ದೀರ್ಘಕಾಲದಿಂದ ಮೇಲ್ಮನವಿಯಲ್ಲಿರುವ ಪ್ರಕರಣಗಳನ್ನು ಹಿರಿತನದ ಆದ್ಯತೆಯಲ್ಲಿ ವಿಚಾರಣೆ: ಸುಪ್ರೀಂ ಕೋರ್ಟ್

Update: 2025-03-22 20:53 IST
Supreme court of India

 ಸುಪ್ರೀಂ ಕೋರ್ಟ್ | PTI 

  • whatsapp icon

ಹೊಸದಿಲ್ಲಿ: ಆರೋಪಿಗಳು ಎಸಗಿದ ಅಪರಾಧವು ನಿರೂಪಿತವಾಗಲು ದೀರ್ಘ ಸಮಯ ತೆಗೆದುಕೊಂಡಿದ್ದರೆ, ಅಂತಹ ಆರೋಪಿಗಳು ಸಲ್ಲಿಸುವ ಮೇಲ್ಮನವಿಗಳ ವಿಚಾರದಲ್ಲಿ ಹಿರಿತನವನ್ನು ಕೊಂಚ ಮಟ್ಟಿನ ಆದ್ಯತಾ ನೆಲೆಯನ್ನಾಗಿ ಪರಿಗಣಿಸಲು ಯಾವಾಗಲೂ ಅವಕಾಶವಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

1989ರಲ್ಲಿ ನಡೆದಿದ್ದ ಘಟನೆಯೊಂದರ ಸಂಬಂಧ ಸಲ್ಲಿಸಲಾಗಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾ. ಅಭಯ್ ಎಸ್. ಓಕಾ, ನ್ಯಾ. ಅಹ್ಸಾನುದ್ದೀನ್ ಅಮಾನುಲ್ಲಾ ಹಾಗೂ ನ್ಯಾ. ಆಗಸ್ಟಿನ್ ಜಾರ್ಜ್ ಮಾಸಿಹ್ ಅವರನ್ನೊಳಗೊಂಡಿದ್ದ ನ್ಯಾಯಪೀಠ, ಅಪರಾಧಿಗಳೆಂದು ಘೋಷಿತಗೊಂಡು, ಜಾಮೀನಿನ ಮೇಲೆ ಬಿಡುಗಡೆಗೊಂಡಿರುವ ಆರೋಪಿಗಳು, ವಿಶೇಷವಾಗಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಆರೋಪಿಗಳು ಸಲ್ಲಿಸುವ ಮೇಲ್ಮನವಿಗಳನ್ನು ಅವು ದಾಖಲಾದ ಒಂದು ದಶಕ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯ ನಂತರ ವಿಚಾರಣೆಗೊಳಪಡಿಸಿದರೆ ಹಾಗೂ ಒಂದು ವೇಳೆ ಆ ಮೇಲ್ಮನವಿಯನ್ನು ವಜಾಗೊಳಿಸಿದರೆ, ಒಂದು ದಶಕಕ್ಕಿಂತ ಹೆಚ್ಚಿನ ಅವಧಿಯ ನಂತರ ಅಂತಹ ಆರೋಪಿಗಳನ್ನು ಜೈಲಿಗೆ ವಾಪಸು ಕಳಿಸುವ ಕುರಿತು ಪ್ರಶ್ನೆಯೇಳುತ್ತದೆ ಎಂದು ಅಭಿಪ್ರಾಯ ಪಟ್ಟಿದೆ.

ಹೀಗಾಗಿ, ಜಾಮೀನಿನ ಮೇಲೆ ಬಿಡುಗಡೆಗೊಂಡಿರುವ ಕೆಲವು ನಿರ್ದಿಷ್ಟ ವರ್ಗದ ಆರೋಪಿಗಳ ಮೇಲ್ಮನವಿಗಳಿಗೆ ಆದ್ಯತೆ ನೀಡುವುದು ಅಪೇಕ್ಷಣೀಯವಾಗಿದೆ ಎಂದು ನ್ಯಾಯಾಲಯ ಹೇಳಿದೆ.

“ನಮ್ಮ ದೇಶದಲ್ಲಿನ ಎಲ್ಲ ಪ್ರಮುಖ ಹೈಕೋರ್ಟ್ ಗಳಲ್ಲಿ ಅಪರಾಧಿಗಳೆಂದು ನಿರೂಪಿತಗೊಂಡ ಪ್ರಕರಣಗಳು ಹಾಗೂ ಖುಲಾಸೆಗೊಂಡ ಪ್ರಕರಣಗಳನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಮೇಲ್ಮನವಿಗಳು ಬೃಹತ್ ಪ್ರಮಾಣದಲ್ಲಿ ಬಾಕಿ ಉಳಿದಿವೆ. ಬಾಕಿಯುಳಿದಿರುವ ತುಂಬಾ ಹಳೆಯ ಕ್ರಿಮಿನಲ್ ಪ್ರಕರಣಗಳನ್ನು ಪರಿಗಣನೆಗೆ ತೆಗೆದುಕೊಂಡು, ಸಾಮಾನ್ಯವಾಗಿ ಕಾರಾಗೃಹದಲ್ಲಿರುವ ಆರೋಪಿಗಳ ಮೇಲ್ಮನವಿಗಳ ವಿಚಾರಣೆಗೆ ಆದ್ಯತೆ ನೀಡಬೇಕಾಗುತ್ತದೆ. ಹೀಗಾಗಿ, ಜಾಮೀನಿನ ಮೇಲೆ ಬಿಡುಗಡೆಗೊಂಡಿರುವ ಅಪರಾಧಿಗಳೆಂದು ಘೋಷಿತಗೊಂಡಿರುವ ಆರೋಪಿಗಳ ಮೇಲ್ಮನವಿಗಳು ಹಿನ್ನೆಲೆಗೆ ಸರಿಯಬೇಕಾಗುತ್ತದೆ. ಹೀಗಿದ್ದೂ, ಜಾಮೀನಿನ ಮೇಲೆ ಬಿಡುಗಡೆಗೊಂಡಿರುವ ಅಪರಾಧಿಗಳೆಂದು ಘೋಷಿತಗೊಂಡಿರುವ ಆರೋಪಿಗಳ ಮೇಲ್ಮನವಿಗಳನ್ನೂ ವಿಚಾರಣೆಗೊಳಪಡಿಸಲು ಸಮತೋಲನದ ನಿರ್ಧಾರ ಕೈಗೊಳ್ಳಬೇಕಾಗುತ್ತದೆ” ಎಂದೂ ನ್ಯಾಯಪೀಠ ಅಭಿಪ್ರಾಯ ಪಟ್ಟಿದೆ.

ಇದಕ್ಕೂ ಮುನ್ನ, ಆಗಸ್ಟ್ 24, 2017ರ ತನ್ನ ತೀರ್ಪಿನಲ್ಲಿ ಪ್ರತಿವಾದಿಗಳ ಅಪರಾಧವನ್ನು ಹತ್ಯೆಯಿಂದ ನರಹತ್ಯೆಯಲ್ಲದ ಹತ್ಯೆ ಅಪರಾಧವನ್ನಾಗಿ ಮಾರ್ಪಡಿಸಿ, ಆ ಶಿಕ್ಷೆಗೆ ಗುರಿಯಾಗಿದ್ದ ಎಲ್ಲ ಆರೋಪಿಗಳನ್ನೂ ಬಿಡುಗಡೆಗೊಳಿಸಿದ್ದ ಮಧ್ಯಪ್ರದೇಶ ಹೈಕೋರ್ಟ್ ನ ತೀರ್ಪನ್ನು ಪ್ರಶ್ನಿಸಿ ಮಧ್ಯಪ್ರದೇಶ ಸರಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ಮಾರ್ಚ್ 20, 2025ರ ತನ್ನ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ವಜಾಗೊಳಿಸಿತ್ತು.

1989ರಲ್ಲಿ ಅಪರಾಧ ಘಟನೆ ನಡೆದಿದ್ದದ್ದು ಹಾಗೂ ಪ್ರಥಮ ಪ್ರತಿವಾದಿ ಶ್ಯಾಮ್ ಲಾಲ್ ಗೆ ಸುಮಾರು 80 ವರ್ಷ ಹಾಗೂ ಇನ್ನಿತರ ನಾಲ್ವರು ಪ್ರತಿವಾದಿಗಳಿಗೆ 70 ವರ್ಷಕ್ಕಿಂತ ಹೆಚ್ಚು ವಯಸ್ಸಾಗಿರುವುದನ್ನು ಪರಿಗಣನೆಗೆ ತೆಗೆದುಕೊಂಡಿದ್ದ ಮಧ್ಯಪ್ರದೇಶ ಹೈಕೋರ್ಟ್, ಅವರನ್ನೆಲ್ಲ ಜೈಲಿನಿಂದ ಬಿಡುಗಡೆಗೊಳಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News