ನಾಗ್ಪುರ ಹಿಂಸಾಚಾರದ ಗಾಯಾಳು ಆಸ್ಪತ್ರೆಯಲ್ಲಿ ಮೃತ್ಯು

PC : PTI
ನಾಗ್ಪುರ: ಮಹಾರಾಷ್ಟ್ರದ ನಾಗ್ಪುರದಲ್ಲಿ ಮಾ.17ರಂದು ನಡೆದಿದ್ದ ಹಿಂಸಾಚಾರದಲ್ಲಿ ಗಂಭೀರವಾಗಿ ಗಾಯಗೊಂಡು ಇಂದಿರಾ ಗಾಂಧಿ ಸರಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆ(ಐಜಿಸಿಎಂಸಿಎಚ್)ಗೆ ದಾಖಲಾಗಿದ್ದ ಇರ್ಫಾನ್ ಅನ್ಸಾರಿ(40) ಎನ್ನುವವರು ಚಿಕಿತ್ಸೆ ಫಲಕಾರಿಯಾಗದೇ ಶನಿವಾರ ಕೊನೆಯುಸಿರೆಳೆದಿದ್ದಾರೆ ಎಂದು ಅಧಿಕಾರಿಯೋರ್ವರು ತಿಳಿಸಿದರು.
ವೆಲ್ಡರ್ ಆಗಿದ್ಧ ಅನ್ಸಾರಿ ಇಟಾರ್ಸಿಗೆ ಪ್ರಯಾಣಿಸಲು ಸೋಮವಾರ ರಾತ್ರಿ 11 ಗಂಟೆಯ ಸುಮಾರಿಗೆ ಹಿಂಸಾಚಾರ ಪೀಡಿತ ಪ್ರದೇಶಗಳಲ್ಲೊಂದಾಗಿದ್ದ ನಾಗ್ಪುರ ರೈಲು ನಿಲ್ದಾಣಕ್ಕೆಂದು ಮನೆಯನ್ನು ಬಿಟ್ಟಿದ್ದರು.
ಛತ್ರಪತಿ ಸಂಭಾಜಿ ನಗರದಲ್ಲಿರುವ ಮುಘಲ್ ದೊರೆ ಔರಂಗಜೇಬ್ ಗೋರಿಯನ್ನು ತೆರವುಗೊಳಿಸುವಂತೆ ಆಗ್ರಹಿಸಿ ವಿಹಿಂಪ ನೇತೃತ್ವದಲ್ಲಿ ಪ್ರತಿಭಟನೆಯ ಸಂದರ್ಭದಲ್ಲಿ ಕುರ್ಆನ್ ಶ್ಲೋಕಗಳಿದ್ದ ‘ಚಾದರ್’ನ್ನು ಸುಟ್ಟುಹಾಕಲಾಗಿದೆ ಎಂಬ ವದಂತಿಗಳು ಹರಡಿದ ಬಳಿಕ ಮಾ.17ರಂದು ನಾಗ್ಪುರದ ಹಲವು ಕಡೆಗಳಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು. ವ್ಯಾಪಕ ಕಲ್ಲು ತೂರಾಟ ಮತ್ತು ಬೆಂಕಿ ಹಚ್ಚುವಿಕೆ ಘಟನೆಗಳು ನಡೆದಿದ್ದವು.
ಅನ್ಸಾರಿ ಕುಟುಂಬವು ಐಜಿಸಿಎಂಸಿಎಚ್ ನಿಂದ ದೂರವಾಣಿ ಕರೆಯೊಂದನ್ನು ಸ್ವೀಕರಿಸಿದ್ದು,ಅಪಘಾತದ ಬಳಿಕ ಗಾಯಗೊಂಡಿರುವ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದಷ್ಟೇ ತಿಳಿಸಲಾಗಿತ್ತು.
ಅನ್ಸಾರಿಯವರ ತಲೆಗೆ ಗಂಭೀರ ಗಾಯಗಳಾಗಿವೆ ಮತ್ತು ಕಾಲು ಮುರಿದಿದೆ. ಐಸಿಯುನಲ್ಲಿ ದಾಖಲಿಸಲಾಗಿದ್ದು,ಆಮ್ಲಜನಕವನ್ನು ನೀಡಲಾಗುತ್ತಿದೆ ಎಂದು ಅವರ ಸೋದರ ಇಮ್ರಾನ್ ಈ ಮೊದಲು ಸುದ್ದಿಸಂಸ್ಥೆಗೆ ತಿಳಿಸಿದ್ದರು.
ರೈಲ್ವೆ ನಿಲ್ದಾಣಕ್ಕೆ ಹೋಗುವಾಗ ಅನ್ಸಾರಿಗೆ ಏನಾಗಿತ್ತು ಎನ್ನುವುದು ಅವರ ಕುಟುಂಬಕ್ಕೆ ತಿಳಿದಿರಲಿಲ್ಲ.