18 ತಿಂಗಳ ಹಿಂದೆ ʼಮೃತಪಟ್ಟಿದ್ದʼ ಮಹಿಳೆ ಧಿಡೀರ್ ಹಾಜರ್; ಆಕೆಯನ್ನು ಕೊಲೆಗೈದ ಆರೋಪದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ನಾಲ್ವರು!

ಸಾಂದರ್ಭಿಕ ಚಿತ್ರ | PC : freepik.com
ಇಂದೋರ್: ಸುಮಾರು 18 ತಿಂಗಳ ಹಿಂದೆ ಮೃತಪಟ್ಟಿದ್ದರೆನ್ನಲಾದ ಇಬ್ಬರು ಮಕ್ಕಳ ತಾಯಿಯೊಬ್ಬರು ಮಧ್ಯಪ್ರದೇಶದ ಮಂದ್ಸೌರ್‌ನಲ್ಲಿ ಇದ್ದಕ್ಕಿದ್ದಂತೆ ಮತ್ತೆ ಕಾಣಿಸಿಕೊಂಡಿದ್ದು, ಅವರ ಕುಟುಂಬ ಮತ್ತು ಪೊಲೀಸರಿಗೆ ಅಚ್ಚರಿ ಉಂಟು ಮಾಡಿದೆ.
ವಿಚಿತ್ರವೆಂದರೆ, ಮಹಿಳೆಯನ್ನು 'ಕೊಲೆ'ಗೈಯಲಾಗಿದೆ ಎಂಬ ಆರೋಪದ ಮೇಲೆ ನಾಲ್ವರು ಈಗಾಗಲೇ ಜೈಲಿನಲ್ಲಿದ್ದಾರೆ. ಇದೀಗ ಆಕೆ ಪತ್ತೆಯಾಗಿದ್ದು, ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.
ಪ್ರಕರಣ ಸಂಬಂಧಿಸಿದಂತೆ, ಕುಟುಂಬವು ಗುರುತಿಸಿ ಅಂತ್ಯಕ್ರಿಯೆ ಮಾಡಿದ ಮೃತದೇಹ ಯಾರದ್ದು ಎಂಬ ಪ್ರಶ್ನೆಗೆ ಪೊಲೀಸರು ಇನ್ನೂ ಉತ್ತರ ಹುಡುಕಬೇಕಿದೆ.
ಸೆಪ್ಟೆಂಬರ್ 2023 ರಲ್ಲಿ, ಮಂಡ್ಸೌರ್ ನ ಗಾಂಧಿ ಸಾಗರ್‌ನಿಂದ ಮಹಿಳೆಯು ನಾಪತ್ತೆಯಾಗಿರುವುದಾಗಿ ಆಕೆಯ ಕುಟುಂಬವು ದೂರು ನೀಡಿತ್ತು. ಕೆಲವು ದಿನಗಳ ನಂತರ, ಮುಂಬೈ-ದಿಲ್ಲಿ ಹೆದ್ದಾರಿಯ (ಮಂಡ್ಸೌರ್‌ನಿಂದ 150 ಕಿ.ಮೀ) ಝಬುವಾ ಜಿಲ್ಲೆಯ ಥಾಂಡ್ಲಾದಲ್ಲಿ ಮಹಿಳೆಯ ಕೊಳೆತ ಶವ ಪತ್ತೆಯಾಗಿತ್ತು. ಆಕೆಯ ಮುಖ ಮತ್ತು ತಲೆಯನ್ನು ಭಾರವಾದ ಕಲ್ಲಿನಿಂದ ಜಜ್ಜಲಾಗಿತ್ತು.
ಪೊಲೀಸರು ಈ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಿದಾಗ, ಕುಟುಂಬ ಸದಸ್ಯರು ಬಂದು ಮಹಿಳೆಯ ಪಾದದ ಸುತ್ತಲಿನ ಹಚ್ಚೆ ಮತ್ತು ದಾರದಿಂದ ಆ ಮಹಿಳೆಯನ್ನು ತಮ್ಮ ಮಗಳು ಎಂದು ಗುರುತಿಸಿದ್ದರು. ಅವರು ತಮ್ಮ ಮಗಳು ಶಾರುಖ್ ಎಂಬಾತನೊಂದಿಗೆ ಓಡಿಹೋಗಿದ್ದಾಳೆಂದು ಹೇಳಿಕೆ ನೀಡಿದ್ದರು. ಅವರ ಹೇಳಿಕೆಗಳ ಆಧಾರದ ಮೇಲೆ ಶಾರುಖ್ ಮತ್ತು ಅವನ ಸಹಚರರನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿ ಜೈಲಿಗೆ ಕಳುಹಿಸಲಾಗಿದೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಮೃತದೇಹವನ್ನು ಅಂತ್ಯಸಂಸ್ಕಾರ ಮಾಡಿದ ಬಳಿಕ ಥಾಂಡ್ಲಾ ಪೊಲೀಸರು ಗಾಂಧಿ ಸಾಗರ್ ನಿಂದ 30 ಕಿ.ಮೀ ದೂರದಲ್ಲಿರುವ ಭಾನ್ಪುರದ ಶಾರುಖ್, ಇಮ್ರಾನ್, ಸೋನು ಮತ್ತು ಇಜಾಝ್ ಎಂಬ ನಾಲ್ವರು ಶಂಕಿತರ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದರು.
"ಅವರು ಅಪರಾಧ ಮಾಡಿದ್ದಾರೆಂದು ಸಾಬೀತುಪಡಿಸಲು ನಮಗೆ ಸಾಕಷ್ಟು ಪುರಾವೆಗಳಿವೆ, ಆದ್ದರಿಂದ ಆರೋಪಪಟ್ಟಿ ಸಲ್ಲಿಸಲಾಗಿದೆ. ವಿಷಯವು ಈಗ ನ್ಯಾಯಾಲಯದಲ್ಲಿದೆ ಮತ್ತು ನಾನು ಅದರ ಬಗ್ಗೆ ಪ್ರತಿಕ್ರಿಯಿಸಲು ಸಾಧ್ಯವಿಲ್ಲ" ಎಂದು ಅಧಿಕಾರಿ ಹೇಳಿದ್ದಾರೆ.
ಕೆಲವು ದಿನಗಳ ಹಿಂದೆ ಮಹಿಳೆ ಮನೆಗೆ ಹಿಂದಿರುಗಿದ್ದು, ಆಕೆಯ ಕುಟುಂಬ ದಿಗ್ಭ್ರಮೆಗೊಂಡಿದೆ. ಆಕೆಯ ಕುಟುಂಬವು ತಕ್ಷಣವೇ ಆಕೆಯ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ ಮತ್ತು ಇತರ ದಾಖಲೆಗಳೊಂದಿಗೆ ಗಾಂಧಿ ಸಾಗರ್ ಪೊಲೀಸ್ ಠಾಣೆಗೆ ಕರೆದೊಯ್ದಿತು.
ಈ ಬಗ್ಗೆ ಪ್ರತಿಕ್ರಿಯಿಸಿದ ಆಕೆಯ ತಂದೆ, "ನಮ್ಮ ಮಗಳು ಕಾಣೆಯಾಗಿದ್ದಳು. ಪೊಲೀಸರು ಆಕೆಯದೇ ಎಂದು ಶವವನ್ನು ನಮಗೆ ತೋರಿಸಿದರು. ಅವಳು ಜೀವಂತವಾಗಿದ್ದಾಳೆ ಮತ್ತು ಹಿಂತಿರುಗುತ್ತಾಳೆ ಎಂದು ನಾವು ಎಂದಿಗೂ ಊಹಿಸಿರಲಿಲ್ಲ" ಎಂದು ಹೇಳಿದರು.
ವಿಚಾರಣೆ ವೇಳೆ, ಶಾರುಖ್ ಜೊತೆ ತಾನು ಸ್ವಇಚ್ಛೆಯಿಂದ ಭಾನ್‌ಪುರಕ್ಕೆ ಹೋಗಿದ್ದೆ ಎಂದು ಮಹಿಳೆ ಪೊಲೀಸರಿಗೆ ತಿಳಿಸಿದ್ದಾರೆ, ಆದರೆ ಕೇವಲ ಎರಡು ದಿನಗಳ ನಂತರ, ಆತ ತನ್ನನ್ನು ಶಾರುಖ್ ಎಂಬ ಇನ್ನೊಬ್ಬ ವ್ಯಕ್ತಿಗೆ 5 ಲಕ್ಷ ರೂ.ಗೆ ಮಾರಾಟ ಮಾಡಿದ್ದಾನೆ. ಬಳಿಕ, ಕೋಟಾದಲ್ಲಿ ಎರಡನೇ ಶಾರುಖ್ ಜೊತೆ 18 ತಿಂಗಳು ವಾಸಿಸುತ್ತಿದ್ದೆ, ಯಾವಾಗಲೂ ತಪ್ಪಿಸಿಕೊಳ್ಳಲು ಅವಕಾಶವನ್ನು ಹುಡುಕುತ್ತಿದ್ದೆ ಎಂದು ಆಕೆ ಪೊಲೀಸರಿಗೆ ತಿಳಿಸಿದ್ದಾರೆ.
ಕೆಲವು ದಿನಗಳ ಹಿಂದೆ, ಆಕೆ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಮನೆಗೆ ಮರಳಿದ್ದಾಳೆ ಎನ್ನಲಾಗಿದೆ.
"ನನ್ನ ಗ್ರಾಮವನ್ನು ತಲುಪಲು ನಾನು ಸ್ಥಳೀಯರಿಂದ ಸಹಾಯ ಪಡೆದುಕೊಂಡೆ. ನನ್ನ ಬಳಿ ಫೋನ್ ಇರಲಿಲ್ಲ. ಎಲ್ಲಿಯೂ ಹೋಗಲು ಅವಕಾಶವಿರಲಿಲ್ಲ, ಆದ್ದರಿಂದ ನಾನು ಇಷ್ಟು ದಿನ ನನ್ನ ಕುಟುಂಬವನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ" ಎಂದು ಮಹಿಳೆ ಹೇಳಿದ್ದಾರೆ.
ಆಕೆಯ 'ಕೊಲೆ' ಪ್ರಕರಣದಲ್ಲಿ ಜೈಲಿನಲ್ಲಿರುವ ನಾಲ್ವರ ಬಗ್ಗೆ ನ್ಯಾಯಾಲಯದ ಆದೇಶಕ್ಕಾಗಿ ಕಾಯುತ್ತಿದ್ದೇವೆ, ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಝಬುವಾ ಎಸ್ಪಿ ಪದ್ಮವಿಲೋಚನ್ ಶುಕ್ಲಾ ಹೇಳಿದ್ದಾರೆ.