ಸಂಸತ್ತಿನಲ್ಲಿ ಭಾರೀ ಕೋಲಾಹಲ ಸೃಷ್ಟಿಸಿದ ಮೀಸಲಾತಿ | ಡಿ.ಕೆ.ಶಿವಕುಮಾರ್ ಹೇಳಿಕೆ ಕುರಿತು ಪ್ರತಿಪಕ್ಷ ಮತ್ತು ಬಿಜೆಪಿ ನಡುವೆ ಭಾರೀ ವಾಗ್ಯುದ್ಧ

ಡಿ.ಕೆ.ಶಿವಕುಮಾರ್ | PC : PTI
ಹೊಸದಿಲ್ಲಿ: ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ಧರ್ಮಾಧಾರಿತ ಮೀಸಲಾತಿಯನ್ನು ಒದಗಿಸಲು ಸಂವಿಧಾನವನ್ನು ಬದಲಾಯಿಸುವಂತೆ ಸಲಹೆ ನೀಡಿದ್ದಾರೆ ಎಂದು ಆರೋಪಿಸಿ ಆಡಳಿತಾರೂಢ ಬಿಜೆಪಿ ನಡೆಸಿದ ಪ್ರತಿಭಟನೆಗಳು ಸೋಮವಾರ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಕೋಲಾಹಲವನ್ನು ಸೃಷ್ಟಿಸಿದವು. ಇದೇ ವೇಳೆ ಆಡಳಿತ ಪಕ್ಷವು ಸಂಸತ್ತಿನ ಕಲಾಪಗಳನ್ನು ಸ್ಥಗಿತಗೊಳಿಸಲು ‘ನಕಲಿ ವಿಷಯ’ವನ್ನು ಎತ್ತುತ್ತಿದೆ ಎಂದು ಪ್ರತಿಪಕ್ಷ ಕಾಂಗ್ರೆಸ್ ಆರೋಪಿಸಿತು.
ಈ ನಡುವೆ,ಬೆಂಗಳೂರಿನಲ್ಲಿ ಶಿವಕುಮಾರ ಅವರು ತಾನು ಇಂತಹ ಯಾವುದೇ ಹೇಳಿಕೆಯನ್ನು ನೀಡಿದ್ದನ್ನು ನಿರಾಕರಿಸಿದರು ಮತ್ತು ಇಂತಹ ವಿಷಯಗಳನ್ನು ಹೇಳದಿರುವಷ್ಟು ಸಾಮಾನ್ಯ ಜ್ಞಾನ ತನಗಿದೆ ಎಂದು ಪ್ರತಿಪಾದಿಸಿದರು.
ಕೋಲಾಹಲದಿಂದಾಗಿ ರಾಜ್ಯಸಭೆಯು ದಿನದ ಮಟ್ಟಿಗೆ ಮುಂದೂಡಲ್ಪಡುವ ಮುನ್ನ ಮಸೂದೆಯೊಂದಕ್ಕೆ ಲೋಕಸಭೆಯು ಮಾಡಿದ ಕೆಲವು ತಿದ್ದುಪಡಿಗಳನ್ನು ಅಂಗೀಕರಿಸಿದ್ದನ್ನು ಬಿಟ್ಟು ಯಾವುದೇ ಅರ್ಥಪೂರ್ಣ ಕಲಾಪವನ್ನು ನಡೆಸಲು ಸಾಧ್ಯವಾಗಲಿಲ್ಲ. ಅತ್ತ ಲೋಕಸಭೆಯಲ್ಲಿ ಬೆಳಗಿನ ಅಧಿವೇಶನವು ಕೋಲಾಹಲದಲ್ಲಿ ಸಂಪೂರ್ಣವಾಗಿ ಕೊಚ್ಚಿಕೊಂಡು ಹೋಗಿತ್ತು.
ದಿಲ್ಲಿ ಉಚ್ಚ ನ್ಯಾಯಾಲಯದ ನ್ಯಾಯಾಧೀಶರ ನಿವಾಸದಲ್ಲಿ ಭಾರೀ ಮೊತ್ತದ ಹಣ ಪತ್ತೆಯಾಗಿರುವ ವಿಷಯವನ್ನು ತಾವು ಎತ್ತುವುದನ್ನು ತಡೆಯಲು ಬಿಜೆಪಿ ಬಯಸಿದೆ ಎಂದು ಪ್ರತಿಪಕ್ಷಗಳು ಪ್ರತಿಪಾದಿಸಿದವು. ಲೋಕಸಭೆಯು ಕಾರ್ಯ ನಿರ್ವಹಿಸದಂತೆ ಮಾಡಲು ಸರಕಾರವು ನಿರ್ಧರಿಸಿದಂತಿದೆ ಎಂದು ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ಹೇಳಿದರೆ,ಅತ್ತ ರಾಜ್ಯಸಭೆಯಲ್ಲಿ ಟಿಎಂಸಿಯ ಸದನ ನಾಯಕ ಡೆರೆಕ್ ಒಬ್ರಿಯಾನ್ ಅವರು,ಆಡಳಿತಾರೂಢ ಬಿಜೆಪಿ ಮತ್ತು ಎನ್‌ಡಿಎ ಸದಸ್ಯರು ಸದನದಲ್ಲಿ ಅಡ್ಡಿಗಳನ್ನುಂಟು ಮಾಡುವುದರೊಂದಿಗೆ ಸಂಸತ್ತನ್ನು ‘ಹೊಸ ಕೀಳುಮಟ್ಟ’ಕ್ಕೆ ಇಳಿಸಿದ್ದಾರೆ ಎಂದು ಹೇಳಿದರು.
ಉಭಯ ಸದನಗಳಲ್ಲಿ ವಿಷಯವನ್ನೆತ್ತಿದ ಸಂಸದೀಯ ವ್ಯವಹಾರಗಳ ಸಚಿವ ಕಿರಣ ರಿಜಿಜು ಅವರು,ಸಾಂವಿಧಾನಿಕ ಹುದ್ದೆಯಲ್ಲಿರುವ ವ್ಯಕ್ತಿ ಮುಸ್ಲಿಮರಿಗೆ ಮೀಸಲಾತಿಯನ್ನು ಒದಗಿಸಲು ಸಂವಿಧಾನವನ್ನು ಬದಲಿಸುವ ‘ಸ್ವೀಕಾರಾರ್ಹವಲ್ಲದ’ ಮಾತನ್ನಾಡಿರುವುದರಿಂದ ಎನ್‌ಡಿಎ ಸಂಸದರು ಆಕ್ರೋಶಗೊಂಡಿದ್ದಾರೆ ಎಂದು ಹೇಳಿದರು. ಕರ್ನಾಟಕದಲ್ಲಿ ಸರಕಾರಿ ಗುತ್ತಿಗೆಗಳಲ್ಲಿ ಮುಸ್ಲಿಮರಿಗೆ ಶೇ.4ರಷ್ಟು ಮೀಸಲಾತಿ ಒದಗಿಸುವ ವಿರುದ್ಧ ಅವರು ಕಿಡಿಕಾರಿದರು.
ಸದನವು ಮೌನವಾಗಿ ವೀಕ್ಷಿಸಲು ಹೇಗೆ ಸಾಧ್ಯ?ಕಾಂಗ್ರೆಸ್ ಸ್ಪಷ್ಟನೆಯನ್ನು ನೀಡಬೇಕು,ವ್ಯಕ್ತಿಯನ್ನು ಹುದ್ದೆಯಿಂದ ವಜಾಗೊಳಿಸಬೇಕು. ನೀವು ಮುಸ್ಲಿಮರಿಗೆ ಮೀಸಲಾತಿಯನ್ನು ಒದಗಿಸುವುದಾಗಿ ಹೇಳುತ್ತೀರಿ ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್ ಚಿತ್ರವನ್ನು ಮತ್ತು ಸಂವಿಧಾನದ ಪ್ರತಿಯನ್ನು ನಿಮ್ಮ ಜೇಬಿನಲ್ಲಿಟ್ಟುಕೊಂಡು ನಾಟಕವಾಡುತ್ತಿದ್ದೀರಿ ಎಂದು ರಿಜಿಜು ಹೇಳಿದರು.
ಕಾಂಗ್ರೆಸ್ ಸಂಸದರ ಪ್ರತಿಭಟನೆಗಳ ನಡುವೆಯೇ ರಾಜ್ಯಸಭೆಯಲ್ಲಿ ಸದನ ನಾಯಕ ಜೆ.ಪಿ.ನಡ್ಡಾ ಅವರು,ಕಾಂಗ್ರೆಸ್ ಪಕ್ಷವು ಸಂವಿಧಾನವನ್ನು ಚೂರುಚೂರಾಗಿಸುತ್ತಿದೆ ಎಂದು ಆರೋಪಿಸಿದರು. ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನವನ್ನು ರೂಪಿಸುವಾಗ ಧರ್ಮದ ಆಧಾರದಲ್ಲಿ ಮೀಸಲಾತಿಯನ್ನು ಒದಗಿಸಲಾಗುವುದಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ ಎಂದು ಹೇಳಿದರು.
ನಿಮ್ಮ ಬೇಡಿಕೆಯೇನು ಎಂದು ಸಭಾಪತಿ ಜಗದೀಪ ಧನ್ಕರ್ ಪ್ರಶ್ನಿಸಿದಾಗ ನಡ್ಡಾ,ಅಂತಹ ಕಾನೂನುಗಳು ಮತ್ತು ನಿಯಮಗಳನ್ನು ಹಿಂದೆಗೆದುಕೊಳ್ಳಬೇಕು ಹಾಗೂ ಕಾಂಗ್ರೆಸ್ ಅಧ್ಯಕ್ಷರೂ ಆಗಿರುವ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆಯವರು ಅದಕ್ಕೆ ಪ್ರತಿಕ್ರಿಯಿಸಬೇಕು ಎಂದು ಉತ್ತರಿಸಿದರು.
‘‘ಅಂಬೇಡ್ಕರ್ ನೀಡಿರುವ ಸಂವಿಧಾನವನ್ನು ಬದಲಿಸಲು ಯಾರಿಗೂ ಸಾಧ್ಯವಿಲ್ಲ. ನಾವು ಸಂವಿಧಾನವನ್ನು ರಕ್ಷಿಸುವ ಜನರು. ನಾವು ಕನ್ಯಾಕುಮಾರಿಯಿಂದ ಕಾಶ್ಮೀರಕ್ಕೆ ಭಾರತ ಜೋಡೊ ಯಾತ್ರೆಯನ್ನು ಮಾಡಿದವರು ಮತ್ತು ಇವರೆಲ್ಲ ‘ಭಾರತ ತೋಡೊ’ದಲ್ಲಿ ನಂಬಿಕೆ ಹೊಂದಿರುವವರು’’ ಎಂದು ಖರ್ಗೆ ಝಾಡಿಸಿದರು.
ಘೋಷಣೆಗಳು ಮುಂದುವರಿದಾಗ ಧನ್ಕರ್ ಸದನವನ್ನು ಅಪರಾಹ್ನ ಎರಡು ಗಂಟೆಯವರೆಗೆ ಮುಂದೂಡಿದರು. ಸದನವು ಮರುಸಮಾವೇಶಗೊಂಡಾಗ ಕಾಂಗ್ರೆಸ್ ಸಂಸದ ರಣದೀಪ ಸುರ್ಜೆವಾಲಾ ಅವರು ಸಚಿವರು ತನ್ನ ಹೇಳಿಕೆಗಳಿಗಾಗಿ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು.
‘ಶಿವಕುಮಾರ ಸಂವಿಧಾನವನ್ನು ಬದಲಿಸುವ ಬಗ್ಗೆ ಮಾತನಾಡಿರಲಿಲ್ಲ ಮತ್ತು ನಮ್ಮಲ್ಲಿ ಯಾರೂ ಹಾಗೆ ಮಾಡುವುದಿಲ್ಲ ’ ಎಂದು ಹೇಳಿದ ಖರ್ಗೆ,‘ಇಂತಹ ಹೇಳಿಕೆಗಳು ಇನ್ನೊಂದು ಕಡೆಯಿಂದ ಬರುತ್ತವೆ. ಆರೆಸ್ಸೆಸ್ ಮುಖ್ಯಸ್ಥ ಮೋಹನ ಭಾಗವತ ಅದನ್ನು ಹೇಳಿರಲಿಲ್ಲವೇ? ಯಾವುದೇ ಬೆಲೆಯನ್ನು ತೆತ್ತಾದರೂ ನಾವು ಸಂವಿಧಾನವನ್ನು ರಕ್ಷಿಸುತ್ತೇವೆ. ನ್ಯಾಯಾಧೀಶರ ನಿವಾಸದಲ್ಲಿ ಹಣ ಪತ್ತೆಯಾದ ವಿಷಯವನ್ನು ಮುಚ್ಚಿಡಲು ಅವರು ಇದನ್ನು ಹೇಳುತ್ತಿದ್ದಾರೆ ’ ಎಂದರು.
ಖರ್ಗೆಯವರಿಗೆ ತಿರುಗೇಟು ನೀಡಿದ ನಡ್ಡಾ,ಕರ್ನಾಟಕದಲ್ಲಿ ಮಾತ್ರವಲ್ಲ,ತೆಲಂಗಾಣದಲ್ಲಿಯೂ ಕಾಂಗ್ರೆಸ್ ಸರಕಾರವು ಮುಸ್ಲಿಮರಿಗೆ ಮೀಸಲಾತಿ ಒದಗಿಸುವ ಶಾಸನವನ್ನು ಅಂಗೀಕರಿಸಿದೆ. ಅಲ್ಪಸಂಖ್ಯಾತ ಸಮುದಾಯವನ್ನು ಒಬಿಸಿ ಎಂದು ಪಟ್ಟಿ ಮಾಡುವ ಮೂಲಕ ಕಾಂಗ್ರೆಸ್ ಮುಸ್ಲಿಮರಿಗೆ ಹಿಂಬಾಗಿಲಿನಿಂದ ಮೀಸಲಾತಿಯನ್ನು ಒದಗಿಸುತ್ತಿದೆ ಎಂದು ಆರೋಪಿಸಿದರು.
ಪ್ರತಿಭಟನೆಗಳು ಮುಂದುವರಿದಂತೆ ಪೀಠದಲ್ಲಿದ್ದ ಉಪಸಭಾಪತಿ ಹರಿವಂಶ ನಾರಾಯಣ ಸಿಂಗ್ ಅವರು ಸದನವನ್ನು 15 ನಿಮಿಷಗಳ ಕಾಲ ಮುಂದೂಡಿದರು. ಸದನವು ಮರುಸಮಾವೇಶಗೊಂಡಾಲೂ ಘೋಷಣೆಗಳು ಮುಂದುವರಿದಿದ್ದು,ಅಂತಿಮವಾಗಿ ದಿನದ ಮಟ್ಟಿಗೆ ಮುಂದೂಡಲಾಯಿತು.
ಅತ್ತ ಲೋಕಸಭೆಯು ಬೆಳಗಿನ ಅಧಿವೇಶನದಲ್ಲಿ ಎರಡು ಸಲ ಮುಂದೂಡಿಕೆಗಳಿಗೆ ಸಾಕ್ಷಿಯಾಗಿತ್ತು. ಅಪರಾಹ್ನ ಹಣಕಾಸು ಮಸೂದೆ 2025ರ ಮೇಲೆ ಚರ್ಚೆಯೊಂದಿಗೆ ಸದನವು ಕಲಾಪವನ್ನು ಪುನರಾರಂಭಿಸಿತು.