ವ್ಹೀಲ್‌ಸೆಟ್‌ಗಳ ಕೊರತೆ: ತಾತ್ಕಾಲಿಕ ಪರಿಹಾರವಾಗಿ ಚೀನಾದಿಂದ ಆಮದನ್ನು ಪುನರಾರಂಭಿಸಿದ ಭಾರತೀಯ ರೈಲ್ವೆ

Update: 2025-03-22 17:17 IST
indian railways

ಸಾಂದರ್ಭಿಕ ಚಿತ್ರ | PC : PTI 

  • whatsapp icon

ಹೊಸದಿಲ್ಲಿ: ವ್ಹೀಲ್‌ಸೆಟ್‌ಗಳ ಕೊರತೆಯನ್ನು ಎದುರಿಸುತ್ತಿರುವ ಭಾರತೀಯ ರೈಲ್ವೆಯು ಚೀನಾದಿಂದ ಗಾಲಿಗಳ ತಯಾರಿಕೆಗಾಗಿ ಬಿಡಿಭಾಗಗಳ ಆಮದನ್ನು ಪುನರಾರಂಭಿಸಿದೆ. ಸಾಮಾನ್ಯವಾಗಿ ಇವುಗಳನ್ನು ಪೂರೈಸುವ ಬೆಂಗಳೂರಿನ ರೈಲು ಗಾಲಿ ಫ್ಯಾಕ್ಟರಿಯು ಆ್ಯಕ್ಸಲ್‌ಗಳ ಕೊರತೆಯಿಂದಾಗಿ ಉತ್ಪಾದನೆಯನ್ನು ಸ್ಥಗಿತಗೊಳಿಸಿದ್ದು,ಇದರಿಂದಾಗಿ ಭಾರತೀಯ ರೈಲ್ವೆಗಾಗಿ ವ್ಯಾಗನ್‌ಗಳನ್ನು ತಯಾರಿಸುವ ಕಂಪನಿಗಳು ಬೇಡಿಕೆಯನ್ನು ಪೂರೈಸಲು ಪರ್ಯಾಯಗಳನ್ನು ಹುಡುಕುವಂತಾಗಿದೆ.

ಸಮಸ್ಯೆಯನ್ನು ಪರಿಹರಿಸಲು ರೈಲ್ವೆಯು ಚೀನಾದಿಂದ 60,000-70,000 ಆ್ಯಕ್ಸಲ್‌ಗಳನ್ನು ಆಮದು ಮಾಡಿಕೊಳ್ಳುತ್ತಿದ್ದು,ಈಗಾಗಲೇ ಬೇಡಿಕೆಗಳನ್ನು ಸಲ್ಲಿಸಲಾಗಿದೆ.

ರೈಲ್ವೆಯು ವ್ಯಾಗನ್ ತಯಾರಕರಿಗಾಗಿ ವಿನಿಮಯ ಒಪ್ಪಂದವನ್ನು ಮಾಡಿಕೊಂಡಿರುವುದು ಇಲ್ಲಿ ಗಮನಿಸಬೇಕಾದ ಅಂಶವಾಗಿದೆ.

ಏನಿದು ವಿನಿಮಯ ಒಪ್ಪಂದ?

ವ್ಯಾಗನ್ ತಯಾರಕರು ಖಾಸಗಿ ಆರ್ಡರ್‌ಗಳಿಗಾಗಿ ಚೀನಾದಿಂದ ಗಾಲಿಗಳನ್ನು ಆಮದು ಮಾಡಿಕೊಳ್ಳಬಹುದು,ಆದರೆ ಸಾರ್ವಜನಿಕ ರೈಲ್ವೆ ಯೋಜನೆಗಳಲ್ಲಿ ವಿಳಂಬವನ್ನು ತಪ್ಪಿಸಲು ಅವರು ಎಲ್ಲ ಭಾರತ ನಿರ್ಮಿತ ಗಾಲಿಗಳನ್ನು ರೈಲ್ವೆಗೆ ನೀಡಬೇಕು. ಯಾವುದೇ ಆಮದು ಮಾಡಲಾದ ವ್ಹೀಲ್‌ಸೆಟ್‌ಗಳನ್ನು ತಾತ್ಕಾಲಿಕವಾಗಿ ಬಳಸಲಾಗುತ್ತದೆ ಮತ್ತು ಬಳಿಕ ಅವುಗಳನ್ನು ಭಾರತ ನಿರ್ಮಿತ ವ್ಹೀಲ್‌ಸೆಟ್‌ಗಳೊಂದಿಗೆ ಬದಲಿಸಲಾಗುತ್ತದೆ. ಈ ವಿನಿಮಯ ಒಪ್ಪಂದವು ಮೇ 2025ರವರೆಗೆ ಚಾಲ್ತಿಯಲ್ಲಿರಲಿದೆ.

ರೈಲ್ವೆಯು ಚೀನಾದಿಂದ ವ್ಹೀಲ್‌ಸೆಟ್‌ಗಳನ್ನು ಆಮದು ಮಾಡಿಕೊಳ್ಳುವುದಿಲ್ಲ,ಅಗತ್ಯವಿದ್ದರೆ ವ್ಯಾಗನ್ ತಯಾರಕರು ಅನುಮತಿ ಪಡೆದುಕೊಂಡು ಅವುಗಳನ್ನು ಆಮದು ಮಾಡಿಕೊಳ್ಳುತ್ತಾರೆ. ರೈಲ್ವೆಯು ಚೀನಾದಿಂದ ಆ್ಯಕ್ಸಲ್‌ಗಳನ್ನು ಆಮದು ಮಾಡಿಕೊಳ್ಳುತ್ತದೆ ಎಂದು ಅಧಿಕಾರಿಯೋರ್ವರು ಸುದ್ದಿಸಂಸ್ಥೆಗೆ ತಿಳಿಸಿದರು.

ವ್ಹೀಲ್‌ಸೆಟ್‌ಗಳು ರೈಲು ವ್ಯಾಗನ್‌ಗಳ ಪ್ರಮುಖ ಭಾಗಗಳಾದ ಗಾಲಿಗಳು ಮತ್ತು ಅವುಗಳನ್ನು ಸಂಪರ್ಕಿಸುವ ಆ್ಯಕ್ಸಲ್‌ಗಳನ್ನು ಒಳಗೊಂಡಿರುತ್ತವೆ.

ಆದರೆ,ಭಾರತೀಯ ರೈಲ್ವೆಯು ಸಲ್ಲಿಸಿರುವ ಬೇಡಿಕೆಗಳ ಪೂರೈಕೆಗಾಗಿ ಹೊಸದಾಗಿ ವ್ಹೀಲ್‌ಸೆಟ್‌ಗಳನ್ನು ಆಮದು ಮಾಡಿಕೊಳ್ಳಲು ವ್ಯಾಗನ್ ತಯಾರಕರಿಗೆ ಅನುಮತಿಸಲಾಗಿಲ್ಲ. ಉತ್ಪಾದನೆಯಲ್ಲಿ ಯಾವುದೇ ವ್ಯತ್ಯಯವನ್ನು ನಿವಾರಿಸಲು ಖಾಸಗಿ ಆರ್ಡರ್‌ಗಳಿಗಾಗಿ ಮೊದಲೇ ಆಮದು ಮಾಡಕೊಳ್ಳಲಾದ,ಆದರೆ ಪ್ರಸ್ತುತ ಬಳಕೆಯಾಗದೇ ಉಳಿದುಕೊಡಿರುವ ವ್ಹೀಲ್‌ಸೆಟ್‌ಗಳನ್ನು ತಾತ್ಕಾಲಿಕವಾಗಿ ಬಳಸಿಕೊಳ್ಳಲು ಅನುಮತಿ ನೀಡಲಾಗಿದೆ ಎಂದು ಇನ್ನೋರ್ವ ಅಧಿಕಾರಿ ತಿಳಿಸಿದರು.

ಭಾರತೀಯ ರೈಲ್ವೆಯ ಯೋಜನಾ ನಿಬಂಧನೆಗಳ ಪ್ರಕಾರ ವ್ಯಾಗನ್ ತಯಾರಕರು ಸರಕಾರಿ ಆದೇಶಗಳನ್ನು ಪೂರೈಸಲು ಭಾರತದಲ್ಲಿ ತಯಾರಾದ ವ್ಹೀಲ್‌ಸೆಟ್‌ಗಳನ್ನು ಖರೀದಿಸುವುದು ಕಡ್ಡಾಯವಾಗಿದೆ. ಇವುಗಳನ್ನು ಬೆಂಗಳೂರು ಘಟಕವು ಪೂರೈಸುತ್ತದೆ. ಆ್ಯಕ್ಸಲ್‌ಗಳನ್ನು ದೇಶೀಯವಾಗಿ ಖರೀದಿಸಲಾಗುತ್ತದೆ ಅಥವಾ ಕೆಲವೊಮ್ಮೆ ಆಮದು ಮಾಡಿಕೊಳ್ಳಲಾಗುತ್ತದೆ. ಹಿಂದೆ ರಶ್ಯಾ ಮತ್ತು ಉಕ್ರೇನ್ ಪ್ರಮುಖ ಪೂರೈಕೆ ದೇಶಗಳಾಗಿದ್ದವು.

ಆಮದು ಮೇಲಿನ ಅವಲಂಬನೆಯನ್ನು ತಗ್ಗಿಸಲು ಬೆಂಗಳೂರಿನಲ್ಲಿ 200 ಕೋ.ರೂ.ವೆಚ್ಚದಲ್ಲಿ ಆ್ಯಕ್ಸಲ್ ಲೈನ್ ಅನ್ನು ಸ್ಥಾಪಿಸಲಾಗುತ್ತಿದೆ.ಯೋಜನೆಯು 2024ರ ಮಧ್ಯಭಾಗದಲ್ಲಿ ಕಾರ್ಯಾರಂಭ ಮಾಡುವ ನಿರೀಕ್ಷೆಯಿತ್ತು,ಆದರೆ ಕಾರಣಾಂತರಗಳಿಂದ 10-12 ತಿಂಗಳುಗಳಷ್ಟು ವಿಳಂಬಗೊಂಡಿದೆ. ಜೂನ್ 2025ರ ವೇಳೆಗೆ ಸ್ಥಾವರದಲ್ಲಿ ಉತ್ಪಾದನೆಯು ಸ್ಥಿರಗೊಳ್ಳುವ ನಿರೀಕ್ಷೆಯಿದ್ದು,ವಾರ್ಷಿಕ ತಯಾರಿಕೆ ಸಾಮರ್ಥ್ಯವು 30,000 ಆ್ಯಕ್ಸಲ್‌ಗಳಾಗಿವೆ. ಇದು ರೈಲ್ವೆಯನ್ನು ಸ್ವಾವಲಂಬಿಯನ್ನಾಗಿ ಮಾಡಲಿದೆ.

ಫೆಬ್ರವರಿ 2024ರಲ್ಲಿ ಭಾರತೀಯ ರೈಲ್ವೆಯು ಚೀನಾದಿಂದ ಆ್ಯಕ್ಸಲ್‌ಗಳ ಪೂರೈಕೆಗಾಗಿ ಮೊದಲ ಬಾರಿಗೆ ಟೆಂಡರ್‌ಗಳನ್ನು ಆಹ್ವಾನಿಸಿತ್ತು,ಆದರೆ ಸ್ವಾವಲಂಬಿಯಾಗುವ ನಿರೀಕ್ಷೆಯಲ್ಲಿ ಅವುಗಳನ್ನು ಹಿಂದೆಗೆದುಕೊಳ್ಳಲಾಗಿತ್ತು.

ಆದರೂ ಅಕ್ಟೋಬರ್-ನವಂಬರ್‌ನಲ್ಲಿ ಮತ್ತೆ ಹೊಸದಾಗಿ ಟೆಂಡರ್‌ಗಳನ್ನು ಕರೆಯಲಾಗಿತ್ತು.

ಎಪ್ರಿಲ್ ಮೊದಲ ವಾರದ ವೇಳೆಗೆ ಆರೇಳು ಸಾವಿರ ಆ್ಯಕ್ಸಲ್‌ಗಳು ಭಾರತಕ್ಕೆ ಆಗಮಿಸುವ ನಿರೀಕ್ಷೆಯಿದ್ದು,ಸರಬರಾಜು 10-12 ತಿಂಗಳುಗಳ ಕಾಲ ಮುಂದುವರಿಯಲಿದೆ. ಸವಾಲುಗಳ ಹೊರತಾಗಿಯೂ ವ್ಯಾಗನ್ ಉತ್ಪಾದನೆಯು ಯಾವುದೇ ಪ್ರಮುಖ ಅಡಚಣೆಯಿಲ್ಲದೆ ಮುಂದುವರಿಸಿದೆ ಎಂದು ರೈಲ್ವೆ ಅಧಿಕಾರಿಯೋರ್ವರು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News