ಸಂಸದರ ವೇತನ,ಪಿಂಚಣಿ ಶೇ.24ರಷ್ಟು ಏರಿಕೆ

ಸಾಂದರ್ಭಿಕ ಚಿತ್ರ | PTI
ಹೊಸದಿಲ್ಲಿ: ಕೇಂದ್ರವು ಸೋಮವಾರ ವೆಚ್ಚ ಹಣದುಬ್ಬರದ ಆಧಾರದಲ್ಲಿ ಸಂಸತ್ ಸದಸ್ಯರ ವೇತನವನ್ನು ಶೇ.24ರಷ್ಟು ಹೆಚ್ಚಿಸಿ ಅಧಿಸೂಚನೆಯನ್ನು ಹೊರಡಿಸಿದೆ. ವೇತನ ಏರಿಕೆಯು 2023,ಎ.1ರಿಂದ ಪೂರ್ವಾನ್ವಯಗೊಳ್ಳಲಿದೆ.
ಹಾಲಿ ಸಂಸದರಿಗೆ ದಿನಭತ್ಯೆ ಮತ್ತು ಮಾಜಿ ಸಂಸದರಿಗೆ ಪಿಂಚಣಿ ಮತ್ತು ಐದು ವರ್ಷಗಳಿಂತ ಹೆಚ್ಚಿನ ಸೇವೆಗೆ ಪ್ರತಿವರ್ಷಕ್ಕೆ ಹೆಚ್ಚುವರಿ ಪಿಂಚಣಿಯನ್ನೂ ಏರಿಸಲಾಗಿದೆ.
ಸಂಸದೀಯ ವ್ಯವಹಾರಗಳ ಸಚಿವಾಲಯವು ಹೊರಡಿಸಿರುವ ಅಧಿಸೂಚನೆಯಲ್ಲಿ ಸಂಸದರ ಮಾಸಿಕ ವೇತನವನ್ನು ಈಗಿನ ಒಂದು ಲಕ್ಷ ರೂ.ಗಳಿಂದ 1.24 ಲಕ್ಷ ರೂ.ಗೆ ಮತ್ತು ದಿನಭತ್ಯೆಯನ್ನು 2,000 ರೂ.ಗಳಿಂದ 2,500 ರೂ.ಗಳಿಗೆ ಹೆಚ್ಚಿಸಲಾಗಿದೆ.
ಮಾಜಿ ಸಂಸದರಿಗೆ ಮಾಸಿಕ ಪಿಂಚಣಿಯನ್ನು 25,000 ರೂ.ಗಳಿಂದ 31,000 ರೂ.ಗಳಿಗೆ ಹಾಗೂ ಐದು ವರ್ಷಕ್ಕಿಂತ ಹೆಚ್ಚಿನ ಸೇವೆಗೆ ಪ್ರತಿ ವರ್ಷ ಹೆಚ್ಚುವರಿ ಪಿಂಚಣಿಯನ್ನು ಮಾಸಿಕ 2,000 ರೂ.ಗಳಿಂದ 2,500 ರೂ.ಗಳಿಗೆ ಹೆಚ್ಚಿಸಲಾಗಿದೆ.
1961ರ ಆದಾಯ ತೆರಿಗೆ ಕಾಯ್ದೆಯಲ್ಲಿ ನಿರ್ದಿಷ್ಟ ಪಡಿಸಿರುವ ವೆಚ್ಚ ಹಣದುಬ್ಬರ ಸೂಚ್ಯಂಕದ ಆಧಾರದಲ್ಲಿ ಸಂಸತ್ ಸದಸ್ಯರ ವೇತನ, ಭತ್ಯೆ ಮತ್ತು ಪಿಂಚಣಿ ಕಾಯ್ದೆಯಡಿ ದತ್ತ ಅಧಿಕಾರವನ್ನು ಬಳಸಿಕೊಂಡು ವೇತನ ಹೆಚ್ಚಳವನ್ನು ಪ್ರಕಟಿಸಲಾಗಿದೆ.