ಉದ್ಯೋಗ ಖಾತರಿ ಯೋಜನೆಯನ್ನು ವ್ಯವಸ್ಥಿತವಾಗಿ ದುರ್ಬಲಗೊಳಿಸುತ್ತಿರುವ ಕೇಂದ್ರ ಸರಕಾರ: ರಾಜ್ಯಸಭೆಯಲ್ಲಿ ಸೋನಿಯಾ ಗಾಂಧಿ ಆರೋಪ

Update: 2025-03-18 23:03 IST
ಉದ್ಯೋಗ ಖಾತರಿ ಯೋಜನೆಯನ್ನು ವ್ಯವಸ್ಥಿತವಾಗಿ ದುರ್ಬಲಗೊಳಿಸುತ್ತಿರುವ ಕೇಂದ್ರ ಸರಕಾರ: ರಾಜ್ಯಸಭೆಯಲ್ಲಿ ಸೋನಿಯಾ ಗಾಂಧಿ ಆರೋಪ

Photo - PTI 

  • whatsapp icon

ಹೊಸದಿಲ್ಲಿ: ಕೇಂದ್ರದ ಬಿಜೆಪಿ ನೇತೃತ್ವದ ಸರಕಾರವು ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (ಎಮ್‌ಜಿಎನ್‌ಆರ್‌ಇಜಿಎ)ಯಡಿ ನೀಡುವ ಬಜೆಟ್ ಅನುದಾನವನ್ನು ಹಲವು ವರ್ಷಗಳಿಂದ ಹೆಚ್ಚಿಸಿಲ್ಲ ಎಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಮಂಗಳವಾರ ಆರೋಪಿಸಿದ್ದಾರೆ.

‘‘ಈ ಮಹತ್ವದ ಶಾಸನವು ಲಕ್ಷಾಂತರ ಗ್ರಾಮೀಣ ಬಡವರ ಪ್ರಮುಖ ಆರ್ಥಿಕ ಸುರಕ್ಷತೆಯಾಗಿದೆ. ಆದರೆ, ಹಾಲಿ ಬಿಜೆಪಿ ಸರಕಾರವು ಈ ಯೋಜನೆಯನ್ನು ವ್ಯವಸ್ಥಿತವಾಗಿ ದುರ್ಬಲಗೊಳಿಸುತ್ತಿರುವುದು ಅತ್ಯಂತ ಆತಂಕಕಾರಿ ಸಂಗತಿಯಾಗಿದೆ’’ ಎಂದು ರಾಜ್ಯಸಭೆಯಲ್ಲಿ ಶೂನ್ಯ ಅವಧಿಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ ಅವರು ಹೇಳಿದರು.

ಈ ಯೋಜನೆಗೆ ನೀಡಲಾಗುವ ಬಜೆಟ್ ಅನುದಾನವನ್ನು 10 ವರ್ಷಗಳಿಂದ 86,000 ಕೋಟಿ ರೂ.ಯಲ್ಲೇ ಸ್ಥಗಿತಗೊಳಿಸಲಾಗಿದೆ ಎಂದು ಅವರು ಆರೋಪಿಸಿದರು. ಹಣದುಬ್ಬರಕ್ಕೆ ಹೊಂದಿಸಿದಾಗ, ಉಪಯೋಗಕ್ಕೆ ಲಭಿಸುವ ನೈಜ ಬಜೆಟ್ ಅನುದಾನವು 4,000 ಕೋಟಿ ರೂ.ಯುಷ್ಟು ಕಡಿಮೆಯಾಗುತ್ತದೆ ಎಂದು ಅವರು ನುಡಿದರು. ಅದೂ ಅಲ್ಲದೆ, ನಿಗದಿಪಡಿಸಲಾಗಿರುವ ಅನುದಾನದ ಸುಮಾರು 20 ಶೇಕಡವನ್ನು ಹಿಂದಿನ ವರ್ಷಗಳ ಬಾಕಿಯನ್ನು ಪಾವತಿಸಲು ಬಳಸಲಾಗುತ್ತದೆ ಎಂದು ಅವರು ಬೆಟ್ಟು ಮಾಡಿದರು.

‘‘ಅದೂ ಅಲ್ಲದೆ, ಈ ಯೋಜನೆಯು ಹಲವು ಸವಾಲುಗಳನ್ನು ಎದುರಿಸುತ್ತಿದೆ. ಅವುಗಳೆಂದರೆ ಆಧಾರ್ ಆಧಾರಿತ ಪಾವತಿ ವ್ಯವಸ್ಥೆಯಿಂದಾಗಿ ಅರ್ಹತೆ ಇದ್ದರೂ ಜನರು ಯೋಜನೆಯ ವ್ಯಾಪ್ತಿಯಿಂದ ಹೊರಗಿರುವುದು, ರಾಷ್ಟ್ರೀಯ ಮೊಬೈಲ್ ಉಸ್ತುವಾರಿ ವ್ಯವಸ್ಥೆ, ವೇತನ ಪಾವತಿಯಲ್ಲಿ ಪದೇ ಪದೇ ವಿಳಂಬ ಮತ್ತು ಹಣದುಬ್ಬರದ ಪರಿಣಾಮವನ್ನು ಮೀರುವಷ್ಟು ವೇತನ ಇಲ್ಲದಿರುವುದು’’ ಎಂದು ಸೋನಿಯಾ ಹೇಳಿದರು.

ಕಳೆದ ವರ್ಷ ಲೋಕಸಭಾ ಚುನಾವಣೆ ಘೋಷಣೆಯಾಗುವ ಸ್ವಲ್ಪ ಮುನ್ನ, ಕೇಂದ್ರ ಸರಕಾರವು 2024-25ರ ಆರ್ಥಿಕ ವರ್ಷಕ್ಕೆ ಎಮ್‌ಜಿಎನ್‌ಆರ್‌ಇಜಿಎ ವೇತನವನ್ನು 3ರಿಂದ 10 ಶೇಕಡದಷ್ಟು ಹೆಚ್ಚಿಸಿತ್ತು.

ಗ್ರಾಮೀಣ ಉದ್ಯೋಗ ಯೋಜನೆ ಖಾತರಿ ಯೋಜನೆಯಡಿ ನೀಡಲಾಗುವ ಕನಿಷ್ಠ ವೇತನ ಮತ್ತು ಖಾತರಿ ಕೆಲಸದ ದಿನಗಳ ಸಂಖ್ಯೆಯನ್ನು ಹೆಚ್ಚಿಸುವಂತೆಯೂ ಕಾಂಗ್ರೆಸ್ ನಾಯಕಿ ಸರಕಾರವನ್ನು ಒತ್ತಾಯಿಸಿದರು.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News