ನಕಲಿ ಮತದಾರರ ಪತ್ತೆಗಾಗಿ ಸಾಫ್ಟ್‌ವೇರ್‌ನಲ್ಲಿ ಹೊಸ ವೈಶಿಷ್ಟ್ಯ ಪರಿಚಯಿಸಿದ ಚುನಾವಣಾ ಆಯೋಗ
Photo: PTI
ಹೊಸದಿಲ್ಲಿ: ಟಿಎಂಸಿ ‘ನಕಲಿ ಮತದಾರರ’ ವಿಷಯವನ್ನು ಎತ್ತಿರುವ ನಡುವೆಯೇ,ನಕಲಿ ಮತದಾರರನ್ನು ಪತ್ತೆ ಹಚ್ಚಲು ತನ್ನ ಸಾಫ್ಟ್‌ವೇರ್‌ನಲ್ಲಿ ಹೊಸ ವೈಶಿಷ್ಟ್ಯವನ್ನು ಪರಿಚಯಿಸಲು ಚುನಾವಣಾ ಆಯೋಗವು ನಿರ್ಧರಿಸಿದೆ ಎಂದು ಅಧಿಕಾರಿಯೋರ್ವರು ತಿಳಿಸಿದರು.
ಹೊಸ ವೈಶಿಷ್ಟ್ಯವು ನಿರ್ದಿಷ್ಟ ಮತದಾರರ ಗುರುತಿನ ಚೀಟಿ (ಎಪಿಕ್)ಯ ಸಂಖ್ಯೆಯೊಂದಿಗೆ ಹಲವಾರು ಹೆಸರುಗಳು ತಳುಕು ಹಾಕಿಕೊಂಡಿವೆಯೇ ಎನ್ನುವುದನ್ನು ಕಂಡುಕೊಳ್ಳಲು ಚುನಾವಣಾ ನೋಂದಣಿ ಅಧಿಕಾರಿಗಳಿಗೆ ನೆರವಾಗುತ್ತದೆ. ಈ ನಿರ್ಧಾರದ ಬಗ್ಗೆ ಎಲ್ಲ ರಾಜ್ಯಗಳ ಮುಖ್ಯ ಚುನಾವಣಾಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ ಎಂದರು.
ಡುಪ್ಲಿಕೇಟ್ ಎಪಿಕ್ ಸಂಖ್ಯೆಗಳನ್ನು ಸರಿಪಡಿಸಲು ನೂತನ ಮಾಡ್ಯೂಲ್ ಕುರಿತು ಮಾಹಿತಿ ನೀಡಿ ರಾಜ್ಯಗಳ ಮುಖ್ಯ ಚುನಾವಣಾಧಿಕಾರಿಗಳಿಗೆ ಸೋಮವಾರ ಪತ್ರವನ್ನು ರವಾನಿಸಲಾಗಿದೆ ಎಂದು ಅಧಿಕಾರಿ ತಿಳಿಸಿದರು.
ಪ.ಬಂಗಾಳದ ಪ್ರಭಾರ ಮುಖ್ಯ ಚುನಾವಣಾಧಿಕಾರಿ ದಿವ್ಯೇಂದು ದಾಸ್ ಅವರು ಸೋಮವಾರ ಜಿಲ್ಲೆಗಳ ಹಿರಿಯ ಅಧಿಕಾರಿಗಳೊಂದಿಗೆ ವರ್ಚುವಲ್ ಸಭೆ ನಡೆಸಿ ಆಯೋಗದ ನಿರ್ಧಾರದ ಕುರಿತು ಅವರಿಗೆ ಮಾಹಿತಿ ನೀಡಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿಗಳಲ್ಲಿ ತಿದ್ದುಪಡಿಗಳನ್ನು ಮಾ.21ರೊಳಗೆ ಪೂರ್ಣಗೊಳಿಸುವಂತೆ ಆದೇಶಿಸಲಾಗಿದೆ ಎಂದರು.