ಮಣಿಪುರ ಜನಾಂಗೀಯ ಸಂಘರ್ಷದಿಂದ ಸಹಜ ಸ್ಥಿತಿಗೆ ಬರಲು ಬಹಳ ಕಾಲ ತೆಗೆದುಕೊಳ್ಳಲಿದೆ: ಆರೆಸ್ಸೆಸ್

ಸಾಂದರ್ಭಿಕ ಚಿತ್ರ (PTI)
ಬೆಂಗಳೂರು: ಮಣಿಪುರ ಸಂಘರ್ಷ ಜಟಿಲವಾಗಿದ್ದು, ಜನಾಂಗೀಯ ಸಂಘರ್ಷದಿಂದ ಸಹಜ ಸ್ಥಿತಿಗೆ ಬರಲು ಬಹಳ ಸಮಯ ತೆಗೆದುಕೊಳ್ಳಲಿದೆ, ಭಾಷಾ ವಿವಾದ ಮತ್ತು ಕ್ಷೇತ್ರಗಳ ಪುನರ್‌ವಿಂಗಡಣೆ ಉತ್ತರ-ದಕ್ಷಿಣ ವಿಭಜನೆಯನ್ನು ಸೃಷ್ಟಿಸುವ ರಾಜಕೀಯ ಪ್ರೇರಿತ ಗುರಿಯನ್ನು ಹೊಂದಿದೆ ಎಂದು ಆರೆಸ್ಸೆಸ್ ಜಂಟಿ ಪ್ರಧಾನ ಕಾರ್ಯದರ್ಶಿ ಸಿ.ಆರ್.ಮುಕುಂದ ಹೇಳಿದರು.
ಬೆಂಗಳೂರಿನಲ್ಲಿ ಆರೆಸ್ಸೆಸ್ ಕಾರ್ಯಕಾರಿ ಮಂಡಳಿ ಸಭೆಯ ಉದ್ಘಾಟನಾ ದಿನ ಮಾತನಾಡಿದ ಆರೆಸ್ಸೆಸ್ ಜಂಟಿ ಪ್ರಧಾನ ಕಾರ್ಯದರ್ಶಿ ಸಿ.ಆರ್.ಮುಕುಂದ, ಮಣಿಪುರದ ಪರಿಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಮಣಿಪುರ ರಾಜ್ಯವು ಅತ್ಯಂತ ಕೆಟ್ಟ ಪರಿಸ್ಥಿತಿಯಲ್ಲಿದೆ ಎಂದು ಆರೆಸ್ಸೆಸ್ ನಂಬುತ್ತದೆ. ಆದರೆ, ಕೇಂದ್ರ ಸರಕಾರ ಇತ್ತೀಚೆಗೆ ತೆಗೆದುಕೊಂಡ ಕೆಲವು ನಿರ್ಧಾರಗಳ ನಂತರ ಸಂಘಟನೆಯು ಅಲ್ಪ ಭರವಸೆಯನ್ನು ಕಾಣುತ್ತಿದೆ ಎಂದು ಹೇಳಿದರು.
ನಾವು ಕೇಂದ್ರ ಸರಕಾರದ ನಿರ್ಧಾರಗಳನ್ನು ಪರಿಶೀಲಿಸಿದೆವು. ಅವುಗಳಲ್ಲಿ ಕೆಲವು ರಾಜಕೀಯ ಮತ್ತು ಕೆಲವು ಆಡಳಿತಾತ್ಮಕವಾಗಿವೆ. ಇದು ಮಣಿಪುರದ ಜನರಲ್ಲಿ ಭರವಸೆ ಮೂಡಿಸಿದೆ. ಆದರೆ ಒಂದು ಸಂಘಟನೆಯಾಗಿ ನಾವು ಅದನ್ನು ವಿಶ್ಲೇಷಿಸುತ್ತೇವೆ. ಏಕೆಂದರೆ ಸಹಜ ಸ್ಥಿತಿಗೆ ತೆಗೆದುಕೊಳ್ಳಲು ಇದು ಬಹಳ ಸಮಯ ತೆಗೆದುಕೊಳ್ಳುತ್ತದೆ. ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ ಶ್ಲಾಘನೀಯವಾದುದು ಎಂದು ಹೇಳಿದರು.
ಎರಡು ಬುಡಕಟ್ಟು ಗುಂಪುಗಳಾದ ಕುಕಿ ಮತ್ತು ಮೈತೈ ಜೊತೆ ಮಾತುಕತೆಗೆ ಆರೆಸ್ಸೆಸ್ ನಿರಂತರ ಪ್ರಯತ್ನವನ್ನು ಮಾಡುತ್ತಿದೆ. ಇದರಿಂದ ವಿಷಯಗಳನ್ನು ಸೌಹಾರ್ದಯುತವಾಗಿ ಪರಿಹರಿಸಬಹುದು ಎಂದು ಅವರು ಹೇಳಿದರು.
ಕ್ಷೇತ್ರಗಳ ಪುನರ್ ವಿಂಗಡಣೆ ಕುರಿತು ಆರೆಸ್ಸೆಸ್ ನಿಲುವು ಸ್ಪಷ್ಟಪಡಿಸಿದ ಅವರು, ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಯನ್ನು ಉಲ್ಲೇಖಿಸಿ ಸಂಸದೀಯ ಸ್ಥಾನಗಳನ್ನು ಕಳೆದುಕೊಳ್ಳುವ ಬಗ್ಗೆ ದಕ್ಷಿಣದ ರಾಜ್ಯಗಳ ಕಳವಳವು ಆಧಾರರಹಿತವಾಗಿದೆ ಎಂದು ಹೇಳಿದರು.
ಭಾಷಾ ವಿವಾದದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮಾತೃಭಾಷೆ ಶಿಕ್ಷಣಕ್ಕೆ ಸೀಮಿತವಾಗಬಾರದು. ದಿನನಿತ್ಯದ ಚಟುವಟಿಕೆಗಳನ್ನು ಮಾತೃಭಾಷೆಯಲ್ಲಿ ನಡೆಸಬೇಕು ಎಂದು ಆರೆಸ್ಸೆಸ್ ನಂಬುತ್ತದೆ. ಆರೆಸ್ಸೆಸ್ ದ್ವಿಭಾಷೆ ಅಥವಾ ತ್ರಿಭಾಷಾ ವ್ಯವಸ್ಥೆಯ ಬಗ್ಗೆ ನಿರ್ಣಯವನ್ನು ಅಂಗೀಕರಿಸಿಲ್ಲ, ಆದರೆ ನಾವು ಪ್ರತಿ ರಾಜ್ಯದಲ್ಲೂ ಆಯಾ ಸ್ಥಳೀಯ ಭಾಷೆಯ ಬಳಕೆಯನ್ನು ಪ್ರತಿಪಾದಿಸುವ ನಿರ್ಣಯವನ್ನು ಅಂಗೀಕರಿಸಿದ್ದೇವೆ ಎಂದು ಹೇಳಿದರು.