ಜಾತಿ ಗಣತಿಯು ತಾರತಮ್ಯದ ಸತ್ಯವನ್ನು ಹೊರತರುತ್ತದೆ: ರಾಹುಲ್ ಗಾಂಧಿ

Update: 2025-03-21 20:26 IST
Rahul Gandhi

ರಾಹುಲ್ ಗಾಂಧಿ | PC : PTI 

  • whatsapp icon

ಹೊಸದಿಲ್ಲಿ: ಜಾತಿ ಗಣತಿ ನಡೆಸಬೇಕೆಂಬ ತನ್ನ ಬೇಡಿಕೆಯನ್ನು ಪುನರುಚ್ಚರಿಸುವ ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ, ಅಸಮಾನತೆ ಮತ್ತು ತಾರತಮ್ಯದ ವಾಸ್ತವವನ್ನು ಹೊರತರುವ ನಿಟ್ಟಿನಲ್ಲಿ ಅದೊಂದು ಮಹತ್ವದ ಹೆಜ್ಜೆಯಾಗಲಿದೆ ಎಂದು ಹೇಳಿದ್ದಾರೆ.

ಈ ಸಂಬಂಧ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಅವರು ಸಂದೇಶವೊಂದನ್ನು ಹಾಕಿದ್ದಾರೆ. ಸಂದೇಶದ ಜೊತೆಗೆ ವಿಶ್ವವಿದ್ಯಾನಿಲಯ ಅನುದಾನ ಆಯೋಗ (ಯುಜಿಸಿ)ದ ಮಾಜಿ ಅಧ್ಯಕ್ಷ ಹಾಗೂ ಶಿಕ್ಷಣ ತಜ್ಞ ಸುಖ್‌ದೇವ್ ತೋರಟ್‌ರೊಂದಿಗೆ ನಡೆಸಿದ ಸಂವಾದದ ವೀಡಿಯೊವೊಂದನ್ನೂ ಹಾಕಿದ್ದಾರೆ.

‘‘ಖ್ಯಾತ ವಿದ್ವಾಂಸ, ಆರ್ಥಿಕ ತಜ್ಞ, ದಲಿತ ವಿಷಯಗಳ ಪರಿಣತ ಹಾಗೂ ತೆಲಂಗಾಣದ ಜಾತಿ ಗಣತಿ ಕುರಿತ ಅಧ್ಯಯನ ಸಮಿತಿಯ ಸದಸ್ಯ ಪ್ರೊಫೆಸರ್ ತೋರಟ್‌ರೊಂದಿಗೆ ನಾನು ಮಹಾಡ್ ಸತ್ಯಾಗ್ರಹ ಹಾಗೂ ಸರಕಾರ, ಶಿಕ್ಷಣ, ಅಧಿಕಾರಶಾಹಿ ಮತ್ತು ಸಂಪನ್ಮೂಲಗಳಿಗೆ ಪ್ರವೇಶ ಪಡೆಯುವಲ್ಲಿ ದಲಿತರ ಪರದಾಟದ ಬಗ್ಗೆ ವಿವರವಾದ ಚರ್ಚೆ ನಡೆಸಿದ್ದೇನೆ’’ ಎಂದು ರಾಹುಲ್ ಗಾಂಧಿ ಗುರುವಾರ ಹೇಳಿದ್ದಾರೆ.

‘‘1927 ಮಾರ್ಚ್ 20ರಂದು, ಅಂಬೇಡ್ಕರ್ ಮಹಾಡ್ ಸತ್ಯಾಗ್ರಹದ ಮೂಲಕ ಜಾತಿ ತಾರತಮ್ಯಕ್ಕೆ ನೇರ ಸವಾಲು ಹಾಕಿದ್ದರು’’ ಎಂದು ರಾಯ್‌ಬರೇಲಿಯ ಕಾಂಗ್ರೆಸ್ ಸಂಸದ ಹೇಳಿದ್ದಾರೆ.

‘‘ಅದು ಕೇವಲ ನೀರಿನ ಹಕ್ಕಿಗಾಗಿ ನಡೆದ ಹೋರಾಟವಲ್ಲ, ಸಮಾನತೆ ಮತ್ತು ಗೌರವಕ್ಕಾಗಿ ನಡೆದ ಹೋರಾಟ. ‘ನ್ಯಾಯೋಚಿತ ಪಾಲಿಗಾಗಿ’ 98 ವರ್ಷಗಳ ಹಿಂದೆ ಆರಂಭಗೊಂಡಿರುವ ಹೋರಾಟ ಈಗಲೂ ಮುಂದುವರಿಯುತ್ತಿದೆ’’ ಎಂದು ರಾಹುಲ್ ಗಾಂಧಿ ಹೇಳಿದರು.

‘‘ಭಾರತೀಯ ಸಮಾಜದಲ್ಲಿರುವ ಅಸಮಾನತೆ ಮತ್ತು ತಾರತಮ್ಯದ ವಾಸ್ತವವನ್ನು ಹೊರತರುವ ನಿಟ್ಟಿನಲ್ಲಿ ಜಾತಿ ಗಣತಿಯು ಮಹತ್ವದ ಹೆಜ್ಜೆಯಾಗಿದೆ. ಈ ಅಸಮಾನತೆ ಮತ್ತು ತಾರತಮ್ಯ ಬಹಿರಂಗವಾಗುವುದು ಬೇಡ ಎಂಬುದಾಗಿ ಜಾತಿ ಗಣತಿಯ ವಿರೋಧಿಗಳು ಬಯಸಿದ್ದಾರೆ. ಬಾಬಾಸಾಹೇಬರ ಕನಸು ಇನ್ನು ಪೂರ್ಣಗೊಂಡಿಲ್ಲ. ಅವರ ಹೋರಾಟವು ಭೂತ ಕಾಲಕ್ಕೆ ಸೀಮಿತಗೊಂಡಿಲ್ಲ, ಅದು ವರ್ತಮಾನದ ಹೋರಾಟವೂ ಆಗಿದೆ. ನಾವು ನಮ್ಮೆಲ್ಲಾ ಶಕ್ತಿಯೊಂದಿಗೆ ಆ ಹೋರಾಟವನ್ನು ಮುಂದುವರಿಸುತ್ತೇವೆ’’ ಎಂದು ಕಾಂಗ್ರೆಸ್ ನಾಯಕ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News