ಪಶ್ಚಿಮ ಬಂಗಾಳ: ಪ್ರತಿಭಟನಾ ನಿರತ ಮಹಿಳೆಯ ಕತ್ತು ಹಿಸುಕುವುದಾಗಿ ಬೆದರಿಕೆವೊಡ್ಡಿದ ಬಿಜೆಪಿ ನಾಯಕ

Update: 2025-03-22 15:20 IST
ಪಶ್ಚಿಮ ಬಂಗಾಳ: ಪ್ರತಿಭಟನಾ ನಿರತ ಮಹಿಳೆಯ ಕತ್ತು ಹಿಸುಕುವುದಾಗಿ ಬೆದರಿಕೆವೊಡ್ಡಿದ ಬಿಜೆಪಿ ನಾಯಕ

Screengrab: X/@BanglarGorboMB

  • whatsapp icon

ಹೊಸದಿಲ್ಲಿ: ಖರಗ್ಪುರ್ ನಲ್ಲಿ ನೂತನವಾಗಿ ನಿರ್ಮಿಸಿರುವ ರಸ್ತೆಯೊಂದರ ಉದ್ಘಾಟನೆಯ ವೇಳೆ ತಮ್ಮೊಂದಿಗೆ ವಾಗ್ವಾದ ನಡೆಸಿದ ಪ್ರತಿಭಟನಾಕಾರ್ತಿಯೋರ್ವರಿಗೆ ಪಶ್ಚಿಮ ಬಂಗಾಳ ಬಿಜೆಪಿಯ ಮಾಜಿ ಮುಖ್ಯಸ್ಥ ದಿಲೀಪ್ ಘೋಷ್ ಕುತ್ತಿಗೆ ಹಿಸುಕುವುದಾಗಿ ಬೆದರಿಕೆ ಒಡ್ಡಿದ ಘಟನೆ ಶುಕ್ರವಾರ ನಡೆದಿದೆ.

ಖರಗ್ಪುರ್ ನ ವಾರ್ಡ್ ಸಂಖ್ಯೆ 6ರಲ್ಲಿ ನಿರ್ಮಿಸಲಾಗಿರುವ ನೂತನ ಕಾಂಕ್ರೀಟ್ ರಸ್ತೆಯೊಂದನ್ನು ಉದ್ಘಾಟಿಸಲು ದಿಲೀಪ್ ಘೋಷ್ ಆಗಮಿಸಿದ್ದಾಗ ಈ ಘಟನೆ ನಡೆದಿದೆ. ದಿಲೀಪ್ ಘೋಷ್ ಸ್ಥಳಕ್ಕೆ ಆಗಮಿಸಿದಾಗ, ಅವರನ್ನು ಸುತ್ತುವರಿದ ಮಹಿಳಾ ಪ್ರತಿಭನಾಕಾರರ ಗುಂಪೊಂದು, ನೀವು ಲೋಕಸಭಾ ಸದಸ್ಯರಾಗಿದ್ದಾಗ ಎಲ್ಲಿಗೆ ಹೋಗಿದ್ದಿರಿ ಎಂದು ಪ್ರಶ್ನಿಸಿತು.

"ನೀವು ಇಷ್ಟು ದಿನಗಳ ಕಾಲ ಎಲ್ಲಿದ್ದಿರಿ? ನೀವು ಸಂಸದರಾಗಿದ್ದಾಗ ನಾವು ಒಮ್ಮೆಯೂ ನಿಮ್ಮ ಮುಖವನ್ನು ನೋಡಲಿಲ್ಲ. ಈಗ ನಮ್ಮ ಕೌನ್ಸಿಲರ್ (ತೃಣಮೂಲ ಕಾಂಗ್ರೆಸ್ ಪಕ್ಷದ ಪ್ರದೀಪ್ ಸರ್ಕಾರ್) ರಸ್ತೆಯನ್ನು ನಿರ್ಮಿಸಿದ ನಂತರ ನೀವು ಇಲ್ಲಿಗೆ ಬಂದಿದ್ದೀರಿ" ಎಂದು ಆ ಮಹಿಳಾ ಪ್ರತಿಭನಾಕಾರರ ಗುಂಪು ದಿಲೀಪ್ ಘೋಷ್ ಅವರನ್ನು ಪ್ರಶ್ನಿಸಿತು ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.

ಆದರೆ, ಪ್ರತಿಭಟನಾಕಾರರ ಪ್ರಶ್ನೆಗಳಿಂದ ಕುಪಿತಗೊಂಡ ದಿಲೀಪ್ ಘೋಷ್, ನೀವೆಲ್ಲ ತೃಣಮೂಲ ಕಾಂಗ್ರೆಸ್ ಬೆಂಬಲಿಗರು ಎಂದು ಆರೋಪಿಸಿದ್ದಾರೆ.

ಪ್ರತಿಭಟನಾಕಾರರೊಂದಿಗೆ ಆಕ್ರಮಣಕಾರಿಯಾಗಿ ವರ್ತಿಸಿದ ದಿಲೀಪ್ ಘೋಷ್, "ನಾನು ಈ ರಸ್ತೆ ನಿರ್ಮಾಣಕ್ಕೆ ಹಣ ನೀಡಿದ್ದೇನೆ. ಇದು ನಿಮ್ಮಪ್ಪನ ಹಣವಲ್ಲ! ಹೋಗಿ ಈ ಕುರಿತು ಪ್ರದೀಪ್ ಸರ್ಕಾರ್‌ರನ್ನೇ ಕೇಳಿ" ಎಂದು ಹರಿಹಾಯ್ದಿದ್ದಾರೆ.

ಈ ವಾಗ್ವಾದ ತಕ್ಷಣವೇ ಉದ್ವಿಗ್ನತೆಗೆ ತಿರುಗಿದ್ದು, "ಯಾಕೆ ನಮ್ಮಪ್ಪನನ್ನು ಎಳೆದು ತರುತ್ತಿದ್ದೀರಿ? ನೀವು ಸಂಸದರಾಗಿದ್ದಿರಿ" ಎಂದು ಪ್ರತಿಭಟನಾಕಾರರ ಗುಂಪಿನಲ್ಲಿದ್ದ ಓರ್ವ ಮಹಿಳೆ ದಿಲೀಪ್ ಘೋಷ್‌ರನ್ನು ಪ್ರಶ್ನಿಸಿದ್ದಾರೆ.

ಅದಕ್ಕೆ ಪ್ರತಿಯಾಗಿ, "ನಾನು ನಿನ್ನ ಹದಿನಾಲ್ಕು ತಲೆಮಾರುಗಳನ್ನೂ ಎಳೆದು ತರುತ್ತೇನೆ. ಹಾಗೆ ಕಿರುಚಾಡಬೇಡ. ಇಲ್ಲವಾದರೆ, ನಿನ್ನ ಕುತ್ತಿಗೆ ಹಿಸುಕಿ ಬಿಡುತ್ತೇನೆ" ಎಂದು ದಿಲೀಪ್ ಘೋಷ್ ಬೆದರಿಕೆ ಒಡ್ಡಿದ್ದಾರೆ.

"ನಾನು ಸಂಸದನಾಗಿದ್ದ ಅವಧಿಯಲ್ಲಿ ಈ ರಸ್ತೆಯನ್ನು ನಿರ್ಮಿಸಲು ನನ್ನ ಸಂಸದರ ನಿಧಿಯಿಂದ ಅನುದಾನ ಒದಗಿಸಿದ್ದೇನೆ" ಎಂದೂ ಅವರು ಏರಿದ ದನಿಯಲ್ಲಿ ಹೇಳಿದ್ದಾರೆ.

ಈ ವೇಳೆ ಪರಿಸ್ಥಿತಿಯು ನಿಯಂತ್ರಣ ತಪ್ಪುವ ಅಪಾಯ ತಲೆದೋರಿದ್ದರಿಂದ, ದಿಲೀಪ್ ಘೋಷ್‌ರ ಭದ್ರತಾ ಸಿಬ್ಬಂದಿಗಳು ಹಾಗೂ ಬಿಜೆಪಿಯ ಕಾರ್ಯಕರ್ತರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಹಬಂದಿಗೆ ತಂದಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆಯೇ, ಖರಗ್ಪುರ್ ಪಟ್ಟಣ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.

ಆದರೆ, ದಿಲೀಪ್ ಘೋಷ್‌ರ ಕಾರನ್ನು ಸುತ್ತುವರಿದ ಮಹಿಳಾ ಪ್ರತಿಭಟನಾಕಾರರು, ಅದರ ಮೇಲೆ ದಾಳಿ ನಡೆಸಲು ಪ್ರಾರಂಭಿಸಿದ್ದರಿಂದ, ಪರಿಸ್ಥಿತಿ ಮತ್ತೊಮ್ಮೆ ವಿಕೋಪಕ್ಕೆ ತಿರುಗಿದೆ. ಇದರ ಬೆನ್ನಿಗೇ, ಸ್ಥಳದಿಂದ ದಿಲೀಪ್ ಘೋಷ್ ನಿರ್ಗಮಿಸಿದ್ದಾರೆ.

ಈ ನಡುವೆ, ದಿಲೀಪ್ ಘೋಷ್‌ರ ವರ್ತನೆಯನ್ನು ಖಂಡಿಸಿದ ಸ್ಥಳೀಯ ತೃಣಮೂಲ ಕಾಂಗ್ರೆಸ್ ಕೌನ್ಸಿಲರ್ ಪ್ರದೀಪ್ ಸರ್ಕಾರ್, "ದಿಲೀಪ್ ಘೋಷ್ ಈಗ ಸಂಸದರಲ್ಲದಿರುವಾಗ , ಅವರೇಕೆ ರಸ್ತೆ ಉದ್ಘಾಟಿಸಲು ತೆರಳಿದರು? ಇದು ತಗ್ಗುಪ್ರದೇಶವಾಗಿರುವುದರಿಂದ, ಮಹಾನಗರ ಪಾಲಿಕೆಯು ಈ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸಿದೆ. ಅವರಲ್ಲಿಗೆ ತೆರಳಿ ತಮ್ಮ ಸಂಯಮವನ್ನು ಕಳೆದುಕೊಂಡಿದ್ದಾರೆ" ಎಂದು ಆರೋಪಿಸಿದ್ದಾರೆ.

"ನಾನು ಅಲ್ಲಿರದಿದ್ದರೂ, ಅವರು ನನ್ನ ತಂದೆಯನ್ನೂ ಅವಮಾನಿಸಿದ್ದಾರೆ. ಅಲ್ಲದೆ, ಪ್ರತಿಭಟನಾನಿರತ ಮಹಿಳೆಯರನ್ನು 500 ರೂ. ಕಾರ್ಯಕರ್ತರು ಎಂದು ಹಂಗಿಸಿದ್ದಾರೆ. ಅವರು ಕ್ಷಮೆ ಕೇಳಲೇಬೇಕು. ಓರ್ವ ಮಾಜಿ ಸಂಸದರಾಗಿಯೂ, ಅವರು ಅಂತಹ ಭಾಷೆ ಬಳಸಿರುವುದನ್ನು ನಾನು ಖಂಡಿಸುತ್ತೇನೆ" ಎಂದು ಅವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News