ಚೀನಾದ ಫ್ಯಾಕ್ಟರಿಗಳಿಗೆ ಪೈಪೋಟಿಯೊಡ್ಡಲು ಆರಂಭಿಸಿದ್ದ ‌23 ಶತಕೋಟಿ ಡಾಲರ್ ಗಳ ಪಿಎಲ್‌ಐ ಯೋಜನೆ ಸ್ಥಗಿತಕ್ಕೆ ಕೇಂದ್ರದ ನಿರ್ಧಾರ; ವರದಿ

Update: 2025-03-22 16:53 IST
ಚೀನಾದ ಫ್ಯಾಕ್ಟರಿಗಳಿಗೆ ಪೈಪೋಟಿಯೊಡ್ಡಲು ಆರಂಭಿಸಿದ್ದ ‌23 ಶತಕೋಟಿ ಡಾಲರ್ ಗಳ ಪಿಎಲ್‌ಐ ಯೋಜನೆ ಸ್ಥಗಿತಕ್ಕೆ ಕೇಂದ್ರದ ನಿರ್ಧಾರ; ವರದಿ

ಸಾಂದರ್ಭಿಕ ಚಿತ್ರ | PC : freepik.com

 

  • whatsapp icon

ಹೊಸದಿಲ್ಲಿ: ಕಂಪನಿಗಳನ್ನು ಚೀನಾದಿಂದ ದೂರಸೆಳೆಯುವ ಪ್ರಯತ್ನವಾಗಿ ದೇಶಿಯ ಉತ್ಪಾದನೆಯನ್ನು ಪ್ರೋತ್ಸಾಹಿಸಲು ಕೇವಲ ನಾಲ್ಕು ವರ್ಷಗಳ ಹಿಂದೆ ಆರಂಭಿಸಿದ್ದ 23 ಶತಕೋಟಿ ಡಾಲರ್ ಗಳ ಯೋಜನೆಯನ್ನು ಕೈಬಿಡಲು ಪ್ರಧಾನಿ ನರೇಂದ್ರ ಮೋದಿಯವರ ಸರಕಾರವು ನಿರ್ಧರಿಸಿದೆ ಎಂದು ಸರಕಾರದಲ್ಲಿನ ಮೂಲಗಳು ತಿಳಿಸಿವೆ ಎಂದು Reuters ವರದಿ ಮಾಡಿದೆ.

ಯೋಜನೆಯಲ್ಲಿ ಭಾಗಿಯಾಗಿರುವ ಕೆಲವು ಕಂಪನಿಗಳ ಮನವಿಗಳ ಹೊರತಾಗಿಯೂ 14 ಪ್ರಾಯೋಗಿಕ ಕ್ಷೇತ್ರಗಳನ್ನು ಮೀರಿ ಯೋಜನೆಯನ್ನು ವಿಸ್ತರಿಸಲಾಗುವುದಿಲ್ಲ ಮತ್ತು ಉತ್ಪಾದನಾ ಗಡುವನ್ನೂ ವಿಸ್ತರಿಸಲಾಗುವುದಿಲ್ಲ ಎಂದು ಅವು ತಿಳಿಸಿವೆ.

ಆ್ಯಪಲ್ ಪೂರೈಕೆದಾರ ಫಾಕ್ಸ್‌ಕಾನ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಸೇರಿದಂತೆ ಸುಮಾರು 750 ಕಂಪನಿಗಳು ಉತ್ಪಾದನೆ ಆಧಾರಿತ ಪ್ರೋತ್ಸಾಹಧನ(ಪಿಎಲ್‌ಐ) ಯೋಜನೆಗೆ ಸಹಿ ಹಾಕಿರುವುದನ್ನು ಸಾರ್ವಜನಿಕ ದಾಖಲೆಗಳು ತೋರಿಸಿವೆ.

ಕಂಪನಿಗಳು ನಿಗದಿತ ಗಡುವಿನೊಳಗೆ ಉತ್ಪಾದನಾ ಗುರಿಯನ್ನು ಸಾಧಿಸಿದರೆ ನಗದು ಪ್ರೋತ್ಸಾಹ ಧನದ ಭರವಸೆಯನ್ನು ನೀಡಲಾಗಿತ್ತು. 2025ರ ವೇಳೆಗೆ ಆರ್ಥಿಕತೆಯಲ್ಲಿ ಉತ್ಪಾದನಾ ಪಾಲನ್ನು ಶೇ.25ರಷ್ಟು ಹೆಚ್ಚಿಸುವುದು ಯೋಜನೆಯ ಆಶಯವಾಗಿತ್ತು.

ಆದರೆ ಸರಕಾರಿ ದಾಖಲೆಗಳು ತೋರಿಸಿರುವಂತೆ ಯೋಜನೆಯಲ್ಲಿ ಪಾಲ್ಗೊಂಡಿದ್ದ ಅನೇಕ ಕಂಪನಿಗಳು ಉತ್ಪಾದನೆಯನ್ನು ಆರಂಭಿಸುವಲ್ಲಿ ವಿಫಲಗೊಂಡಿದ್ದರೆ,ಉತ್ಪಾದನಾ ಗುರಿಗಳನ್ನು ಸಾಧಿಸಿದ ಕಂಪನಿಗಳು ಸರಕಾರದಿಂದ ಸಹಾಯಧನ ಪಾವತಿಯಲ್ಲಿ ವಿಳಂಬಗಳನ್ನು ಎದುರಿಸಿವೆ.

ವಾಣಿಜ್ಯ ಸಚಿವಾಲಯದ ದಿನಾಂಕರಹಿತ ವಿಶ್ಲೇಷಣಾ ವರದಿಯ ಪ್ರಕಾರ,ಅಕ್ಟೋಬರ್ 2024ರ ವೇಳೆಗೆ ಯೋಜನೆಯಲ್ಲಿ ಭಾಗವಹಿಸಿದ ಕಂಪನಿಗಳು 151.93 ಶತಕೋಟಿ ಡಾಲರ್ ಮೌಲ್ಯದ ಅಥವಾ ಸರಕಾರವು ನಿಗದಿಗೊಳಿಸಿದ್ದ ಗುರಿಯ ಶೇ.37ರಷ್ಟು ಸರಕುಗಳನ್ನು ಉತ್ಪಾದಿಸಿದ್ದವು. ಸರಕಾರವು ಕೇವಲ 1.73 ಶತಕೋಟಿ ಡಾ‌ಲರ್ ಗಳ ಪ್ರೋತ್ಸಾಹಧನವನ್ನು ಅಥವಾ ಯೋಜನೆಗೆ ಹಂಚಿಕೆ ಮಾಡಲಾಗಿದ್ದ ನಿಧಿಯ ಶೇ.8ಕ್ಕೂ ಕಡಿಮೆ ಮೊತ್ತವನ್ನು ಪಾವತಿಸಿದೆ.

ಯೋಜನೆಯ ಮೇಲ್ವಿಚಾರಣೆ ವಹಿಸಿರುವ ಪ್ರಧಾನಿ ಕಚೇರಿ ಮತ್ತು ವಾಣಿಜ್ಯ ಸಚಿವಾಲಯ ಸುದ್ದಿಸಂಸ್ಥೆಯ ಮನವಿಗಳಿಗೆ ಪ್ರತಿಕ್ರಿಯಿಸಿಲ್ಲ.

ಯೋಜನೆಯು ನಿರಾಶಾದಾಯಕ ಫಲಿತಾಂಶಗಳನ್ನು ನೀಡಿದ್ದು,ಅದು ಆರಂಭಗೊಂಡ ಬಳಿಕ ಆರ್ಥಿಕತೆಯಲ್ಲಿ ಉತ್ಪಾದನಾ ಪಾಲು ಶೇ.15.4ರಿಂದ ಶೇ.14.3ಕ್ಕೆ ಕುಸಿದಿದೆ.

ಭಾರತದಲ್ಲಿ ಸಾವಿರಾರು ಗುತ್ತಿಗೆ ಉದ್ಯೋಗಿಗಳನ್ನು ನೇಮಿಸಿಕೊಂಡಿರುವ ಫಾಕ್ಸ್‌ಕಾನ್ ಮತ್ತು ರಿಲಯನ್ಸ್ ಪ್ರತಿಕ್ರಿಯೆಗಾಗಿ ಸುದ್ದಿಸಂಸ್ಥೆಯ ಮನವಿಗಳಿಗೆ ಸ್ಪಂದಿಸಿಲ್ಲ.

ಯೋಜನೆಯ ಅಂತ್ಯವು ಸರಕಾರವು ತನ್ನ ಉತ್ಪಾದನೆ ಮಹತ್ವಾಕಾಂಕ್ಷೆಗಳನ್ನು ಕೈಬಿಟ್ಟಿದೆ ಎಂದು ಅರ್ಥವಲ್ಲ ಮತ್ತು ಪರ್ಯಾಯಗಳನ್ನು ಯೋಜಿಸಲಾಗುತ್ತಿದೆ ಎಂದು ಇಬ್ಬರು ಸರಕಾರಿ ಅಧಿಕಾರಿಗಳು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಸರಕಾರವು ಕಳೆದ ವರ್ಷ,ವಿಶೇಷವಾಗಿ ಭಾರೀ ಬೆಳವಣಿಗೆಯನ್ನು ಕಂಡಿದ್ದ ಔಷಧಿ ಮತ್ತು ಮೊಬೈಲ್ ಫೋನ್ ತಯಾರಿಕೆ ಕ್ಷೇತ್ರದಲ್ಲಿ ಯೋಜನೆಯ ಧನಾತ್ಮಕ ಪರಿಣಾಮವನ್ನು ಸಮರ್ಥಿಸಿಕೊಂಡಿತ್ತು. ಎಪ್ರಿಲ್ ಮತ್ತು ಅಕ್ಟೋಬರ್ 2024ರ ನಡುವೆ ವಿತರಿಸಲಾದ ಸುಮಾರು 62 ಕೋಟಿ ಡಾಲರ್ ಪ್ರೋತ್ಸಾಹಧನದ ಶೇ.94ರಷ್ಟು ಈ ಎರಡು ಕ್ಷೇತ್ರಗಳು ಪಡೆದುಕೊಂಡಿದ್ದವು. ಆದರೆ ಉಕ್ಕು,ಜವಳಿ ಮತ್ತು ಸೌರಫಲಕ ತಯಾರಿಕೆ ಸೇರಿದಂತೆ ಇತರ ಕ್ಷೇತ್ರಗಳಲ್ಲಿ ಇಂತಹ ಯಶಸ್ಸು ಕಂಡುಬಂದಿಲ್ಲ. ಭಾರತವು ಹಲವು ಕ್ಷೇತ್ರಗಳಲ್ಲಿ ಚೀನಾದಂತಹ ಅಗ್ಗದ ಪ್ರತಿಸ್ಪರ್ಧಿಗಳಿಂದ ತೀವ್ರ ಸ್ಪರ್ಧೆಯನ್ನು ಎದುರಿಸುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News