ಬೆಂಕಿ ನಂದಿಸುವ ಕಾರ್ಯಾಚರಣೆಯ ವೇಳೆ ನ್ಯಾ. ಯಶವಂತ್ ವರ್ಮರ ನಿವಾಸದಲ್ಲಿ ಯಾವುದೇ ನಗದು ಪತ್ತೆಯಾಗಿಲ್ಲ: ದಿಲ್ಲಿ ಅಗ್ನಿ ಶಾಮಕ ದಳ ಮುಖ್ಯಸ್ಥ ಅತುಲ್ ಗರ್ಗ್

Credit: Allahabad High Court
ಹೊಸದಿಲ್ಲಿ: ದಿಲ್ಲಿ ಹೈಕೋರ್ಟ್ ನ್ಯಾಯಮೂರ್ತಿ ಯಶವಂತ್ ವರ್ಮರ ನಿವಾಸದಲ್ಲಿ ನಡೆದ ಬೆಂಕಿ ನಂದಿಸುವ ಕಾರ್ಯಾಚರಣೆಯ ವೇಳೆ ಯಾವುದೇ ನಗದು ಪತ್ತೆಯಾಗಿಲ್ಲ ಎಂದು ಶುಕ್ರವಾರ ದಿಲ್ಲಿ ಅಗ್ನಿಶಾಮಕ ದಳದ ಮುಖ್ಯಸ್ಥ ಅತುಲ್ ಗರ್ಗ್ ಸ್ಪಷ್ಟನೆ ನೀಡಿದ್ದಾರೆ.
ಮಾರ್ಚ್ 14ರ ರಾತ್ರಿ 10.35ರ ವೇಳೆಗೆ ಲ್ಯುಟಿನ್ಸ್ ದಿಲ್ಲಿಯಲ್ಲಿರುವ ನ್ಯಾ. ಯಶವಂತ್ ವರ್ಮರ ನಿವಾಸದಲ್ಲಿ ಬೆಂಕಿ ತಗುಲಿದೆ ಎಂಬ ಮಾಹಿತಿಯನ್ನು ನಮ್ಮ ನಿಯಂತ್ರಣ ಕೊಠಡಿ ಸ್ವೀಕರಿಸಿತು. ತಕ್ಷಣವೇ ಘಟನಾ ಸ್ಥಳಕ್ಕೆ ಎರಡು ಅಗ್ನಿ ಶಾಮಕ ವಾಹನಗಳನ್ನು ರವಾನಿಸಲಾಯಿತು ಎಂದು ಅವರು PTI ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಅಗ್ನಿ ಶಾಮಕ ವಾಹನಗಳು ರಾತ್ರಿ 11.43 ಗಂಟೆಗೆ ಘಟನಾ ಸ್ಥಳಕ್ಕೆ ತಲುಪಿದವು. ಆ ಬೆಂಕಿ ಅವಘಡವು ಲೇಖನ ಸಾಮಗ್ರಿಗಳು ಹಾಗೂ ಗೃಹೋಪಯೋಗಿ ವಸ್ತುಗಳನ್ನು ಶೇಖರಿಸಿಟ್ಟಿದ್ದ ಸಂಗ್ರಹ ಕೋಣೆಯಲ್ಲಿ ಸಂಭವಿಸಿತ್ತು. ಬೆಂಕಿಯ ಜ್ವಾಲೆಗಳನ್ನು ನಿಯಂತ್ರಣಕ್ಕೆ ತರಲು ಸುಮಾರು 15 ನಿಮಿಷ ತಗುಲಿತು. ಆ ಘಟನೆಯಲ್ಲಿ ಯಾರೂ ಗಾಯಗೊಂಡಿರಲಿಲ್ಲ ಎಂದು ಅವರು ಹೇಳಿದ್ದಾರೆ.
“ಬೆಂಕಿಯ ಜ್ವಾಲೆಗಳನ್ನು ನಂದಿಸುತ್ತಿದ್ದಂತೆಯೆ ನಾವು ಬೆಂಕಿ ಅವಘಡದ ಕುರಿತು ಪೊಲೀಸರಿಗೆ ಮಾಹಿತಿ ನೀಡಿದೆವು. ಇದಾದ ನಂತರ, ಅಗ್ನಿ ಶಾಮಕ ದಳದ ತಂಡವೊಂದು ಘಟನಾ ಸ್ಥಳದಿಂದ ನಿರ್ಗಮಿಸಿತು. ಬೆಂಕಿ ನಂದಿಸುವ ಕಾರ್ಯಾಚರಣೆಯ ಸಂದರ್ಭದಲ್ಲಿ ನಮ್ಮ ಅಗ್ನಿ ಶಾಮಕ ದಳದ ಸಿಬ್ಬಂದಿಗಳಿಗೆ ಯಾವುದೇ ನಗದು ಕಂಡು ಬಂದಿಲ್ಲ” ಎಂದು ಅತುಲ್ ಗರ್ಗ್ ತಿಳಿಸಿದ್ದಾರೆ.
ಬೆಂಕಿ ಅವಘಡದ ಸಂದರ್ಭದಲ್ಲಿ ನ್ಯಾ. ಯಶವಂತ್ ವರ್ಮರ ನಿವಾಸದಲ್ಲಿ ಕಂಡು ಬಂದಿದ್ದ ಭಾರಿ ಪ್ರಮಾಣದ ನಗದು ಸಂಗ್ರಹದ ಕುರಿತು ಶುಕ್ರವಾರ ಸುಪ್ರೀಂ ಕೋರ್ಟ್ ಕೊಲಿಜಿಯಂ ಪ್ರಾಥಮಿಕ ತನಿಖೆಗೆ ಚಾಲನೆ ನೀಡಿದೆ. ಅಲ್ಲದೆ, ನ್ಯಾ. ಯಶವಂತ್ ವರ್ಮರನ್ನು ಸುಪ್ರೀಂ ಕೋರ್ಟ್ ಕೊಲಿಜಿಯಂ ಅಲಹಾಬಾದ್ ಹೈಕೋರ್ಟ್ ಗೆ ವರ್ಗಾಯಿಸಿದೆ ಎಂದೂ ವರದಿಯಾಗಿದೆ.