ಲಖೀಂಪುರ್ ಖೇರಿ ಹಿಂಸಾಚಾರ: ಬೆದರಿಕೆಗಳ ಕುರಿತು ಪೊಲೀಸರಿಗೆ ದೂರು ನೀಡಲು ಪ್ರತ್ಯಕ್ಷದರ್ಶಿಗೆ ಸುಪ್ರೀಂ ಕೋರ್ಟ್ ಅನುಮತಿ

PC : PTI
ಹೊಸದಿಲ್ಲಿ: ಲಖೀಂಪುರ್ ಖೇರಿ ಹಿಂಸಾಚಾರ ಪ್ರಕರಣದಲ್ಲಿ ಮಾಜಿ ಕೇಂದ್ರ ಸಚಿವ ಅಜಯ್ ಕುಮಾರ್ ಮಿಶ್ರಾರರ ಪುತ್ರ ಆಶಿಶ್ ಮಿಶ್ರಾ ವಿರುದ್ಧ ಸಾಕ್ಷಿ ನುಡಿಯದಂತೆ ಬೆದರಿಕೆ ಒಡ್ಡಲಾಗುತ್ತಿದೆ ಎಂದು ಆರೋಪಿಸಿರುವ ಸಾಕ್ಷಿದಾರರೊಬ್ಬರಿಗೆ ಉತ್ತರ ಪ್ರದೇಶ ಪೊಲೀಸರಿಗೆ ದೂರು ನೀಡಲು ಸೋಮವಾರ ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ.
ಪ್ರತ್ಯಕ್ಷದರ್ಶಿಯೊಬ್ಬರು ದೂರು ನೀಡಿದಾಗ, ಪೊಲೀಸರು ತಾವು ಈ ಹಿಂದೆ ಸಲ್ಲಿಸಿದ್ದ ವರದಿಯಲ್ಲಿನ ಅಭಿಪ್ರಾಯಗಳಿಂದ ಪ್ರಭಾವಿತರಾಗದೆ, ಅಂತಹ ಆರೋಪಗಳನ್ನು ರಾಗದ್ವೇಷ ರಹಿತವಾಗಿ ತನಿಖೆ ನಡೆಸಬೇಕು ಎಂದು ನ್ಯಾ. ಸೂರ್ಯಕಾಂತ್ ಹಾಗೂ ನ್ಯಾ. ಎನ್.ಕೋಟೀಶ್ವರ್ ಸಿಂಗ್ ಅವರನ್ನೊಳಗೊಂಡಿದ್ದ ನ್ಯಾಯಪೀಠ ಸೂಚಿಸಿದೆ.
ಒಂದು ವೇಳೆ ಅಗತ್ಯ ಬಿದ್ದರೆ, ಹೊಸದಾಗಿ ವಸ್ತುಸ್ಥಿತಿ ವರದಿಯನ್ನು ಸಲ್ಲಿಸುವ ಸ್ವಾತಂತ್ರ್ಯವನ್ನೂ ನ್ಯಾಯಪೀಠವು ಪೊಲೀಸರಿಗೆ ನೀಡಿದೆ.
ಇದೇ ವೇಳೆ, ಜನವರಿ, 2024ರಲ್ಲಿ ಆರೋಪಿ ಆಶಿಶ್ ಮಿಶ್ರಾಗೆ ಮಂಜೂರು ಮಾಡಲಾಗಿದ್ದ ಜಾಮೀನಿನ ಷರತ್ತುಗಳನ್ನು ಉಲ್ಲಂಘಿಸಲಾಗಿದೆ ಎಂದು ಆರೋಪಿಸಿ ಸಲ್ಲಿಕೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಜಾಮೀನನ್ನು ರದ್ದುಗೊಳಿಸಲೂ ನಿರಾಕರಿಸಿದ ಸುಪ್ರೀಂ ಕೋರ್ಟ್, ಎಪ್ರಿಲ್ 5 ಹಾಗೂ 6ರಂದು ನಡೆಯಲಿರುವ ರಾಮ ನವಮಿಯ ಅಂಗವಾಗಿ ಲಖೀಂಪುರ್ ಖೇರಿಯಲ್ಲಿರುವ ತಮ್ಮ ಕುಟುಂಬದ ಸದಸ್ಯರನ್ನು ಭೇಟಿಯಾಗಲು ಅವರಿಗೆ ಅನುಮತಿ ನೀಡಿದೆ.
ಎಪ್ರಿಲ್ 7ರ ಸಂಜೆ 5 ಗಂಟೆಯೊಳಗೆ ಲಖೀಂಪುರ್ ಖೇರಿಯಿಂದ ಲಕ್ನೊಗೆ ಮರಳಬೇಕು ಹಾಗೂ ತಮ್ಮ ತವರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಯಾವುದೇ ರಾಜಕೀಯ ಕಾರ್ಯಕರ್ತರೊಂದಿಗೆ ಬೆರೆಯಬಾರದು ಎಂದೂ ಸುಪ್ರೀಂ ಕೋರ್ಟ್ ಸೂಚಿಸಿದೆ.
ಇದಕ್ಕೂ ಮುನ್ನ, ಆಶಿಶ್ ಮಿಶ್ರಾಜ ಜಾಮೀನು ಷರತ್ತುಗಳನ್ನು ಉಲ್ಲಂಘಿಸಿ ರಾಜಕೀಯ ಸಮಾವೇಶವೊಂದರಲ್ಲಿ ಪಾಲ್ಗೊಂಡಿದ್ದರು ಎಂದು ಆರೋಪಿಸಿ ಲಖೀಂಪುರ್ ಖೇರಿ ಹಿಂಸಾಚಾರದ ಸಂತ್ರಸ್ತರು ಸಲ್ಲಿಸಿದ್ದ ಅರ್ಜಿಯ ಸಂಬಂಧ ಅಂತಹ ಆರೋಪಗಳನ್ನು ನಿರಾಕರಿಸಿ ಉತ್ತರ ಪ್ರದೇಶ ಪೊಲೀಸರು ಸಲ್ಲಿಸಿದ ವಸ್ತು ಸ್ಥಿತಿ ವರದಿಯನ್ನು ಸುಪ್ರೀಂ ಕೋರ್ಟ್ ಅಂಗೀಕರಿಸಿತು.
ಆಶಿಶ್ ಮಿಶ್ರಾ ರಾಜಕೀಯ ಸಮಾವೇಶವೊಂದರಲ್ಲಿ ಪಾಲ್ಗೊಂಡಿದ್ದರು ಎಂದು ಆರೋಪಿಸಲಾಗಿರುವ ಭಾವಚಿತ್ರವು ಅವರು ಹಳೆಯ ರಾಜಕೀಯ ಸಮಾವೇಶವೊಂದರಲ್ಲಿ ಪಾಲ್ಗೊಂಡಿದ್ದ ಭಾವಚಿತ್ರವೇ ಹೊರತು, ಕಳೆದ ವರ್ಷದ ಅಕ್ಟೋಬರ್ ತಿಂಗಳಲ್ಲಿ ಪಾಲ್ಗೊಂಡಿದ್ದ ರಾಜಕೀಯ ಸಮಾವೇಶದ್ದಲ್ಲ ಎಂದು ಉತ್ತರ ಪ್ರದೇಶ ಪೊಲೀಸರು ತಮ್ಮ ವಸ್ತುಸ್ಥಿತಿ ವರದಿಯಲ್ಲಿ ಹೇಳಿದ್ದಾರೆ.