ಜಾರ್ಖಂಡ್ | ಸರಕಾರಿ ಶಾಲೆಯೊಂದರ ಕೊಠಡಿಯಲ್ಲಿ ರಕ್ತಸಿಕ್ತ ಮೃತ ದೇಹ ಪತ್ತೆ ; ಜಮ್ಷೆಡ್ ಪುರ್ ಉದ್ವಿಗ್ನ

Update: 2025-03-21 20:38 IST
ಜಾರ್ಖಂಡ್ | ಸರಕಾರಿ ಶಾಲೆಯೊಂದರ ಕೊಠಡಿಯಲ್ಲಿ ರಕ್ತಸಿಕ್ತ ಮೃತ ದೇಹ ಪತ್ತೆ ; ಜಮ್ಷೆಡ್ ಪುರ್ ಉದ್ವಿಗ್ನ

PC : NDTV 

  • whatsapp icon

ಜಮ್ಷೆಡ್ ಪುರ: ಜಮ್ಷೆಡ್ ಪುರ್ ನ ಕುನ್ವರ್ ಸಿಂಗ್ ರಸ್ತೆಯಲ್ಲಿರುವ ಸರಕಾರಿ ಶಾಲೆಯೊಂದರ ಎರಡನೆ ಮಹಡಿಯಲ್ಲಿರುವ ತರಗತಿ ಕೊಠಡಿಯೊಂದರಲ್ಲಿ ಸ್ಥಳೀಯ ಯುವಕನೊಬ್ಬನ ರಕ್ತಸಿಕ್ತ ಮೃತ ದೇಹ ಪತ್ತೆಯಾದ ಹಿನ್ನೆಲೆಯಲ್ಲಿ, ಶುಕ್ರವಾರ ಜಮ್ಷೆಡ್ ಪುರ್ ನ ಉಲಿದಿಹ್ ಒಪಿ ರಸ್ತೆಯಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು.

ಮೃತ ಯುವಕನನ್ನು ಉಲಿದಿಹ್ ನಿವಾಸಿಯಾದ ಪವನ್ ಎಂದೂ ಕರೆಯಲಾಗುವ 24 ವರ್ಷದ ಸೌರಭ್ ಶರ್ಮ ಎಂದು ಗುರುತಿಸಲಾಗಿದೆ.

ಪೊಲೀಸ್ ಮೂಲಗಳ ಪ್ರಕಾರ, ಸೌರಭ್ ಶರ್ಮರ ಕುತ್ತಿಗೆಯನ್ನು ಹರಿತವಾದ ಆಯುಧದಿಂದ ಸೀಳಿ, ಬರ್ಬರವಾಗಿ ಹತ್ಯೆಗೈಯ್ಯಲಾಗಿದೆ.

ಸುದ್ದಿ ತಿಳಿಯುತ್ತಿದ್ದಂತೆಯೆ ಸ್ಥಳಕ್ಕೆ ಧಾವಿಸಿದ ಪೊಲೀಸರು, ಮೃತ ದೇಹವನ್ನು ವಶಪಡಿಸಿಕೊಂಡು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಹತ್ಯೆಯ ಕಾರಣ ಹಾಗೂ ಹತ್ಯೆಯ ಹಿಂದಿರುವ ವ್ಯಕ್ತಿಗಳನ್ನು ಗುರುತಿಸಲು ತನಿಖೆ ಪ್ರಗತಿಯಲ್ಲಿದೆ.

ಸೌರಭ್ ಶರ್ಮ ಗುರುವಾರ ಸಂಜೆ ಮನೆ ತೊರೆದಿದ್ದ ಎಂದು ಅವರ ಕುಟುಂಬದ ಸದಸ್ಯರು ತಿಳಿಸಿದ್ದಾರೆ. ಅವರು ಕೊನೆಯದಾಗಿ ಸೌರಭ್ ಶರ್ಮರೊಂದಿಗೆ ರಾತ್ರಿ 9 ಗಂಟೆಗೆ ಫೋನ್ ನಲ್ಲಿ ಮಾತನಾಡಿದ್ದು, ಇದಾದ ನಂತರ, ಅವರ ಮೊಬೈಲ್ ನಾಟ್ ರೀಚಬಲ್ ಆಗಿದೆ. ಆ ರಾತ್ರಿ ಸೌರಭ್ ಶರ್ಮ ಮನೆಗೆ ಮರಳದಿದ್ದರಿಂದ ಆತಂಕಗೊಂಡ ಕುಟುಂಬದ ಸದಸ್ಯರು, ಅವರನ್ನು ಪತ್ತೆ ಹಚ್ಚಲು ತಮ್ಮ ಸಂಬಂಧಿಕರ ನಿವಾಸಗಳು ಹಾಗೂ ಸಮೀಪದ ಪ್ರದೇಶಗಳಲ್ಲಿ ಶೋಧ ಕಾರ್ಯ ನಡೆಸಿದ್ದಾರೆ. ಆದರೆ, ಅವರ ಸುಳಿವು ಮಾತ್ರ ಪತ್ತೆಯಾಗಿಲ್ಲ.

ಸ್ಥಳೀಯ ನಿವಾಸಿಗಳು ಶಾಲೆಯೊಂದರಲ್ಲಿ ರಕ್ತಸಿಕ್ತ ಮೃತ ದೇಹವನ್ನು ಕಂಡು, ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ ನಂತರವಷ್ಟೇ ಈ ಭೀಕರ ಘಟನೆ ಬೆಳಕಿಗೆ ಬಂದಿದೆ. ಈ ಸುದ್ದಿ ತಕ್ಷಣವೇ ವ್ಯಾಪಿಸಿದ್ದು, ಘಟನಾ ಸ್ಥಳದಲ್ಲಿ ದೊಡ್ಡ ಪ್ರಮಾಣದ ಜನಜಂಗುಳಿ ನೆರೆದಿದೆ. ಕೆಲ ಹೊತ್ತಿನ ನಂತರ, ಘಟನಾ ಸ್ಥಳಕ್ಕೆ ಆಗಮಿಸಿದ ಸೌರಭ್ ಶರ್ಮರ ಕುಟುಂಬದ ಸದಸ್ಯರು, ಅವರ ದೇಹದ ಗುರುತನ್ನು ಪತ್ತೆ ಹಚ್ಚಿದ್ದಾರೆ.

ಸೌರಭ್ ಶರ್ಮ ಕೊನೆಯದಾಗಿ ಗುರುವಾರ ರಾತ್ರಿ ಸುಮಾರು 9 ಗಂಟೆಗೆ ತಮ್ಮ ಸೋದರ ಸಂಬಂಧಿ ರಾಜುರೊಂದಿಗೆ ವಿಡಿಯೊ ಕರೆಯಲ್ಲಿ ಮಾತನಾಡಿದಾಗ ಕಂಡು ಬಂದಿದ್ದಾರೆ. ಆ ಕರೆ ಮುಕ್ತಾಯಗೊಂಡ ನಂತರ, ಸೌರಭ್ ಶರ್ಮರ ಮೊಬೈಲ್ ಫೋನ್ ಸ್ವಿಚ್ಡ್ ಆಫ್ ಆಗಿದೆ. ಈ ಕುರಿತು ತನಿಖಾಧಿಕಾರಿಗಳು ಈಗಾಗಲೇ ರಾಜುರನ್ನು ವಿಚಾರಣೆಗೊಳಪಡಿಸಿದ್ದು, ಇನ್ನಿತರ ಸುಳಿವುಗಳ ಬೆನ್ನು ಹತ್ತಿದ್ದಾರೆ.

ಪ್ರಾಥಮಿಕ ತನಿಖೆಯ ಪ್ರಕಾರ, ಸೌರಭ್ ಶರ್ಮ ಮಾದಕ ದ್ರವ್ಯಗಳ ವ್ಯಸನಿಯಾಗಿದ್ದ ಎಂದು ಹೇಳಲಾಗಿದ್ದು, ಆತ ಹೇಗೆ ಶಾಲೆಯೊಳಗೆ ಪ್ರವೇಶಿಸಿದ ಎಂಬ ಕುರಿತು ಸಂಶಯಗಳು ವ್ಯಕ್ತವಾಗಿವೆ. ಆದರೆ, ಸೌರಭ್ ಶರ್ಮಗೆ ಯಾರೊಂದಿಗಾದರೂ ವೈರತ್ವ ಅಥವಾ ವ್ಯಾಜ್ಯವಿತ್ತು ಎಂಬುದನ್ನು ಅವರ ಕುಟುಂಬದ ಸದಸ್ಯರು ಅಲ್ಲಗಳೆದಿದ್ದಾರೆ.

ಹತ್ಯೆಯ ಸಂಚುಕೋರರನ್ನು ಗುರುತಿಸುವ ಪ್ರಯತ್ನಗಳ ಪ್ರಗತಿಯಲ್ಲಿದ್ದು, ಈ ಪ್ರಕರಣವನ್ನು ಆದಷ್ಟೂ ಶೀಘ್ರವಾಗಿ ಬಗೆಹರಿಸಲಾಗುವುದು ಎಂದು ಘಟನಾ ಸ್ಥಳಕ್ಕೆ ಆಗಮಿಸಿದ್ದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಭರವಸೆ ನೀಡಿದ್ದಾರೆ. “ನಾವು ಎಲ್ಲ ಆಯಾಮಗಳಲ್ಲೂ ತನಿಖೆಯನ್ನು ಮುಂದುವರಿಸಿದ್ದು, ಈ ಘಟನೆಗೆ ಕಾರಣರಾದವರನ್ನು ಶಿಕ್ಷೆಗೆ ಗುರಿಪಡಿಸಲಾಗುವುದು” ಎಂದು ಅವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News