‘ವಿಶ್ವಾಸ ದ್ರೋಹಿ’ಯನ್ನು ‘ವಿಶ್ವಾಸ ದ್ರೋಹಿ’ ಎಂದು ಕರೆಯುವುದು ದಾಳಿಯಲ್ಲ: ಕುನಾಲ್ ಕಾಮ್ರಾಗೆ ಉದ್ಧವ್ ಬೆಂಬಲ

ಉದ್ಧವ್ ಠಾಕ್ರೆ (Photo credit: PTI)
ಹೊಸದಿಲ್ಲಿ: ಶಿವಸೇನೆ ಮುಖ್ಯಸ್ಥ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆಯವರನ್ನು ಉದ್ದೇಶಿಸಿ ‘ಗದ್ದಾರ್ (ವಿಶ್ವಾಸ ದ್ರೋಹಿ)’ ಎಂದು ಬಣ್ಣಿಸಿದ್ದ ಸ್ಟ್ಯಾಂಡ್‌ಅಪ್ ಕಾಮಿಡಿಯನ್ ಕುನಾಲ್ ಕಾಮ್ರಾರನ್ನು ಶಿವಸೇನೆ(ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆಯವರು ಸೋಮವಾರ ಬೆಂಬಲಿಸಿದ್ದಾರೆ.
ಶಿಂಧೆ ನೇತೃತ್ವದ ಶಿವಸೇನೆ ಬಣದ ವಿರುದ್ಧ ತನ್ನ ವಾಗ್ದಾಳಿಯನ್ನು ಇನ್ನಷ್ಟು ಮೊನಚುಗೊಳಿಸಿದ ಠಾಕ್ರೆ, ‘ವಿಶ್ವಾಸ ದ್ರೋಹಿ’ಯನ್ನು ‘ವಿಶ್ವಾಸ ದ್ರೋಹಿ’ ಎಂದು ಕರೆಯುವುದು ಯಾರದೇ ಮೇಲಿನ ದಾಳಿಯಲ್ಲ ಎಂದು ಹೇಳಿದರು. ಕಾಮ್ರಾ ಅವರ ಪ್ರದರ್ಶನದಲ್ಲಿಯ ಹಾಡನ್ನು ಪೂರ್ಣವಾಗಿ ಕೇಳುವಂತೆ ಮತ್ತು ಅದನ್ನು ಇತರರೂ ಕೇಳುವಂತೆ ಮಾಡಿ ಎಂದು ಅವರು ಜನರನ್ನು ಆಗ್ರಹಿಸಿದರು.
ಕಾಮ್ರಾ ಪ್ರದರ್ಶನ ನೀಡಿದ್ದ ಮುಂಬೈನ ಹೋಟೆಲ್ ಯುನಿಕಾಂಟಿನೆಂಟಲ್‌ನ ಹ್ಯಾಬಿಟೇಟ್ ಸೆಂಟರ್‌ನಲ್ಲಿ ವಿಧ್ವಂಸಕ ಕೃತ್ಯಗಳ ವರದಿಗಳನ್ನು ಉಲ್ಲೇಖಿಸಿದ ಠಾಕ್ರೆ, ಈ ದಾಳಿಗೂ ಶಿವಸೇನೆಗೂ ಯಾವುದೇ ಸಂಬಂಧವಿಲ್ಲ. ‘ಗದ್ದಾರ್ ಸೇನಾ’ ಈ ಕೃತ್ಯಗಳನ್ನು ನಡೆಸಿದೆ. ರಕ್ತದಲ್ಲಿ ‘ಗದ್ದಾರಿ’ ಇರುವವರು ಎಂದಿಗೂ ಶಿವಸೈನಿಕರಾಗಲು ಸಾಧ್ಯವಿಲ್ಲ ಎಂದು ಹೇಳಿದರು.
ಕಾಮ್ರಾ ಅವರು ಪ್ರದರ್ಶನ ನೀಡಿದ್ದ ಸ್ಥಳವನ್ನು ಬೃಹನ್ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಅಧಿಕಾರಿಗಳು ಸೋಮವಾರ ಬೆಳಿಗ್ಗೆ ಪರಿಶೀಲಿಸಿದರು. ನೆಲ ಮತ್ತು ಮೂರು ಅಂತಸ್ತುಗಳ ಕಟ್ಟಡದ ಪ್ಲಾನ್‌ಗಳನ್ನು ಪುನರ್‌ಪರಿಶೀಲಿಸಿದ ಅಧಿಕಾರಿಗಳು ಮನಪಾ ಅನುಮತಿಯಿಲ್ಲದೆ ಪ್ರವೇಶ ದ್ವಾರದ ಬಳಿ ತಾತ್ಕಾಲಿಕ ಶೆಡ್‌ವೊಂದನ್ನು ನಿರ್ಮಿಸಿದ್ದನ್ನು ಪತ್ತೆ ಹಚ್ಚಿದರು.
ಶೆಡ್ ಅನ್ನು ಕೆಡವಲು ಪಾಲಿಕೆಯು ಯೋಜಿಸಿತ್ತಾದರೂ ಮಾಲಿಕರು ಸ್ವತಃ ಅದನ್ನು ತೆರವುಗೊಳಿಸಲು ಸಮಯಾವಕಾಶವನ್ನು ಕೋರಿದ್ದಾರೆ ಎಂದು ಬಿಎಂಸಿ ಅಧಿಕಾರಿಯೋರ್ವರು ದೃಢಪಡಿಸಿದರು.
ಈ ನಡುವೆ ಕಟ್ಟಡದ ನಿರ್ಮಾಣವು ಅದರ ಅನುಮೋದಿತ ಯೋಜನೆಗೆ ಅನುಗುಣವಾಗಿದೆಯೇ ಎನ್ನುವುದನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.