ಗಾಝಾದಲ್ಲಿ ಮುಂದುವರಿದ ಇಸ್ರೇಲ್ ಕಾರ್ಯಾಚರಣೆ : ಕ್ಯಾನ್ಸರ್ ಆಸ್ಪತ್ರೆ ಸ್ಫೋಟ

PC : NDTV
ಗಾಝಾ: ಗಾಝಾ ಪಟ್ಟಿಯಲ್ಲಿ ಇಸ್ರೇಲ್ ಪಡೆಗಳು ಕಾರ್ಯಾಚರಣೆ ಮುಂದುವರಿಸಿದ್ದು ಯುದ್ಧದಿಂದ ಜರ್ಝರಿತಗೊಂಡ ಪ್ರದೇಶದ ಏಕೈಕ ವಿಶೇಷ ಕ್ಯಾನ್ಸರ್ ಆಸ್ಪತ್ರೆಯನ್ನು ಸ್ಫೋಟಿಸಿದೆ ಎಂದು ವರದಿಯಾಗಿದೆ. ಗಾಝಾವನ್ನು ಉತ್ತರ ಮತ್ತು ದಕ್ಷಿಣ ಎಂದು ವಿಭಜಿಸುವ ನೆಟ್ಜಾರಿಮ್ ಕಾರಿಡಾರ್ ನಲ್ಲಿ ಕಾರ್ಯಾಚರಿಸುತ್ತಿದ್ದ `ಟರ್ಕಿ-ಫೆಲೆಸ್ತೀನಿಯನ್ ಫ್ರೆಂಡ್ಶಿಪ್ ' ಆಸ್ಪತ್ರೆಯ ಮೇಲೆ ದಾಳಿ ನಡೆಸಲಾಗಿದೆ. ಈ ಆಸ್ಪತ್ರೆಯು ಯುದ್ಧದ ಸಂದರ್ಭ ವೈದ್ಯರು ಅಥವಾ ರೋಗಿಗಳಿಗೆ ಲಭ್ಯವಿರಲಿಲ್ಲ. ಯಾಕೆಂದರೆ ಇದನ್ನು ಹಮಾಸ್ ಸದಸ್ಯರು ತಮ್ಮ ನೆಲೆಯಾಗಿ ಬಳಸಿಕೊಂಡಿದ್ದರು ಎಂದು ಇಸ್ರೇಲ್ ಮಿಲಿಟರಿ ಹೇಳಿದೆ. ಆದರೆ ಯುದ್ಧದ ಒಂದು ಸಂದರ್ಭದಲ್ಲಿ ಆಸ್ಪತ್ರೆಯನ್ನು ಸೇನಾ ನೆಲೆಯಾಗಿ ಇಸ್ರೇಲ್ ಪಡೆ ಬಳಸಿಕೊಂಡಿತ್ತು ಎಂದು ಆಸ್ಪತ್ರೆಯ ನಿರ್ಮಾಣದಲ್ಲಿ ನೆರವಾಗಿದ್ದ ಟರ್ಕಿ ಹೇಳಿದೆ. `ಕದನ ವಿರಾಮದ ಸಂದರ್ಭ ವೈದ್ಯರ ತಂಡವೊಂದು ಆಸ್ಪತ್ರೆಗೆ ಭೇಟಿ ನೀಡಿತ್ತು. ಆಸ್ಪತ್ರೆಗೆ ಹಾನಿಯಾಗಿದ್ದರೂ ಕೆಲವು ಸೌಲಭ್ಯಗಳು ಉತ್ತಮ ಸ್ಥಿತಿಯಲ್ಲಿದ್ದವು. ಅನೇಕ ರೋಗಿಗಳಿಗೆ ಜೀವಸೆಲೆಯಾಗಿ ಸೇವೆ ಸಲ್ಲಿಸಿದ್ದ ಆಸ್ಪತ್ರೆಯ ಮೇಲೆ ಬಾಂಬ್ ಹಾಕುವುದರಿಂದ ಏನನ್ನು ಸಾಧಿಸಬಹುದು ಎಂದು ತಿಳಿಯುತ್ತಿಲ್ಲ' ಎಂದು ಆಸ್ಪತ್ರೆಯ ಆಂಕೊಲಾಜಿ ವಿಭಾಗದ ಮುಖ್ಯಸ್ಥ ಡಾ. ಝಾಕಿ ಅಲ್-ಜಾಕ್ಜೌಕ್ ಹೇಳಿದ್ದಾರೆ.
ಆಸ್ಪತ್ರೆಯ ಮೇಲಿನ ದಾಳಿಯನ್ನು ಖಂಡಿಸಿರುವ ಟರ್ಕಿ ವಿದೇಶಾಂಗ ಇಲಾಖೆ `ಇಸ್ರೇಲ್ ಉದ್ದೇಶಪೂರ್ವಕವಾಗಿ ಗಾಝಾವನ್ನು ವಾಸ ಯೋಗ್ಯವಲ್ಲದ ಪ್ರದೇಶವನ್ನಾಗಿ ಪರಿವರ್ತಿಸಿ ಫೆಲೆಸ್ತೀನೀಯರನ್ನು ಸ್ಥಳಾಂತರಿಸಲು ಸಂಚು ಹೂಡಿದೆ' ಎಂದು ಟೀಕಿಸಿದೆ. ಆಸ್ಪತ್ರೆಗಳನ್ನು ಮಿಲಿಟರಿ ಉದ್ದೇಶಗಳಿಗಾಗಿ ಬಳಸಿದರೆ ಅಂತರಾಷ್ಟ್ರೀಯ ಕಾನೂನಿನಡಿ ತಮ್ಮ ಸಂರಕ್ಷಿತ ಸ್ಥಾನಮಾನವನ್ನು ಕಳೆದುಕೊಳ್ಳಬಹುದು. ಆದರೆ ಅವುಗಳ ವಿರುದ್ಧದ ಯಾವುದೇ ಕಾರ್ಯಾಚರಣೆಗಳು ಪ್ರಮಾಣಾನುಗುಣವಾಗಿರಬೇಕು. ಗಾಝಾದ ಆರೋಗ್ಯ ರಕ್ಷಣೆ ವ್ಯವಸ್ಥೆಯನ್ನು ಇಸ್ರೇಲ್ ವ್ಯವಸ್ಥಿತವಾಗಿ ನಾಶಗೊಳಿಸುತ್ತಿದೆ ಎಂದು ಮಾನವ ಹಕ್ಕುಗಳ ಗುಂಪುಗಳು ಹಾಗೂ ವಿಶ್ವಸಂಸ್ಥೆಯ ಆರೋಗ್ಯ ತಜ್ಞರು ಖಂಡಿಸಿದ್ದಾರೆ.