ಮಿನಿ ಬಸ್ ಹೊತ್ತಿ ಉರಿದು ನಾಲ್ವರು ಮೃತಪಟ್ಟ ಪ್ರಕರಣಕ್ಕೆ ತಿರುವು; ವೇತನ ಕಡಿತದಿಂದ ಅಸಮಾಧಾನಗೊಂಡು ವಾಹನಕ್ಕೆ ಬೆಂಕಿ ಹಚ್ಚಿದ್ದ ಚಾಲಕ

Photo credit: PTI
ಪುಣೆ: ಬುಧವಾರ ಪುಣೆ ಬಳಿ ಖಾಸಗಿ ಸಂಸ್ಥೆಯೊಂದರ ಮಿನಿ ಬಸ್‌ನಲ್ಲಿ ಸಂಭವಿಸಿದ್ದ ಅಗ್ನಿ ಅವಘಡ ಪ್ರಕರಣಕ್ಕೆ ಹೊಸ ತಿರುವು ದೊರೆತಿದ್ದು, ಕಂಪನಿಯ ಕೆಲ ಸಿಬ್ಬಂದಿಗಳೊಂದಿಗಿನ ವೈಮನಸ್ಸು ಹಾಗೂ ವೇತನ ಕಡಿತದಿಂದ ಅಸಮಾಧಾನಗೊಂಡಿದ್ದ ಚಾಲಕನೇ ಮಿನಿ ಬಸ್‌ಗೆ ಬೆಂಕಿ ಹಚ್ಚಿದ್ದ ಎಂಬ ಸಂಗತಿ ತನಿಖೆಯ ವೇಳೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆಯಲ್ಲಿ ಖಾಸಗಿ ಕಂಪನಿಯೊಂದರ ನಾಲ್ವರು ಉದ್ಯೋಗಿಗಳು ಮೃತಪಟ್ಟಿದ್ದರು.
ಈ ಕುರಿತು PTI ಸುದ್ದಿ ಸಂಸ್ಥೆಗೆ ಪ್ರತಿಕ್ರಿಯೆ ನೀಡಿದ ಪಿಂಪ್ರಿ-ಚಿಂಚ್ವಾಡ್ ವಲಯದ ಉಪ ಪೊಲೀಸ್ ಆಯುಕ್ತ ವಿಶಾಲ್ ಗಾಯಕ್ವಾಡ್, "ಬೆಂಕಿ ಅವಘಡ ಆಕಸ್ಮಿಕವಲ್ಲ, ಬದಲಿಗೆ ದುಷ್ಕೃತ್ಯ ಎಂಬುದು ತನಿಖೆಯ ವೇಳೆ ಪತ್ತೆಯಾಗಿದೆ" ಎಂದು ತಿಳಿಸಿದ್ದಾರೆ.
ಆರೋಪಿಯನ್ನು ಚಾಲಕ ಜನಾರ್ದನ್ ಹಂಬರ್ಡೇಕರ್ ಎಂದು ಗುರುತಿಸಲಾಗಿದ್ದು, ಆತನಿಗೆ ಕಂಪನಿಯ ಕೆಲವು ಉದ್ಯೋಗಿಗಳೊಂದಿಗೆ ವೈಮನಸ್ಸು ಇದ್ದುದರಿಂದ, ಪ್ರತೀಕಾರ ತೀರಿಸಿಕೊಳ್ಳಲು ಈ ಕೃತ್ಯವೆಸಗಿದ್ದಾನೆ ಎಂದು ಅವರು ತಿಳಿಸಿದ್ದಾರೆ. ವೇತನ ಕಡಿತದಿಂದಲೂ ಆರೋಪಿ ಚಾಲಕ ಅಸಮಾಧಾನಗೊಂಡಿದ್ದ ಎಂದು ಅವರು ಹೇಳಿದ್ದಾರೆ.
ಆದರೆ, ಮೃತಪಟ್ಟ ನಾಲ್ವರು ಉದ್ಯೋಗಿಗಳ ಪೈಕಿ, ಅರೋಪಿ ಚಾಲಕನು ಸೇಡು ಹೊಂದಿದ್ದ ಯಾವೊಬ್ಬ ಉದ್ಯೋಗಿಯೂ ಮೃತಪಟ್ಟಿಲ್ಲ ಎಂದು ಉಪ ಪೊಲೀಸ್ ಆಯುಕ್ತ ವಿಶಾಲ್ ಗಾಯಕ್ವಾಡ್ ತಿಳಿಸಿದ್ದಾರೆ.
ಬುಧವಾರ ಬೆಳಗ್ಗೆ 14 ಮಂದಿ ಉದ್ಯೋಗಿಗಳನ್ನು ಕರೆದೊಯ್ಯುತ್ತಿದ್ದ ವ್ಯೋಮಾ ಗ್ರಾಫಿಕ್ಸ್ ಕಂಪನಿ ಮಾಲಕತ್ವದ ಮಿನಿ ಬಸ್‌ಗೆ ಪುಣೆ ನಗರದ ಹಿಂಜವಾಡಿ ಪ್ರದೇಶದಲ್ಲಿ ಬೆಂಕಿ ಹೊತ್ತಿಕೊಂಡಿದ್ದ ಘಟನೆ ಸಂಭವಿಸಿತ್ತು.