ಪ್ರಧಾನಿ ಮೋದಿಯ ವಿದೇಶಿ ಪ್ರವಾಸಕ್ಕೆ ಕೇಂದ್ರ ಸರಕಾರ ಎಷ್ಟು ಕೋಟಿ ಖರ್ಚು ಮಾಡಿದೆ ಗೊತ್ತೇ?

ಪ್ರಧಾನಿ ನರೇಂದ್ರ ಮೋದಿ (PTI)
ಹೊಸದಿಲ್ಲಿ: 2023ರ ಪ್ರಧಾನಿ ನರೇಂದ್ರ ಮೋದಿಯ ಅಮೆರಿಕ ಪ್ರವಾಸಕ್ಕೆ 22 ಕೋಟಿ ರೂ.ಗೂ ಹೆಚ್ಚು ಮೊತ್ತವನ್ನು ವ್ಯಯಿಸಲಾಗಿದೆ ಎಂದು ಕೇಂದ್ರ ಸರಕಾರ ಬಿಡುಗಡೆ ಮಾಡಿರುವ ದತ್ತಾಂಶದಲ್ಲಿ ಹೇಳಲಾಗಿದೆ.
ರಾಜ್ಯಸಭಾ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿಯವರ ವಿದೇಶಿ ಪ್ರವಾಸಗಳಿಗೆ ಮಾಡಲಾಗಿರುವ ವೆಚ್ಚದ ಕುರಿತು ಕೇಳಿದ ಪ್ರಶ್ನೆಗೆ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಪಬಿತ್ರ ಮಾರ್ಗರೀಟಾ ಅವರು ಮೇಲಿನ ಲಿಖಿತ ದತ್ತಾಂಶವನ್ನು ಗುರುವಾರ ರಾಜ್ಯಸಭೆಗೆ ಒದಗಿಸಿದರು.
ಇದಕ್ಕೂ ಮುನ್ನ, ಪ್ರಧಾನಿ ನರೇಂದ್ರ ಮೋದಿ ಕಳೆದ ಮೂರು ವರ್ಷಗಳಲ್ಲಿ ಕೈಗೊಂಡಿದ್ದ ವಿದೇಶಿ ಪ್ರವಾಸಗಳ ವ್ಯವಸ್ಥೆಗಾಗಿ ರಾಜತಾಂತ್ರಿಕ ಕಚೇರಿಗಳು ಇಲ್ಲಿಯವರೆಗೆ ಎಷ್ಟು ವೆಚ್ಚ ಮಾಡಿವೆ ಎಂದು ರಾಜ್ಯಸಭಾ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದರು.
ಪ್ರಮುಖ ಲೆಕ್ಕ ಶೀರ್ಷಿಕೆಗಳಾದ ಹೋಟೆಲ್ ವ್ಯವಸ್ಥೆ, ಸಾರಿಗೆ ವ್ಯವಸ್ಥೆ ಹಾಗೂ ಇನ್ನಿತರ ವ್ಯವಸ್ಥೆಗಳಿಗಾಗಿ ಮಾಡಲಾಗಿರುವ ವೆಚ್ಚವನ್ನು ಪ್ರವಾಸಾವಾರು ವಿವರಗಳೊಂದಿಗೆ ಒದಗಿಸಿ ಎಂದೂ ಅವರು ಕೋರಿದ್ದರು.
ಅದಕ್ಕೆ ಪ್ರತಿಯಾಗಿ, 2022, 2023 ಹಾಗೂ 2024ರಲ್ಲಿ ಅಧಿಕಾರಿಗಳು, ಭದ್ರತಾ ಸಿಬ್ಬಂದಿಗಳು ಹಾಗೂ ಮಾಧ್ಯಮ ನಿಯೋಗಗಳನ್ನು ಪ್ರಧಾನಿ ನರೇಂದ್ರ ಮೋದಿಯ ವಿದೇಶಿ ಪ್ರವಾಸಗಳ ಸಂದರ್ಭದಲ್ಲಿ ಜೊತೆಗೆ ಕೊಂಡೊಯ್ಯಲು ಅಗಿರುವ ದೇಶಾವಾರು ಪ್ರವಾಸ ವೆಚ್ಚದ ದತ್ತಾಂಶಗಳನ್ನು ಪಟ್ಟಿಯ ರೂಪದಲ್ಲಿ ಒದಗಿಸಲಾಗಿದೆ.
ಈ ದತ್ತಾಂಶದ ಪ್ರಕಾರ, ಜೂನ್ 2023ರಲ್ಲಿ ಪ್ರಧಾನಿ ನರೇಂದ್ರ ಮೋದಿ ಕೈಗೊಂಡಿದ್ದ ಅಮೆರಿಕ ಪ್ರವಾಸಕ್ಕಾಗಿ ಒಟ್ಟು 22,89,68,509 ರೂ. ಅನ್ನು ವೆಚ್ಚ ಮಾಡಲಾಗಿದ್ದರೆ, ಸೆಪ್ಟೆಂಬರ್ ತಿಂಗಳಲ್ಲಿ ಅದೇ ದೇಶಕ್ಕೆ ನೀಡಿದ್ದ ಭೇಟಿಯ ಸಂದರ್ಭದಲ್ಲಿ 15,33,76,348 ರೂ. ಅನ್ನು ವೆಚ್ಚ ಮಾಡಲಾಗಿದೆ ಎಂದು ಹೇಳಲಾಗಿದೆ.
ಈ ಪಟ್ಟಿ ಮಾಡಲಾಗಿರುವ ದತ್ತಾಂಶವು ಮೇ 2022ರಲ್ಲಿ ಕೈಗೊಂಡಿದ್ದ ಜರ್ಮನಿ ಪ್ರವಾಸದಿಂದ ಹಿಡಿದು, ಡಿಸೆಂಬರ್ 2024ರ ಕುವೈತ್ ಪ್ರವಾಸ ಸೇರಿದಂತೆ ಒಟ್ಟು 38 ದೇಶಗಳ ಪ್ರವಾಸ ವೆಚ್ಚದ ವಿವರಗಳನ್ನು ಒಳಗೊಂಡಿದೆ.
ಮೇ 2023ರಲ್ಲಿ ಪ್ರಧಾನಿ ನರೇಂದ್ರ ಮೋದಿ ಕೈಗೊಂಡಿದ್ದ ಜಪಾನ್ ಪ್ರವಾಸ ದತ್ತಾಂಶದ ಪ್ರಕಾರ, 17,19,33,356 ರೂ. ಅನ್ನು ವೆಚ್ಚ ಮಾಡಲಾಗಿದ್ದರೆ, ಮೇ 2022ರಲ್ಲಿ ಕೈಗೊಂಡಿದ್ದ ನೇಪಾಳ ಪ್ರವಾಸದ ವೇಳೆ 80,01,483 ರೂ. ಅನ್ನು ವೆಚ್ಚ ಮಾಡಲಾಗಿದೆ.
2014ರ ಮುನ್ನ ಪ್ರಧಾನಿಗಳ ವಿದೇಶಿ ಪ್ರವಾಸಗಳಿಗೆ ಆಗುತ್ತಿದ್ದ ವೆಚ್ಚದ ಕುರಿತೂ ಕೇಳಲಾಗಿದ್ದ ಪ್ರಶ್ನೆಗೆ ಸಚಿವ ಪಬಿತ್ರ ಮಾರ್ಗರೀಟಾ ಕೆಲವು ಸಂಬಂಧಿತ ದತ್ತಾಂಶಗಳನ್ನು ಒದಗಿಸಿದ್ದಾರೆ.
"ಉಲ್ಲೇಖದ ಅಗತ್ಯಕ್ಕಾಗಿ ಹೇಳುವುದಾದರೆ, 2011ರಲ್ಲಿ ಆಗಿನ ಪ್ರಧಾನಿಗಳು ಕೈಗೊಂಡಿದ್ದ ಅಮೆರಿಕ ಪ್ರವಾಸಕ್ಕಾಗಿ 10,74,27,363 ರೂ., 2013ರಲ್ಲಿ ಕೈಗೊಂಡಿದ್ದ ರಶ್ಯ ಪ್ರವಾಸಕ್ಕೆ 9,95,76,890 ರೂ. ಹಾಗೂ 2013ರ ಜರ್ಮನಿ ಪ್ರವಾಸಕ್ಕೆ 6,02,23,484 ರೂ. ವೆಚ್ಚವಾಗಿತ್ತು. ಈ ಅಂಕಿ-ಸಂಖ್ಯೆಯು ಹಣದುಬ್ಬರ ಹಾಗೂ ನಗದು ಮೌಲ್ಯದ ಏರುಪೇರನ್ನು ಹೊಂದಾಣಿಕೆ ಮಾಡದ ನೈಜ ವೆಚ್ಚವಾಗಿದೆ" ಎಂದು ಅವರು ರಾಜ್ಯಸಭೆಗೆ ತಿಳಿಸಿದ್ದಾರೆ.