ನಾಗಪುರ ಗಲಭೆಕೋರರ ವಿರುದ್ಧ ಬುಲ್ಡೋಝರ್ ಕಾರ್ಯಾಚರಣೆ: ಫಡ್ನವೀಸ್ ಎಚ್ಚರಿಕೆ

ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ | PTI
ಮುಂಬೈ: ನಾಗಪುರದಲ್ಲಿ ಇತ್ತೀಚೆಗೆ ನಡೆದ ಹಿಂಸಾಚಾರದ ವೇಳೆ ಹಾನಿಗೊಂಡಿರುವ ಸಾರ್ವಜನಿಕ ಸೊತ್ತುಗಳ ವೆಚ್ಚವನ್ನು ಗಲಭೆಕೋರರಿಂದಲೇ ವಸೂಲು ಮಾಡಲಾಗುವುದು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಶನಿವಾರ ಹೇಳಿದ್ದಾರೆ.
ಅವರು ವೆಚ್ಚವನ್ನು ಪಾವತಿಸದಿದ್ದರೆ ಅವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಹೇಳಿದ ಅವರು, ‘‘ಬುಲ್ಡೋಝರ್ ಕಾರ್ಯಾಚರಣೆ’’ಯನ್ನು ನಡೆಸುವ ಎಚ್ಚರಿಕೆಯನ್ನೂ ನೀಡಿದರು.
‘‘ಏನು ಹಾನಿ ಸಂಭವಿಸಿದೆಯೋ, ಅದೆಲ್ಲವನ್ನೂ ಗಲಭೆಕೋರರಿಂದ ವಶಪಡಿಸಿಕೊಳ್ಳಲಾಗುವುದು. ಅವರು ವೆಚ್ಚವನ್ನು ಕೊಡದಿದ್ದರೆ ಅವರ ಆಸ್ತಿಗಳನ್ನು ಮಾರಾಟ ಮಾಡಿ ಹಾನಿಯನ್ನು ತುಂಬಿಸಿಕೊಳ್ಳಲಾಗುವುದು. ಅಗತ್ಯ ಇರುವಲ್ಲೆಲ್ಲಾ ಬುಲ್ಡೋಝರ್ಗಳನ್ನು ಬಳಸಲಾಗುವುದು’’ ಎಂದು ಫಡ್ನವೀಸ್ ಹೇಳಿರುವುದಾಗಿ ಎಎನ್ಐ ವರದಿ ಮಾಡಿದೆ.
ಛತ್ರಪತಿ ಸಂಭಾಜಿನಗರದಲ್ಲಿರುವ ಮುಘಲ್ ದೊರೆ ಔರಂಗಜೇಬ್ ಗೋರಿಯನ್ನು ತೆರವುಗೊಳಿಸಬೇಕೆಂದು ಒತ್ತಾಯಿಸಿ ಇತ್ತೀಚೆಗೆ ವಿಶ್ವ ಹಿಂದೂ ಪರಿಷತ್ ನಡೆಸಿದ ಪ್ರತಿಭಟನೆಯ ವೇಳೆ ಕುರ್ಆನ್ ವಾಕ್ಯಗಳಿದ್ದ ಛಾದರ್ ಒಂದನ್ನು ಸುಡಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ನಾಗಪುರದಲ್ಲಿ ಮಾರ್ಚ್ 17ರಂದು ಹಿಂಸಾಚಾರ ಭುಗಿಲೆದ್ದಿತ್ತು. ಗಲಭೆಯಲ್ಲಿ ಮೂವರು ಹಿರಿಯ ಪೊಲೀಸ್ ಅಧಿಕಾರಿಗಳು ಸೇರಿದಮತೆ ಹಲವು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ ಹಾಗೂ ಹಲವಾರು ವಾಹನಗಳು ಮತ್ತು ಮನೆಗಳಿಗೆ ಹಾನಿಯಾಗಿವೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 40 ವರ್ಷದ ವ್ಯಕ್ತಿಯೊಬ್ಬರು ಶನಿವಾರ ಕೊನೆಯುಸಿರೆಳೆದಿದ್ದಾರೆ.
‘‘ಗಲಭೆಯಲ್ಲಿ ಶಾಮೀಲಾದವರು ಮತ್ತು ಗಲಭೆಕೋರರಿಗೆ ಸಹಾಯ ಮಾಡಿದವರ ವಿರುದ್ಧ ಪೊಲೀಸರು ಕ್ರಮ ತೆಗೆದುಕೊಳ್ಳುತ್ತಾರೆ’’ ಎಂದು ಫಡ್ನವೀಸ್ ಹೇಳಿರುವುದಾಗಿ ಎಎನ್ಐ ವರದಿ ಮಾಡಿದೆ. ‘‘ಸಾಮಾಜಿಕ ಮಾಧ್ಯಮದಲ್ಲಿ ಊಹಾಪೋಹಗಳನ್ನು ಹರಡಿದವರನ್ನು ಸಹ ಆರೋಪಿಗಳನ್ನಾಗಿ ಮಾಡಲಾಗುವುದು. ಈವರೆಗೆ 68 ಸಾಮಾಜಿಕ ಮಾಧ್ಯಮ ಪೋಸ್ಟ್ಗಳನ್ನು ಗುರುತಿಸಿ ಅಳಿಸಿ ಹಾಕಲಾಗಿದೆ’’ ಎಂಬುದಾಗಿಯೂ ಅವರು ಹೇಳಿದರು.