ಪ್ರಸ್ತುತ ಜನಸಂಖ್ಯೆಗೆ ಅನುಗುಣವಾಗಿ ಕ್ಷೇತ್ರಗಳ ಪುನರ್‌ವಿಂಗಡಣೆ ಮಾಡಬಾರದು: ಎಂಕೆ ಸ್ಟಾಲಿನ್

Update: 2025-03-22 14:05 IST
ಪ್ರಸ್ತುತ ಜನಸಂಖ್ಯೆಗೆ ಅನುಗುಣವಾಗಿ ಕ್ಷೇತ್ರಗಳ ಪುನರ್‌ವಿಂಗಡಣೆ ಮಾಡಬಾರದು: ಎಂಕೆ ಸ್ಟಾಲಿನ್

Photo credit: PTI

  • whatsapp icon

ಚೆನ್ನೈ : ಪ್ರಸ್ತುತ ಜನಸಂಖ್ಯೆಗೆ ಅನುಗುಣವಾಗಿ ಕ್ಷೇತ್ರಗಳ ಪುನರ್‌ವಿಂಗಡಣೆ ಮಾಡಬಾರದು, ನಾವೆಲ್ಲ ಅದನ್ನು ದೃಢವಾಗಿ ವಿರೋಧಿಸಬೇಕು ಎಂದು ಕ್ಷೇತ್ರಗಳ ಪುನರ್ ವಿಂಗಡಣೆ ಕುರಿತ ಸಭೆಯಲ್ಲಿ ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಹೇಳಿದರು.

ಕ್ಷೇತ್ರಗಳ ಪುನರ್ ವಿಂಗಡಣೆ ಕುರಿತು ತಮಿಳು ನಾಡಿನ ಆಡಳಿತಾರೂಢ ಡಿಎಂಕೆ ಮೊದಲ ಸಭೆಯನ್ನು ಚೆನ್ನೈನಲ್ಲಿ ಆಯೋಜಿಸಿದೆ. ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಸಭೆಗೆ ಆಗಮಿಸಿದ ಹಲವಾರು ರಾಜ್ಯಗಳ ಸಿಎಂಗಳು ಮತ್ತು ರಾಜಕೀಯ ಮುಖಂಡರನ್ನು ಸ್ವಾಗತಿಸಿದರು.

ಬಳಿಕ ಮಾತನಾಡಿದ ಎಂಕೆ ಸ್ಟಾಲಿನ್, ಈ ದಿನವನ್ನು ಇತಿಹಾಸದ ಪುಟದಲ್ಲಿ ಬರೆಯಲಾಗುವುದು. ಪ್ರಸ್ತುತ ಜನಸಂಖ್ಯೆಗೆ ಅನುಗುಣವಾಗಿ ಕ್ಷೇತ್ರಗಳ ವಿಂಗಡಣೆ ಆಗಬಾರದು. ನಾವೆಲ್ಲ ಅದನ್ನು ದೃಢವಾಗಿ ವಿರೋಧಿಸಬೇಕು. ಸಂಸತ್ತಿನಲ್ಲಿ ಜನಪ್ರತಿನಿಧಿಗಳು ಕಡಿಮೆಯಾದಲ್ಲಿ ನಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಶಕ್ತಿ ಕೂಡ ಕಡಿಮೆಯಾಗಲಿದೆ ಎಂದು ಹೇಳಿದರು.

ಪ್ರಜಾಪ್ರಭುತ್ವದ ಪ್ರಾತಿನಿಧ್ಯವನ್ನು ಬಲಪಡಿಸುವ ಯಾವುದನ್ನೂ ನಾವು ವಿರೋಧಿಸುವುದಿಲ್ಲ. ಆದರೆ, ಆ ಕ್ರಮವು ನ್ಯಾಯಯುತವಾಗಿರಬೇಕು ಮತ್ತು ನ್ಯಾಯಯುತ ರಾಜಕೀಯ ಪ್ರಾತಿನಿಧ್ಯದ ಮೇಲೆ ಪರಿಣಾಮ ಬೀರಬಾರದು. ಈ ಪ್ರತಿಭಟನೆಯು ಕ್ಷೇತ್ರಗಳ ಪುನರ್‌ವಿಂಗಡಣೆಯ ವಿರುದ್ಧ ಅಲ್ಲ, ನ್ಯಾಯಯುತ ಕ್ಷೇತ್ರಗಳ ಪುನರ್‌ವಿಂಗಡಣೆಗೆ ಒತ್ತಾಯಿಸುವುದಾಗಿದೆ ಎಂದು ಹೇಳಿದರು.

ಕ್ಷೇತ್ರಗಳ ಪುನರ್‌ವಿಂಗಡಣೆಯಾದರೆ ವಿದ್ಯಾರ್ಥಿಗಳು ಅವಕಾಶಗಳನ್ನು ಕಳೆದುಕೊಳ್ಳುತ್ತಾರೆ. ರೈತರು ಬೆಂಬಲವಿಲ್ಲದೆ ಹಿನ್ನಡೆ ಎದುರಿಸಬೇಕಾಗುತ್ತದೆ. ನಮ್ಮ ಸಂಸ್ಕೃತಿ ಮತ್ತು ಬೆಳವಣಿಗೆ ಅಪಾಯವನ್ನು ಎದುರಿಸಲಿದೆ. ಸಾಮಾಜಿಕ ನ್ಯಾಯಕ್ಕೆ ಧಕ್ಕೆಯಾಗಲಿದೆ. ಕ್ಷೇತ್ರಗಳ ವಿಂಗಡಣೆ ನಡೆದರೆ ಅಥವಾ ಪ್ರಾತಿನಿಧ್ಯ ಕಡಿಮೆಯಾದರೆ, ನಾವು ನಮ್ಮ ದೇಶದಲ್ಲಿ ರಾಜಕೀಯ ಅಧಿಕಾರವನ್ನು ಕಳೆದುಕೊಳ್ಳುವ ನಾಗರಿಕರಾಗುತ್ತೇವೆ ಎಂದು ಎಂಕೆ ಸ್ಟಾಲಿನ್ ಹೇಳಿದರು.

ಸಭೆಯಲ್ಲಿ ಕೇರಳ ಸಿಎಂ ಪಿಣರಾಯಿ ವಿಜಯನ್, ತೆಲಂಗಾಣ ಸಿಎಂ ರೇವಂತ್ ರೆಡ್ಡಿ, ಪಂಜಾಬ್ ಸಿಎಂ ಭಗವಂತ್ ಸಿಂಗ್ ಮಾನ್, ಶಿರೋಮಣಿ ಅಕಾಲಿದಳದ ಕಾರ್ಯಾಧ್ಯಕ್ಷ ಬಲ್ವಿಂದರ್ ಸಿಂಗ್ ಭುಂದರ್, ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಪ್ರಧಾನ ಕಾರ್ಯದರ್ಶಿ ಪಿಎಂಎ ಸಲಾಂ, ಬಿ.ಆರ್.ಎಸ್ ಪಕ್ಷದ ನಾಯಕ ಕೆ.ಟಿ ರಾಮ ರಾವ್ ಸೇರಿದಂತೆ ಹಲವರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News