ಉದ್ಯೋಗಸ್ಥ ಮಹಿಳೆಗೆ ಜೀವನಾಂಶ ನೀಡಲು ಸುಪ್ರೀಂ ಕೋರ್ಟ್ ನಕಾರ

ಹೊಸದಿಲ್ಲಿ: ಪತಿ ಮತ್ತು ಪತ್ನಿಯರಿಬ್ಬರೂ ಸಮಾನ ದರ್ಜೆಯ ಹುದ್ದೆಗಳಲ್ಲಿ ಉದ್ಯೋಗಿಗಳಾಗಿರುವುದು ಹಾಗೂ ಪತ್ನಿಯು ಆರ್ಥಿಕವಾಗಿ ಸ್ವತಂತ್ರಳಾಗಿರುವುದನ್ನು ಉಲ್ಲೇಖಿಸಿರುವ ಸುಪ್ರೀಂ ಕೋರ್ಟ್, ತನ್ನನ್ನು ತೊರೆದಿರುವ ಪತಿಯಿಂದ ತನಗೆ ಜೀವನಾಂಶ ಕೊಡಿಸಬೇಕು ಎಂದು ಮಹಿಳೆಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ ಎಂದು TOI ಸುದ್ದಿ ಸಂಸ್ಥೆ ವರದಿ ಮಾಡಿದೆ.
ಸಹಾಯಕ ಪ್ರಾಧ್ಯಾಪಕಿಯಾಗಿರುವ ಮಹಿಳೆಗೆ ಪರಿಹಾರ ಒದಗಿಸಲು ನಿರಾಕರಿಸಿದ ನ್ಯಾ. ಅಭಯ್ ಎಸ್. ಓಕಾ ಹಾಗೂ ನ್ಯಾ. ಉಜ್ಜಲ್ ಭುಯಾನ್‌ರನ್ನು ಒಳಗೊಂಡಿದ್ದ ದ್ವಿಸದಸ್ಯ ನ್ಯಾಯಪೀಠವು, ಸಂವಿಧಾನದ 136ನೇ ವಿಧಿಯಡಿ ಮಧ್ಯಪ್ರವೇಶಿಸಲು ಈ ಪ್ರಕರಣಕ್ಕೆ ಯಾವುದೇ ನೆಲೆ ಇಲ್ಲ ಎಂದು ಅಭಿಪ್ರಾಯ ಪಟ್ಟಿತು.
"ಮೊದಲ ಅರ್ಜಿದಾರರು ಹಾಗೂ ಪ್ರತಿವಾದಿಗಳು (ಪತಿ ಮತ್ತು ಪತ್ನಿ) ಇಬ್ಬರೂ ಸಹಾಯಕ ಪ್ರಾಧ್ಯಾಪಕ ಹುದ್ದೆಯನ್ನು ಹೊಂದಿದ್ದಾರೆ. ಹೀಗಾಗಿ, ಭಾರತೀಯ ಸಂವಿಧಾನದ 136ನೇ ವಿಧಿಯಡಿ ಮಧ್ಯಪ್ರವೇಶಿಸುವ ಯಾವುದೇ ವ್ಯಾಪ್ತಿಯನ್ನು ಈ ಪ್ರಕರಣ ಒಳಗೊಂಡಿಲ್ಲ. ಆದ್ದರಿಂದ, ವಿಶೇಷ ರಜಾ ಕಾಲದ ಅರ್ಜಿಯನ್ನು ವಜಾಗೊಳಿಸಲಾಗಿದೆ" ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಆದರೆ, ನನಗಿರುವ ಗಳಿಕೆಯ ಕಾರಣಕ್ಕೇ ನನ್ನ ಪತಿಯು ಜೀವನಾಂಶ ನೀಡುವ ಹೊಣೆಗಾರಿಕೆಯಿಂದ ಸ್ವಯಂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಆ ಮಹಿಳೆ ವಾದಿಸಿದ್ದರು. ಅಲ್ಲದೆ, ನನ್ನ ಪತಿಯ ಮಾಸಿಕ ವೇತನ ಒಂದು ಲಕ್ಷ ರೂ. ಎಂದೂ ಆಕೆ ವಾದಿಸಿದ್ದರು. ಈ ವಾದ-ಪ್ರತಿವಾದಗಳನ್ನು ಆಲಿಸಿದ್ದ ನ್ಯಾಯಾಲಯ, ಇಬ್ಬರಿಗೂ ತಮ್ಮ ಒಂದು ವರ್ಷದ ಅವಧಿಯ ವೇತನ ಚೀಟಿಗಳನ್ನು ಹಾಜರುಪಡಿಸುವಂತೆ ಇದಕ್ಕೂ ಮುನ್ನ ಆದೇಶಿಸಿತ್ತು.
ನಂತರ, ಇಬ್ಬರೂ ಸಮಾನ ದರ್ಜೆಯ ಹುದ್ದೆ ಹೊಂದಿರುವುದನ್ನು ಪರಿಗಣಿಸಿದ ನ್ಯಾಯಾಲಯ, ಈ ಹಿಂದಿನ ಆದೇಶವನ್ನು ಎತ್ತಿ ಹಿಡಿದು, ಸದರಿ ಮಹಿಳೆಯ ಅರ್ಜಿಯನ್ನು ವಜಾಗೊಳಿಸಿದೆ.