ಎಸ್‌ಡಿಪಿಐ ವಿರುದ್ಧದ ಹಣ ಅಕ್ರಮ ವರ್ಗಾವಣೆ ಪ್ರಕರಣ; ಜಾರಿ ನಿರ್ದೇಶನಾಲಯದಿಂದ ವ್ಯಕ್ತಿಯ ಬಂಧನ

ಸಾಂದರ್ಭಿಕ ಚಿತ್ರ | PC : freepik.com
ಹೊಸದಿಲ್ಲಿ: ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ)ದ ರಾಜಕೀಯ ಘಟಕ ಎಸ್‌ಡಿಪಿಐ ವಿರುದ್ಧದ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಹೊಸ ಸುತ್ತಿನ ಶೋಧ ಕಾರ್ಯಾಚರಣೆಯಲ್ಲಿ ಜಾರಿ ನಿರ್ದೇಶನಾಲಯ ತಮಿಳುನಾಡಿನ ಕೊಯಂಬತ್ತೂರಿನಿಂದ ವ್ಯಕ್ತಿಯೋರ್ವನನ್ನು ಬಂಧಿಸಿದೆ ಎಂದು ಅಧಿಕೃತ ಮೂಲಗಳು ಶುಕ್ರವಾರ ತಿಳಿಸಿವೆ.
ಹಣ ಅಕ್ರಮ ವರ್ಗಾವಣೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ವಾಹಿದುರ್ ರಹ್ಮಾನ್ ಜೈನುಲ್ಲಾಬುದ್ದೀನ್‌ನನ್ನು ಕೊಯಂಬತ್ತೂರು ಜಿಲ್ಲೆಯ ಮೆಟ್ಟುಪಾಳ್ಯಂನಿಂದ ಗುರುವಾರ ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ ಗುರುವಾರ ತಮಿಳುನಾಡು, ರಾಜಸ್ಥಾನ, ಪಶ್ಚಿಮಬಂಗಾಳ ಹಾಗೂ ಕೇರಳದಲ್ಲಿ ಹೊಸ ದಾಳಿ ನಡೆಸಿದೆ ಎಂದು ಅದು ತಿಳಿಸಿದೆ.
ಎಸ್‌ಡಿಪಿಐಯ ರಾಷ್ಟ್ರಾಧ್ಯಕ್ಷ ಎಂ.ಕೆ. ಫೈಝಿಯನ್ನು ದಿಲ್ಲಿ ವಿಮಾನ ನಿಲ್ದಾಣದಲ್ಲಿ ಮಾರ್ಚ್ 3ರಂದು ಬಂಧಿಸಿದ ಬಳಿಕ ಜಾರಿ ನಿರ್ದೇಶನಾಲಯ ಈ ಪ್ರಕರಣದಲ್ಲಿ ಮಾರ್ಚ್ 6ರಂದು ಮೊದಲ ಸುತ್ತಿನ ಶೋಧ ಕಾರ್ಯಾಚರಣೆ ನಡೆಸಿತ್ತು.