ಉತ್ತರ ಪ್ರದೇಶ | ಬುಲ್ಡೋಜರ್ ಕಾರ್ಯಾಚರಣೆ ಮಧ್ಯೆ ಪುಸ್ತಕಗಳಿಗಾಗಿ ಗುಡಿಸಲಿಗೆ ನುಗ್ಗಿದ ಬಾಲಕಿ

PC ; X \ @yadavakhilesh
ಲಕ್ನೋ: ಒತ್ತುವರಿಯನ್ನು ತೆರವುಗೊಳಿಸುವ ಬುಲ್ಡೋಜರ್ ಕಾರ್ಯಾಚರಣೆ ವೇಳೆ ಜೋಪಡಿಗಳಿಗೆ ಹತ್ತಿಕೊಂಡಿದ್ದ ಬೆಂಕಿಯ ನಡುವೆಯೇ ಏಳರ ಹರೆಯದ ಬಾಲಕಿಯೋರ್ವಳು ತನ್ನ ಜೋಪಡಿಗೆ ನುಗ್ಗಿ ತನ್ನ ಶಾಲಾಪುಸ್ತಕಗಳನ್ನು ಜೋಪಾನವಾಗಿ ಹೊರತಂದ ಘಟನೆ ಉತ್ತರ ಪ್ರದೇಶದ ಅಂಬೇಡ್ಕರ್ ನಗರದಲ್ಲಿ ನಡೆದಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವೀಡಿಯೊ ಬಾಲಕಿ ಬೆಂಕಿಯ ಜ್ವಾಲೆಗಳನ್ನೂ ಲೆಕ್ಕಿಸದೆ ತನ್ನ ಶಾಲಾಪುಸ್ತಕಗಳಿದ್ದ ಚೀಲವನ್ನು ಎದೆಗಪ್ಪಿ ಹಿಡಿದು ಜೋಪಡಿಯಿಂದ ಹೊರಕ್ಕೆ ಓಡುತ್ತಿರುವುದನ್ನು ತೋರಿಸಿದೆ. ತಾಗಿಕೊಂಡೇ ಇರುವ ಇನ್ನೊಂದು ಜೋಪಡಿ ಹೊತ್ತಿ ಉರಿಯುತ್ತಿರುವುದನ್ನು ಮತ್ತು ಅಧಿಕಾರಿಗಳು ಬೆಂಕಿಯನ್ನು ಆರಿಸಲು ನೀರಿಗಾಗಿ ಹುಡುಕಾಡುತ್ತಿರುವುದನ್ನೂ ವೀಡಿಯೊ ತೋರಿಸಿದೆ.
‘ನಾನು ಜೋಪಡಿಯೊಳಗೆ ಹೋಗಿ ನನ್ನ ಪುಸ್ತಕಗಳು ಮತ್ತು ಕಾಪಿಗಳಿದ್ದ ಚೀಲವನ್ನು ಹೊರಕ್ಕೆ ತರದಿದ್ದರೆ ಸುಟ್ಟು ಹೋಗುತ್ತಿದ್ದವು. ನನ್ನ ಶಿಕ್ಷಣವನ್ನುಮುಂದುವರಿಸಲು ನನಗೆ ಸಾಧ್ಯವಾಗುತ್ತಿರಲಿಲ್ಲ ’ ಎಂದು ಸಮೀಪದ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವ ಅನನ್ಯಾ ಹೇಳಿದಳು.
ವೀಡಿಯೊವನ್ನು ಹಂಚಿಕೊಂಡಿರುವ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರು,‘‘ಉತ್ತರ ಪ್ರದೇಶದ ಅಂಬೇಡ್ಕರ್ ನಗರದಲ್ಲಿ ಜಿಲ್ಲಾಡಳಿತವು ತನ್ನ ಅಧಿಕಾರವನ್ನು ತೋರಿಸಲು ಜನರ ಜೋಪಡಿಗಳನ್ನು ಧ್ವಂಸಗೊಳಿಸುತ್ತಿದೆ. ಬಾಲಕಿ ತನ್ನ ಪುಸ್ತಕಗಳನ್ನು ರಕ್ಷಿಸಲು ಜೋಪಡಿಯೊಳಗೆ ಓಡುವುದು ಅನಿವಾರ್ಯವಾಗಿತ್ತು. ಇವರು ‘‘ಬೇಟಿ ಬಚಾವೊ ಬೇಟಿ ಪಢಾವೊ’ ಎನ್ನುವ ಅದೇ ಬಿಜೆಪಿಗರಾಗಿದ್ದಾರೆ’’ ಎಂದು ಬರೆದುಕೊಂಡಿದ್ದಾರೆ.