ಲಕ್ನೋಗೆ ಬಂದಿಳಿದ ವಿಮಾನದಲ್ಲಿ ಮೃತ ಸ್ಥಿತಿಯಲ್ಲಿ ಕಂಡು ಬಂದ ಪ್ರಯಾಣಿಕ

ಸಾಂದರ್ಭಿಕ ಚಿತ್ರ
ಲಕ್ನೊ: ಶುಕ್ರವಾರ ಬೆಳಗ್ಗೆ 8.10 ಗಂಟೆಗೆ ಲಕ್ನೊದ ಚೌಧರಿ ಚರಣ್ ಸಿಂಗ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಏರ್ ಇಂಡಿಯಾ ವಿಮಾನ ಸಂಖ್ಯೆ AI 2845 ರಲ್ಲಿ, ಪ್ರಯಾಣಿಕರೊಬ್ಬರು ಮೃತ ಸ್ಥಿತಿಯಲ್ಲಿ ಕಂಡು ಬಂದಿದ್ದಾರೆ. ಈ ವಿಮಾನವು ಹೊಸ ದಿಲ್ಲಿಯಿಂದ ಆಗಮಿಸಿತ್ತು.
ಮೃತ ಪ್ರಯಾಣಿಕನನ್ನು ಆಶಿಫ್ ದೌಲ್ಲಾ ಅನ್ಸಾರಿ(52) ಎಂದು ಗುರುತಿಸಲಾಗಿದೆ.
ಸಹ ಪ್ರಯಾಣಿಕರೊಬ್ಬರ ಪ್ರಕಾರ, ʼವಿಮಾನ ಪರಿಚಾರಿಕೆಯು ಅವರ ಆಹಾರದ ತಟ್ಟೆ ಮತ್ತು ಪಾನೀಯಗಳನ್ನು ಸ್ವಚ್ಛಗೊಳಿಸಲು ಬಂದಾಗ, ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲʼ ಎಂದು ವರದಿಯಾಗಿದೆ.
ಅನ್ಸಾರಿಯ ಆಸನದ ಪಕ್ಕವೇ ಆಸೀನರಾಗಿದ್ದ ವೈದ್ಯರ ಗುಂಪೊಂದು ತಕ್ಷಣವೇ ಅವರನ್ನು ಪರೀಕ್ಷಿಸಿದ್ದು, ಅವರು ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ.
"ಅನ್ಸಾರಿ ತಮ್ಮ ಆಸನದ ಬೆಲ್ಟ್ ಅನ್ನು ಕಳಚಿಯೂ ಇರಲಿಲ್ಲ ಹಾಗೂ ತಮಗೆ ಒದಗಿಸಲಾಗಿದ್ದ ಆಹಾರವನ್ನು ಸೇವಿಸಿಯೂ ಇರಲಿಲ್ಲ" ಎಂದು ಅವರೊಂದಿಗೆ ವಿಮಾನದಲ್ಲಿ ಪ್ರಯಾಣಿಸಿದ್ದ ಮತ್ತೊಬ್ಬ ಸಹ ಪ್ರಯಾಣಿಕರು ತಿಳಿಸಿದ್ದಾರೆ.
ಆದರೆ, ಈ ಕುರಿತು ಚೌಧರಿ ಚರಣ್ ಸಿಂಗ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಕ್ತಾರರು ನೀಡಿರುವ ಹೇಳಿಕೆಯಲ್ಲಿ ವಿಮಾನದಲ್ಲೇ ವ್ಯಕ್ತಿ ಮೃತಪಟ್ಟಿರುವ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
"ಇಂದು ಬೆಳಗ್ಗೆ ಅಸ್ವಸ್ಥಗೊಂಡಿದ್ದ ಪುರುಷ ಪ್ರಯಾಣಿಕರೊಬ್ಬರು ಲಕ್ನೊದ ಚೌಧರಿ ಚರಣ್ ಸಿಂಗ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಕೂಡಲೇ ಅವರಿಗೆ ಪ್ರಥಮ ಚಿಕಿತ್ಸೆ ನೀಡಿದ ನಮ್ಮ ವೈದ್ಯಕೀಯ ತಂಡವು ಆ್ಯಂಬುಲೆನ್ಸ್‌ನಲ್ಲಿ ಅವರನ್ನು ಆಸ್ಪತ್ರೆಗೆ ಸಾಗಿಸಿತು. ಆದರೆ, ಅವರು ನಂತರ ನಿಧನರಾದರು ಎಂಬುದು ತಿಳಿದು ತೀರಾ ದುಃಖವಾಯಿತು. ಈ ಕಷ್ಟದ ಸಮಯದಲ್ಲಿ ಅವರ ಕುಟುಂಬದ ಸದಸ್ಯರಿಗೆ ತೀವ್ರ ಸಂತಾಪಗಳನ್ನು ಸೂಚಿಸುತ್ತೇವೆ" ಎಂದು ವಿಮಾನ ನಿಲ್ದಾಣದ ವಕ್ತಾರರು ಹೇಳಿದ್ದಾರೆ.