್ದಾಲಿಕೆ ಮಾಡುತ್ತಿದ್ದಾರೆ ಎಂದು ಆರ್.ಅಶೋಕ್ ದೂರಿದರು.
ಸಚಿವ ಕೆ.ಎನ್.ರಾಜಣ್ಣ ಹಾಗೂ ಅವರ ಮಗ, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅನುಮತಿ ಪಡೆದು ಹನಿಟ್ರ್ಯಾಪ್ ಬಗ್ಗೆ ಮಾತನಾಡಿದ್ದಾರೆ. ಈ ಮೂಲಕ ಇದರ ಸೂತ್ರದಾರರು ಯಾರೆಂದು ತಿಳಿದು ಬಂದಿದೆ. ಹೊಸದಿಲ್ಲಿಯಿಂದ ಮಲ್ಲಿಕಾರ್ಜುನ ಖರ್ಗೆಯವರೇ ಬಂದು ಚರ್ಚೆ ನಡೆಸುವ ಸ್ಥಿತಿ ಬಂದಿದೆ. ಇಲ್ಲಿ ಕುರ್ಚಿಗಾಗಿ ಕಾದಾಟ ನಡೆಯುತ್ತಿದೆ ಎಂದು ಆರ್.ಅಶೋಕ್ ಟೀಕಿಸಿದರು.