ಕೆಂಪೇಗೌಡ ಪ್ರತಿಮೆ ಖ್ಯಾತಿಯ ಹಿರಿಯ ಶಿಲ್ಪಿ ರಾಮ ಸುತಾರ್‌ಗೆ ಮಹಾರಾಷ್ಟ್ರ ಭೂಷಣ ಪ್ರಶಸ್ತಿ

ರಾಮ ಸುತಾರ್ | PC : indiatoday.in
ಮುಂಬೈ: ಹಿರಿಯ ಶಿಲ್ಪಿ,ಶತಾಯುಷಿ ರಾಮ ಸುತಾರ್ ಅವರು ಮಹಾರಾಷ್ಟ್ರ ಸರಕಾರದ ಅತ್ಯುನ್ನತ ನಾಗರಿಕ ಗೌರವವಾಗಿರುವ ಪ್ರತಿಷ್ಠಿತ ’ಮಹಾರಾಷ್ಟ್ರ ಭೂಷಣ’ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ವಿಶ್ವದಲ್ಲಿಯೇ ಅತ್ಯಂತ ಎತ್ತರದ ಗುಜರಾತಿನ ಏಕತಾ ವಿಗ್ರಹವನ್ನು ಸುತಾರ್ ವಿನ್ಯಾಸಗೊಳಿಸಿದ್ದರು. ಭಾರತದ ರಾಜಕೀಯ ಏಕೀಕರಣದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದ ದೇಶದ ಮೊದಲ ಉಪಪ್ರಧಾನಿ ಹಾಗೂ ಗೃಹಸಚಿವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಗೌರವಾರ್ಥ ಈ ಪ್ರತಿಮೆಯನ್ನು ನಿರ್ಮಿಸಲಾಗಿದೆ.
ಸಂಸತ್ತಿನಲ್ಲಿ ಕುಳಿತಿರುವ ಭಂಗಿಯಲ್ಲಿರುವ ಮಹಾತ್ಮಾ ಗಾಂಧಿಯವರ ಪ್ರತಿಮೆಯು ಸುತಾರ್ ಸೃಷ್ಟಿಯಾಗಿದ್ದು, ಬೆಂಗಳೂರಿನ ವಿಧಾನ ಸೌಧದಲ್ಲಿ ಅದರ ಬೃಹತ್ ಪ್ರತಿಕೃತಿಯನ್ನೂ ಅವರೇ ನಿರ್ಮಿಸಿದ್ದರು.
ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ 108 ಅಡಿ ಎತ್ತರದ ಕೆಂಪೇಗೌಡರ ಪ್ರತಿಮೆಯೂ ಅವರ ಕೈಗಳಿಂದಲೇ ಮೂಡಿದೆ.
ಭಾರತೀಯ ಸಂವಿಧಾನದ ಮುಖ್ಯ ಶಿಲ್ಪಿಯ ಗೌರವಾರ್ಥ ಮುಂಬೈನ ಇಂದು ಮಿಲ್ಸ್‌ನಲ್ಲಿಯ ಬೃಹತ್ ಸ್ಮಾರಕದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆಯನ್ನೂ ಸುತಾರ್ ವಿನ್ಯಾಸಗೊಳಿಸುತ್ತಿದ್ದಾರೆ.
ಉತ್ತರ ಪ್ರದೇಶದ ಅಯೋಧ್ಯೆಯ ರಾಮ ಮಂದಿರಕ್ಕಾಗಿ ಶ್ರೀರಾಮನ ಪ್ರತಿಮೆಯನ್ನೂ ಧುಲೆ ಸಂಜಾತ ಸುತಾರ್ ನಿರ್ಮಿಸುತ್ತಿದ್ದಾರೆ.