ಬೆಟ್ಟಿಂಗ್ ಆ್ಯಪ್ ವಿವಾದದ ಕುರಿತು ಸ್ಪಷ್ಟನೆ ನೀಡಿದ ನಟ ಪ್ರಕಾಶ್ ರಾಜ್

ನಟ ಪ್ರಕಾಶ್ ರಾಜ್ (screengrab:X)
ಹೈದರಾಬಾದ್: ಕಾನೂನುಬಾಹಿರ ಬೆಟ್ಟಿಂಗ್ ಆ್ಯಪ್‌ಗಳನ್ನು ಪ್ರಚಾರ ಮಾಡಿದ ಆರೋಪದ ಮೇಲೆ ಟಾಲಿವುಡ್ ನಟರಾದ ರಾಣಾ ದಗ್ಗುಬಾಟಿ, ವಿಜಯ್ ದೇವರಕೊಂಡ, ಪ್ರಕಾಶ್ ರಾಜ್ ಹಾಗೂ ಸಾಮಾಜಿಕ ಮಾಧ್ಯಮಗಳ ಪ್ರಭಾವಿಗಳು ಸೇರಿದಂತೆ ಒಟ್ಟು 25 ಮಂದಿಯ ವಿರುದ್ಧ ಗುರುವಾರ ಹೈದರಾಬಾದ್ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದರು. ಈ ಕುರಿತು ಸ್ಪಷ್ಟೀಕರಣ ನೀಡಿರುವ ಬಹುಭಾಷಾ ನಟ ಪ್ರಕಾಶ್ ರಾಜ್, ನಾನು ಆ ಜಾಹೀರಾತಿನಲ್ಲಿ ಒಂಬತ್ತು ವರ್ಷಗಳ ಹಿಂದೆ ಕಾಣಿಸಿಕೊಂಡಿದ್ದು ನಿಜವಾದರೂ, ತದನಂತರ, ಅದರ ಗುತ್ತಿಗೆಯನ್ನು ನವೀಕರಿಸಲು ನಿರಾಕರಿಸಿದ್ದೆ ಎಂದು ತಿಳಿಸಿದ್ದಾರೆ.
ಈ ಕುರಿತು ಎಕ್ಸ್ ನಲ್ಲಿ ವಿಡಿಯೊ ಪೋಸ್ಟ್ ಮಾಡಿರುವ ಪ್ರಕಾಶ್ ರಾಜ್, "ನಾನು ಎಲ್ಲರನ್ನೂ ಪ್ರಶ್ನೆ ಕೇಳುವುದರಿಂದ, ನಾನು ಕೂಡಾ ನನ್ನ ಕುರಿತ ಪ್ರಶ್ನೆಗೆ ಉತ್ತರಿಸಬೇಕಾಗುತ್ತದೆ. ನಾನು ಪೊಲೀಸ್ ಠಾಣೆಯಿಂದ ಸಮನ್ಸ್ ಸ್ವೀಕರಿಸಿಲ್ಲ. ಆದರೆ, ಹಾಗೇನಾದರೂ ಬಂದಾಗ, ನಾನು ನಿಶ್ಚಿತವಾಗಿ ಪ್ರತಿಕ್ರಿಯೆ ನೀಡುತ್ತೇನೆ. ಪ್ರತಿಕ್ರಿಯೆ ನೀಡಬೇಕಿರುವುದು ನನ್ನ ಜವಾಬ್ದಾರಿಯಾಗಿದೆ. 2006ರಲ್ಲಿ ಗೇಮಿಂಗ್ ಆ್ಯಪ್ ಜಾಹೀರಾತಿಗಾಗಿ ಜಂಗ್ಲಿ ರಮ್ಮಿ ಜನರು ನನ್ನನ್ನು ಸಂಪರ್ಕಿಸಿದ್ದರು ಹಾಗೂ ನಾನು ಆ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದೆ ಕೂಡಾ. ಆದರೆ, ಕೆಲವೇ ತಿಂಗಳಲ್ಲಿ ಇದು ಸರಿಯಲ್ಲ ಎಂದು ನನಗೆ ಅನ್ನಿಸಿದರೂ, ಆ ಹೊತ್ತಿಗಾಗಲೇ ನಾನು ಅವರೊಂದಿಗೆ ಗುತ್ತಿಗೆ ಕರಾರಿಗೆ ಸಹಿ ಮಾಡಿಬಿಟ್ಟಿದ್ದೆ" ಎಂದು ಹೇಳಿದ್ದಾರೆ.
"ಅವರು ತಮ್ಮ ಜಾಹೀರಾತು ಗುತ್ತಿಗೆ ಕರಾರನ್ನು ನವೀಕರಿಸಲು ಬಯಸಿದ್ದರು. ಅದಕ್ಕೆ ನಾನು, " ನನ್ನ ಆತ್ಮಸಾಕ್ಷಿ ಇದಕ್ಕೆ ಒಪ್ಪುವುದಿಲ್ಲ. ನನಗೆ ನಿಮ್ಮ ಜಹಾಹೀರಾತಿನಲ್ಲಿ ಮುಂದುವರಿಯುವುದು ಬೇಕಿಲ್ಲ" ಎಂದು ಅವರಿಗೆ ಹೇಳಿದ್ದೆ. ಇದು ಸುಮಾರು ಒಂಬತ್ತು ವರ್ಷಗಳ ಹಿಂದೆ ನಡೆದದ್ದು. ಅಲ್ಲಿಂದ ಇಲ್ಲಿಯವರೆಗೆ ಆನ್‌ಲೈನ್ ಜೂಜಾಟವನ್ನು ಪ್ರಚಾರ ಮಾಡುವ ಯಾವುದೇ ಜಾಹೀರಾತಿನಲ್ಲೂ ಕಾಣಿಸಿಕೊಂಡಿಲ್ಲ. 2021ರಲ್ಲಿ ಆ ಕಂಪನಿಯು ಆ ಆ್ಯಪ್ ಅನ್ನು ಬೇರೊಬ್ಬರಿಗೆ ಮಾರಾಟ ಮಾಡಿತು ಎಂದನಿಸುತ್ತದೆ. ಆ ಹೊಸ ಕಂಪನಿಯವರು ನನ್ನ ಜಾಹೀರಾತಿನ ಕೆಲವು ತುಣುಕುಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಬಳಸಿಕೊಂಡಿತ್ತು. ನಾನು ಅದನ್ನು ಪ್ರಶ್ನಿಸಿ ಆ ಕಂಪನಿಗೆ ಕಾನೂನು ನೋಟಿಸ್ ಹಾಗೂ ಇಮೇಲ್ ಅನ್ನೂ ರವಾನಿಸಿದ್ದೆ" ಎಂದು ತಿಳಿಸಿದ್ದಾರೆ.
"ನಾನೀಗ ಆ ಜಾಹೀರಾತಿನ ಭಾಗವಾಗಿಲ್ಲ. ನಾನು ಅದರ ಭಾಗವಾಗಲು ನಿರಾಕರಿಸಿದ್ದೇನೆ. ಗುತ್ತಿಗೆ ಕರಾರಿನ ಅವಧಿ ಮೀರಿರುವುದರಿಂದ, ನನ್ನ ಜಾಹೀರಾತಿನ ತುಣುಕುಗಳನ್ನು ಕಾನೂನು ಬಾಹಿರವಾಗಿ ಬಳಸಿಕೊಳ್ಳಬಾರದು ಎಂದು ನಾನವರಿಗೆ ಹೇಳಿದ್ದೇನೆ. ಇದಾದ ನಂತರ ಅವರು ನನ್ನ ಜಾಹೀರಾತಿನ ತುಣುಕುಗಳನ್ನು ಬಳಸಿಕೊಳ್ಳುವುದನ್ನು ಸ್ಥಗಿತಗೊಳಿಸಿದ್ದರು. ಬೆಟ್ಟಿಂಗ್ ಆ್ಯಪ್‌ಗಳನ್ನು ಪ್ರಚಾರ ಮಾಡಬಾರದು ಎಂದು ನಾನು ಪ್ರಜ್ಞಾಪೂರ್ವಕವಾಗಿ ನಿರ್ಧಾರ ಕೈಗೊಂಡಿದ್ದೆ ಎಂದು ಎಲ್ಲರಿಗೂ ತಿಳಿಸಲು ಬಯಸುತ್ತೇನೆ. ಇಂತಹ ಜೂಜಾಟಗಳಿಂದ ಜೀವನ ಹಾಳಾಗುವುದರಿಂದ, ಅವುಗಳಿಗೆ ಬಲಿಯಾಗಬೇಡಿ ಎಂದು ಎಲ್ಲ ಯುವಕರಿಗೂ ಕಿವಿಮಾತು ಹೇಳಲು ಬಯಸುತ್ತೇನೆ. ಬೆಟ್ಟಿಂಗ್ ಆ್ಯಪ್‌ಗಳನ್ನು ಬಹಿಷ್ಕರಿಸಿ" ಎಂದೂ ಅವರು ಕರೆ ನೀಡಿದ್ದಾರೆ.
"ನಿಮಗೆಲ್ಲ ಉತ್ತರಿಸುವುದು ನನ್ನ ಜವಾಬ್ದಾರಿ ಎಂದು ಭಾವಿಸಿದ್ದೇನೆ ಹಾಗೂ ನಾನು ಒಂಬತ್ತು ವರ್ಷಗಳ ಹಿಂದೆ ಮಾಡಿದ ಒಂದು ತಪ್ಪನ್ನು ನೀವೆಲ್ಲ ಕ್ಷಮಿಸುತ್ತೀರಿ ಎಂಬ ಭರವಸೆ ಇದೆ" ಎಂದು ಅವರು ತಮ್ಮ ವಿಡಿಯೊ ಪೋಸ್ಟ್ ನಲ್ಲಿ ಹೇಳಿದ್ದಾರೆ.
ದೂರುದಾರರ ಪ್ರಕಾರ, ಜನರು ತಾವು ಕಷ್ಟಪಟ್ಟು ದುಡಿದ ಹಣವನ್ನು ಜೂಜಾಟದಲ್ಲಿ ತೊಡಗಿಸುವಂತೆ ಉತ್ತೇಜಿಸಲು, ಈ ಸಿನಿಮಾ ತಾರೆಯರು ದೊಡ್ಡ ಮಟ್ಟದ ಸಂಭಾವನೆ ಪಡೆದು ಇಂತಹ ಹಲವಾರು ಬೆಟ್ಟಿಂಗ್ ವೇದಿಕೆಗಳ ಪ್ರಚಾರದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ಈ ದೂರಿನಲ್ಲಿ ಹೆಸರಿಸಿರುವ ಖ್ಯಾತ ನಾಮರ ಪೈಕಿ ರಾಣಾ ದಗ್ಗುಬಾಟಿ, ವಿಜಯ್ ದೇವರಕೊಂಡ, ಲಕ್ಷ್ಮಿ ಮಂಚು, ಪ್ರಣೀತಾ, ನಿಧಿ ಅಗರ್ವಾಲ್, ಅನನ್ಯ ನಗೆಲ್ಲಾ, ಸಿರಿ ಹನುಮಂತು, ಶ್ರೀಮುಖಿ ಹಾಗೂ ವರ್ಷಿಣಿ ಸೌಂದರ್ ರಾಜನ್ ಹೆಸರುಗಳೂ ಸೇರಿವೆ.
My response #SayNoToBettingAps #justasking pic.twitter.com/TErKkUb6ls
— Prakash Raj (@prakashraaj) March 20, 2025