ಉತ್ತರಾಖಂಡ: ಸಿಎಂ ಪುಷ್ಕರ್ ಸಿಂಗ್ ಧಾಮಿ ನೇಪಾಳಿ ಮೂಲದವರು ಎಂಬ ಹೇಳಿಕೆ ನೀಡಿದ ಬೆನ್ನಲ್ಲೇ ಭೂ ವಂಚನೆ ಪ್ರಕರಣದಲ್ಲಿ ಸ್ವಾಮಿ ದಿನೇಶಾನಂದ ಭಾರತಿ ಬಂಧನ

Photo credit: jagran.com
ಡೆಹ್ರಾಡೂನ್: ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ನೇಪಾಳಿ ಮೂಲದವರು ಎಂದು ಹೇಳಿಕೆ ನೀಡಿದ ಬೆನ್ನಲ್ಲೇ ಭೂ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಾಮಿ ದಿನೇಶಾನಂದ ಭಾರತಿ ಅವರನ್ನು ರೂರ್ಕಿ ಪೊಲೀಸರು ಬಂಧಿಸಿರುವ ಬಗ್ಗೆ ವರದಿಯಾಗಿದೆ.
ರೂರ್ಕಿಯ ತೋಡಾ ಕಲ್ಯಾಣಪುರದಲ್ಲಿರುವ ಶಂಕರಮಠ ಆಶ್ರಮದ ನಿರ್ದೇಶಕ ಸ್ವಾಮಿ ದಿನೇಶಾನಂದ ಭಾರತಿ ಅವರ ವಿರುದ್ಧ ಒಂದು ವರ್ಷದ ಹಿಂದೆ ಹರ್ಯಾಣದ ಸೋನಿಪತ್ ನಿವಾಸಿಯೋರ್ವರು ಜಮೀನಿಗೆ ಸಂಬಂಧಿಸಿ 9 ಲಕ್ಷ ರೂಪಾಯಿ ವಂಚಿಸಿರುವ ಆರೋಪದಲ್ಲಿ ಪ್ರಕರಣ ದಾಖಲಿಸಿದರು. ಆದರೆ, ಗುರುವಾರ ಅವರ ಬಂಧನ ನಡೆದಿದೆ.
ʼಭೂಕಬಳಿಕೆ ಚಟುವಟಿಕೆಗಳಲ್ಲಿ ತೊಡಗಿರುವ ಗ್ಯಾಂಗ್ ಅನ್ನು ಸ್ವಾಮಿ ಭಾರತಿ ನಿರ್ವಹಿಸುತ್ತಿದ್ದರು ಎಂದು ತಿಳಿದುಬಂದಿದೆʼ ಎಂದು ಪೊಲೀಸರ ಪ್ರಾಥಮಿಕವಾಗಿ ಹೇಳಿಕೊಂಡಿದ್ದಾರೆ. ಆದರೆ, ಸ್ವಾಮಿ ಭಾರತಿ ಅವರ ಬಂಧನದ ಬೆನ್ನಲ್ಲೇ ಚರ್ಚೆ ಉದ್ಭವಿಸಿದೆ. ಸಿಎಂ ಪುಷ್ಕರ್ ಸಿಂಗ್ ಧಾಮಿ ಅವರ ಜನಾಂಗೀಯ ಮೂಲವನ್ನು ಪ್ರಶ್ನಿಸಿದ್ದರಿಂದ ಕಳೆದ ಜೂನ್‌ನಲ್ಲಿ ದಾಖಲಾದ ಹಳೆಯ ಪ್ರಕರಣದ ನೆಪದಲ್ಲಿ ಅವರನ್ನು ಬಂಧಿಸಲಾಗಿದೆ ಎಂಬ ಟೀಕೆ ವ್ಯಕ್ತವಾಗಿದೆ.
ಎರಡು ದಿನಗಳ ಹಿಂದೆ, ರೂರ್ಕಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸ್ವಾಮಿ ಭಾರತಿ, ಸಿಎಂ ಧಾಮಿ ಉತ್ತರಾಖಂಡದ ನಾಗರಿಕರಾಗಿದ್ದರೆ, ಅವರು ಮೂಲತಃ ನೇಪಾಳಿ ಮೂಲದವರು ಎಂದು ಹೇಳಿದರು. ಈ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ಹರಿದಾಡಿದೆ.
ʼಆಪಾದಿತ ಭೂ ವ್ಯವಹಾರ ಪ್ರಕರಣದಲ್ಲಿ ಅವರ ವಿರುದ್ಧ ಜೂನ್ 2022ರಲ್ಲಿ ಎಫ್ಐಆರ್ ಅನ್ನು ದಾಖಲಿಸಲಾಗಿದೆ. ಆದರೆ, ಅವರ ಬಂಧನವು 8 ತಿಂಗಳ ನಂತರ ನಡೆದಿದೆ. ಇಲ್ಲಿ ಪ್ರಮುಖ ಪ್ರಶ್ನೆ ಏನೆಂದರೆ, ಸ್ವಾಮಿ ಭಾರತಿ ಸಿಎಂ ವಿರುದ್ಧ ಮಾತನಾಡಿದ ಸಮಯದಲ್ಲೇ ಏಕೆ ಬಂಧಿಸಲಾಗಿದೆ? ಬಿಜೆಪಿ ತನ್ನ ವಿರೋಧಿಗಳ ಬಾಯಿ ಮುಚ್ಚಿಸಲು ಪೊಲೀಸರನ್ನು ಬಳಸಿಕೊಳ್ಳುತ್ತಿದೆʼ ಎಂದು ವಕೀಲ ಶ್ರೀಗೋಪಾಲ್ ನರ್ಸನ್ ಆರೋಪಿಸಿದರು.
ಆದರೆ, ಸ್ವಾಮಿ ಭಾರತಿ ಅವರ ಬಂಧನವನ್ನು ಪೊಲೀಸರು ಸಮರ್ಥಿಸಿಕೊಂಡರು. ಯಾವುದೇ ಬಾಹ್ಯ ಒತ್ತಡವಿಲ್ಲದೆ ಅವರನ್ನು ಬಂಧಿಸಲಾಗಿದೆ. ಸ್ವಾಮಿ ಭಾರತಿ ಮತ್ತು ಇತರ ಆರೋಪಿಗಳ ವಿರುದ್ಧ ಈಗಾಗಲೇ ಪ್ರಕರಣ ದಾಖಲಾಗಿದೆ. ಇತರ ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಎಸ್ಪಿ ಸುಯಲ್ ಹೇಳಿದರು.