ಎರಡು ತಿಂಗಳು ಡಿಜಿಟಲ್ ಅರೆಸ್ಟ್: ವೃದ್ಧೆಗೆ 20 ಕೋಟಿ ರೂ. ವಂಚನೆ

ಸಾಂದರ್ಭಿಕ ಚಿತ್ರ (AI-generated)
ಮುಂಬೈ: ಹಣ ದುರುಪಯೋಗ ಆರೋಪದಲ್ಲಿ ಬಂಧನದ ಬೆದರಿಕೆ ಹಾಕಿ 86 ವರ್ಷದ ವೃದ್ಧೆಯೊಬ್ಬರಿಗೆ ಸೈಬರ್ ವಂಚಕರು 20 ಕೋಟಿ ರೂಪಾಯಿಗಳನ್ನು ವಂಚಿಸಿದ ಪ್ರಕರಣ ಮುಂಬೈ ನಗರದಲ್ಲಿ ಬೆಳಕಿಗೆ ಬಂದಿದೆ. ವಂಚಕರು ಇದು ನೈಜ ಪ್ರಕರಣ ಎಂದು ವೃದ್ಧೆಯಲ್ಲಿ ನಂಬಿಕೆ ಹುಟ್ಟಿಸುವ ಸಲುವಾಗಿ ಆನ್ಲೈನ್ ಮೂಲಕ ನಕಲಿ ಕೋರ್ಟ್ ಪ್ರಕ್ರಿಯೆಗೆ ಆಕೆ ಹಾಜರಾಗುವಂತೆ ಮಾಡಿದ್ದಾರೆ. ಎರಡು ತಿಂಗಳ ಕಾಲ ಪ್ರತಿ ಮೂರು ಗಂಟೆಗೊಮ್ಮೆ ಕರೆ ಮಾಡಿ, ಅಕೆಯ ಸ್ಥಳವನ್ನು ಪತ್ತೆ ಮಾಡಿ ಮನೆಯಲ್ಲೇ ಉಳಿಯುವಂತೆ ನಿರ್ದೇಶಿಸಿದ್ದಾರೆ. ಈ ಸಂಬಂಧ ಇಬ್ಬರು ವಂಚಕರನ್ನು ಬಂಧಿಸಲಾಗಿದೆ.
ಮೊದಲು ಸಿಬಿಐ ಅಧಿಕಾರಿ ಎಂದು ಪರಿಚಯಿಸಿಕೊಂಡ ಸಂದೀಪ್ ರಾವ್ ಎಂಬ ವ್ಯಕ್ತಿ ವೃದ್ಧೆಗೆ ಕರೆ ಮಾಡಿದ್ದ. ವೃದ್ಧೆಯ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆದು ಹಣ ದುರುಪಯೋಗಪಡಿಸಿಕೊಳ್ಳಲು ಇದನ್ನು ಬಳಸಲಾಗಿದೆ ಎಂದು ಆತ ಆಪಾದಿಸಿದ್ದ. ಈ ಖಾತೆಯಿಂದ ಜೆಟ್ ಏರ್ ವೇಸ್ ಸಂಸ್ಥಾಪಕ ನರೇಶ್ ಗೋಯಲ್ ಖಾತೆಗೂ ಹಣ ವರ್ಗಾವಣೆಯಾಗಿದೆ ಎಂದು ಹೇಳಿದ್ದ. ಮನೆಕೆಲಸದ ಮಹಿಳೆ ವೃದ್ಧೆಯ ವರ್ತನೆಯಲ್ಲಾದ ಬದಲಾವಣೆಯನ್ನು ಗಮನಿಸಿ ಪುತ್ರಿಗೆ ಮಾಹಿತಿ ನೀಡಿದ್ದಾಳೆ. "ತನ್ನ ಕೊಠಡಿಯಲ್ಲೇ ಉಳಿದಿದ್ದ ವೃದ್ಧೆ ಕೆಲವರ ಬಗ್ಗೆ ಭಯ ಹೊಂದಿದ್ದರು ಹಾಗೂ ಊಟಕ್ಕೆ ಮಾತ್ರ ಹೊರ ಬರುತ್ತಿದ್ದರು" ಎಂದು ಪೊಲೀಸರು ಹೇಳಿದ್ದಾರೆ.
ವೃದ್ಧೆ ವಿರುದ್ಧ ಪ್ರಕರಣ ದಾಖಲಾಗಿದ್ದು, ಸಿಬಿಐ ವಿಶೇಷ ತನಿಖಾ ತಂಡ ಈ ಬಗ್ಗೆ ತನಿಖೆ ನಡೆಸುತ್ತದೆ ಎಂದು ರಾವ್ ಹೇಳಿದ್ದ. ಮಕ್ಕಳನ್ನು ಕೂಡಾ ಬಂಧಿಸಿ ಅವರ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದೂ ವಾಟ್ಸಪ್ ಕರೆ ಮೂಲಕ ಬೆದರಿಕೆ ಹಾಕಲಾಗಿತ್ತು. ವೃದ್ಧೆಯ ವಿರುದ್ಧ ಬಂಧನದ ವಾರೆಂಟ್, ಖಾತೆ ಮುಟ್ಟುಗೋಲು ಹಾಕಿಕೊಳ್ಳುವ ವಾರೆಂಟ್ ಮತ್ತು ರಹಸ್ಯ ಒಪ್ಪಂದ ಇದೆ ಎಂದು ನಂಬಿಸಿದ್ದ. ತನಿಖೆಗೆ ಸಹಕರಿಸದಿದ್ದರೆ ಮನೆಗೆ ಪೊಲೀಸರನ್ನು ಕಳುಹಿಸುವುದಾಗಿ ಬೆದರಿಕೆ ಹಾಕಲಾಗಿತ್ತು.
ಡಿಜಿಟಲ್ ಇಂಡಿಯಾ ಮೂವ್ಮೆಂಟ್ ಅಡಿಯಲ್ಲಿ ಭಯಗೊಂಡ ಮಹಿಳೆಯನ್ನು ಪೊಲೀಸ್ ಠಾಣೆಗೆ ಹಾಜರಾಗುವ ಅಗತ್ಯವಿಲ್ಲ ಮತ್ತು ಆಕೆಯ ವಿರುದ್ಧ ಇ-ತನಿಖೆ ನಡೆಸಲಾಗುವುದು ಎಂದು ಹೇಳಿದ್ದ. ಆದರೆ ಪೊಲೀಸರು ಈಕೆಯ ಚಲನವಲನಗಳ ಮೇಲೆ ನಿಗಾ ಇಟ್ಟಿರುತ್ತಾರೆ ಎಂದು ಹೇಳಿದ್ದ. ಅಪರಾಧ ಚಟುವಟಿಕೆಗಳಿಗೆ ಹಣ ವರ್ಗಾವಣೆ ಮಾಡಲಾಗಿದೆ ಎಂಬ ಆರೋಪದಲ್ಲಿ ತನಿಖೆ ನಡೆಸುವ ಸಲುವಾಗಿ ಬ್ಯಾಕ್ ವಿವರಗಳನ್ನು ಪಡೆಯಲಾಗುತ್ತಿದೆ ಎಂದು ನಂಬಿಸಿ ವಿವರಗಳನ್ನು ಪಡೆದಿದ್ದರು.
ಮಹಿಳೆಯನ್ನು ಯಾರ ಜತೆಯೂ ಮಾತನಾಡದಂತೆ ಡಿಜಿಟಲ್ ಬಂಧನದಲ್ಲಿ ಇರಿಸಲಾಗಿತ್ತು. ಅವರ ಕುಟುಂಬ, ವ್ಯವಹಾರ ಮತ್ತು ಹೂಡಿಕ ಬಗ್ಗೆ ಮಾಹಿತಿ ಕಲೆ ಹಾಕಿದ್ದರು. ಪ್ರತಿ ಎರಡು ಮೂರು ಗಂಟೆಗಳಿಗೊಮ್ಮೆ ಕರೆ ಮಾಡಿ ಸುಪ್ರೀಂಕೋರ್ಟ್ ಹೆಸರಿನಲ್ಲಿ ನೋಟಿಸ್ ನೀಡಿದ್ದರು. ಈ ಆರೋಪದಿಂದ ಮುಕ್ತಗೊಳಿಸಲು ಬ್ಯಾಂಕ್ ಖಾತೆಯಿಂದ ಹಣ ವರ್ಗಾಯಿಸುವಂತೆ ಸೂಚಿಸಿ ವಂಚಿಸಿದ್ದರು.