ನ್ಯಾ.ಯಶವಂತ್ ವರ್ಮಾ ವಿರುದ್ಧ ಆಂತರಿಕ ತನಿಖೆಗೆ ಸುಪ್ರೀಂಕೋರ್ಟ್ ಆದೇಶ

ಸುಪ್ರೀಂಕೋರ್ಟ್ | PC : PTI
ಹೊಸದಿಲ್ಲಿ: ದಿಲ್ಲಿ ಹೈಕೋರ್ಟ್ ನ್ಯಾಯಾಧೀಶ ಯಶವಂತ್ ವರ್ಮಾ ನಿವಾಸದಲ್ಲಿ ಕಳೆದವಾರ ಅಗ್ನಿ ಅವಘಡ ಸಂಭವಿಸಿದ ಸಂದರ್ಭ ಭಾರೀ ಮೊತ್ತದ ನಗದು ಪತ್ತೆಯಾದ ಹಿನ್ನೆಲೆಯಲ್ಲಿ ಅವರ ವಿರುದ್ಧ ಸುಪ್ರೀಂಕೋರ್ಟ್ ಶುಕ್ರವಾರ ಆಂತರಿಕ ತನಿಖೆಯನ್ನು ಆರಂಭಿಸಿದೆ.
ಯಶವಂತ್ ವರ್ಮಾ ನಿವಾಸದಲ್ಲಿ ಅಪಾರ ಪ್ರಮಾಣದ ಹಣ ಪತ್ತೆಯಾಗಿರುವ ಬಗ್ಗೆ ವರದಿ ಸಲ್ಲಿಸುವಂತೆಯೂ ದಿಲ್ಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ದೇವೇಂದ್ರ ಕುಮಾರ್ ಉಪಾಧ್ಯಾಯ ಅವರನ್ನು ಸರ್ವೋಚ್ಛ ನ್ಯಾಯಾಲಯವು ಕೋರಿದೆ.
ಕಳೆದ ವಾರ ಯಶವಂತ ವರ್ಮಾ ಅವರ ನಿವಾಸದಲ್ಲಿ ಆಗ್ನಿ ಆಕಸ್ಮಿಕ ಸಂಭವಿಸಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕದಳದ ಸಿಬ್ಬಂದಿ ಅಪಾರ ಪ್ರಮಾಣದ ಹಣವನ್ನು ಪತ್ತೆಹಚ್ಚಿದ್ದರು.
ಈ ಬಗ್ಗೆ ಮಾಹಿತಿ ದೊರೆತ ಬಳಿಕ, ಶುಕ್ರವಾರ ಬೆಳಗ್ಗೆ ಭಾರತದ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ನೇತೃತ್ವದ ಸುಪ್ರೀಂಕೋರ್ಟ್ ಕೊಲಿಜಿಯಂ ಸಭೆಯನ್ನು ನಡೆಸಿತು. ನ್ಯಾಯಮೂರ್ತಿ ವರ್ಮಾ ಅವರನ್ನು 2021ರ ಆಕ್ಟೋಬರ್‌ನಲ್ಲಿ ಅವರು ದಿಲ್ಲಿ ಹೈಕೋರ್ಟ್‌ಗೆ ಬರುವ ಮೊದಲು ಕಾರ್ಯನಿರ್ವಹಿಸಿದ್ದ ಅಲಹಾಬಾದ್ ಹೈಕೋರ್ಟ್‌ಗೆ ವರ್ಗಾಯಿಬೇಕೆಂಬ ನಿರ್ಣಯವನ್ನು ಅವಿರೋಧವಾಗಿ ಅಂಗೀಕರಿಸಿತು.
ಆದಾಗ್ಯೂ ಶುಕ್ರವಾರ ಬೆಳಗ್ಗೆ ನಡೆದ ಸುಪ್ರೀಂಕೋರ್ಟ್‌ನ ಸರ್ವ ನ್ಯಾಯಾಧೀಶರ ಸಭೆಯು, ವರ್ಮಾ ಅವರನ್ನು ವರ್ಗಾಯಿಸಿದರೆ ಮಾತ್ರ ಸಾಲದ ಅವರ ವಿರುದ್ಧ ದೃಢವಾದ ಕ್ರಮವನ್ನು ಕೈಗೊಳ್ಳಬೇಕೆಂದು ಶಿಫಾರಸು ಮಾಡಿತ್ತು.
ಆನಂತರ ಸುಪ್ರೀಂಕೋರ್ಟ್ ವರ್ಮಾರನ್ನು ವರ್ಗಾವಣೆಗೊಳಿಸುವ ಜೊತೆಗೆ ಅವರ ವಿರುದ್ಧ ಆಂತರಿಕ ತನಿಖೆ ನಡೆಸುವುದಕ್ಕೆ ಸಮ್ಮತಿಸಿತು.
ತರುವಾಯ ನ್ಯಾಯಮೂರ್ತಿ ವರ್ಮಾ ಅವರು ನ್ಯಾಯಾಲಯ ಕಲಾಪದಲ್ಲಿ ಪಾಲ್ಗೊಳ್ಳಲಿಲ್ಲ ಹಾಗೂ ಅವರು ರಜೆಯಲಿದ್ದಾರೆಂದು ನ್ಯಾಯಾಲಯದ ಸಿಬ್ಬಂದಿ ನ್ಯಾಯಾಲಯದಲ್ಲಿ ತಿಳಿಸಿದರು.
ನ್ಯಾಯಾಲಯ ಕಸದಬುಟ್ಟಿಯಲ್ಲ ; ಅಲಹಾಬಾದ್ ಹೈಕೋರ್ಟ್‌ಗೆ ನ್ಯಾ. ಯಶವಂತ್ ವರ್ಮಾ ಮರು ವರ್ಗಾವಣೆಗೆ ನ್ಯಾಯವಾದಿಗಳ ವಿರೋಧ (ವಾ)
ಲಕ್ನೋ: ನ್ಯಾಯಮೂರ್ತಿ ಯಶವಂತ ವರ್ಮಾ ಅವರ ನಿವಾಸದಲ್ಲಿ ಭಾರೀ ಮೊತ್ತದ ದಾಖಲೆರಹಿತ ನಗದು ಪತ್ತೆಯಾದ ಹಿನ್ನೆಲೆಯಲ್ಲಿ ಅವರನ್ನು ದಿಲ್ಲಿ ಹೈಕೋರ್ಟ್‌ನಿಂದ ಅಲಹಾಬಾದ್ ಹೈಕೋರ್ಟ್‌ಗೆ ವರ್ಗಾಯಿಸುವ ಸುಪ್ರೀಂಕೋರ್ಟ್ ಪ್ರಸ್ತಾವವನ್ನು ಅಲಹಾಬಾದ್ ಹೈಕೋರ್ಟ್ ಬಾರ್ ಅಸೋಸಿಯೇಶನ್ (ಎಚ್‌ಸಿಬಿಎ) ಬಲವಾಗಿ ಖಂಡಿಸಿದೆ.
ಯಶವಂತ್ ವರ್ಮಾ ಅವರನ್ನು ಅಲಹಾಬಾದ್ ಹೈಕೋರ್ಟ್‌ಗೆ ವರ್ಗಾಯಿಸುವ ಸುಪ್ರೀಂಕೋರ್ಟ್ ಕೊಲಿಜಿಯಂ ನಿರ್ಧಾರವು ನಮಗೆ ಆಘಾತವುಂಟು ಮಾಡಿದೆ ಎಂದು ಎಚ್‌ಸಿಬಿಎ ನಿರ್ಣಯವೊಂದರಲ್ಲಿ ತಿಳಿಸಿದೆ.
ಈ ಬಗ್ಗೆ ಅಲಹಾಬಾದ್ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಹಾಗೂ ಎಲ್ಲಾ ನ್ಯಾಯಾಧೀಶರಿಗೆ ಎಚ್‌ಸಿಬಿಎ ಪತ್ರ ಬರೆದಿದ್ದು, ನ್ಯಾಯಾಲಯವನ್ನು ಕಸದಬುಟ್ಟಿಯಂತೆತ ಪರಿಗಣಿಸಬಾರದು ಎಂದು ಹೇಳಿದೆ ಮತ್ತು ಭ್ರಷ್ಟಾಚಾರದ ಬಗ್ಗೆ ಶೂನ್ಯ ಸಹಿಷ್ಣುತೆ ತಾಳಬೇಕೆಂದು ಆಗ್ರಹಿಸಿದೆ.
► ಅಕ್ರಮ ನಗದು ಪತ್ತೆಗೆ ಕಾರಣವಾದ ಅಗ್ನಿ ಅವಘಡ...
ದಿಲ್ಲಿ ಹೈಕೋರ್ಟ್ ನ್ಯಾಯಾಧೀಶ ಯಶವಂತ ವರ್ಮಾ ಆವರ ದಿಲ್ಲಿಯಲ್ಲಿರುವ ವಸತಿ ಬಂಗಲೆಯಲ್ಲಿ ಮಾರ್ಚ್ 14ರಂದು ಅಗ್ನಿ ಅವಘಡ ಸಂಭವಿಸಿತ್ತು. ಆ ಸಂದರ್ಶನದಲ್ಲಿ ನ್ಯಾ.ಯಶವಂತ ವರ್ಮಾ ಅವರು ನಗರದಲ್ಲಿ ಇರಲಿಲ್ಲ. ಅವ ಕುಟುಂಬಸದಸ್ಯರು ಅಗ್ನಿಶಾಮಕದಳ ಹಾಗೂ ದಿಲ್ಲಿ ಪೊಲೀಸರನ್ನು ಕರೆಯಿಸಿದ್ದರು. ಬೆಂಕಿಯನ್ನು ಆರಿಸಿದ ಬಳಿಕ ಅಗ್ನಿಶಾಮಕದಳ ಸಿಬ್ಬಂದಿ ಕೊಠಡಿಯೊಂದರ ಒಳಗೆ ಭಾರೀ ಮೊತ್ತದ ನಗದು ಹಣವನ್ನು ಪತ್ತೆ ಮಾಡಿದ್ದರು. ಆನಂತರ ಅದನ್ನು ಅವರು ಅಧಿಕೃತವಾಗಿ ದಾಖಲಿಸಿಕೊಂಡಾಗ ಅವು ಅಕ್ರಮ ಹಣವೆಂದು ತಿಳಿದುಬಂದಿತ್ತು.
ಆನಂತರ ಸ್ಥಳೀಯ ಪೊಲೀಸ್ ಅಧಿಕಾರಿಗಳು ತಮ್ಮ ಹಿರಿಯಅಧಿಕಾರಿಗಳಿಗೆ ಯಶವಂತ ವರ್ಮಾ ನಿವಾಸದಲ್ಲಿ ಆಕಸ್ಮಿಕವಾಗಿ ಪತ್ತೆಯಾದ ಹಣದ ಬಗ್ಗೆ ಮಾಹಿತಿ ನೀಡಿದರು. ತ್ವರಿತವಾಗಿ ಈ ಸುದ್ದಿಯು ಸರಕಾರದ ಉನ್ನತಸ್ತರವನ್ನು ತಲುಪಿತು. ಅವರು ಈ ಅಕ್ರಮ ನಗದಿನ ಕುರಿತು ಸಿಜೆಐ ಅವರಿಗೆ ಮಾಹಿತಿ ನೀಡಿದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಸಿಜೆಐ ಖನ್ನಾ ಅವರು ತಕ್ಷಣವೇ ಕೊಲಿಜಿಯಂ ಸಭೆಯನ್ನು ಕರೆದಿದ್ದರು.