ಅತ್ಯಾಚಾರ ಕುರಿತು ಅಲಹಾಬಾದ್ ಹೈಕೋರ್ಟ್‌ನ ವಿವಾದಾಸ್ಪದ ವಿವರಣೆಗೆ ಖಂಡನೆ

ಅಲಹಾಬಾದ್ ಹೈಕೋರ್ಟ್ | PC : PTI
ಹೊಸದಿಲ್ಲಿ: ಅಲಹಾಬಾದ್ ಹೈಕೋರ್ಟ್ ಇತ್ತೀಚೆಗೆ ಅತ್ಯಾಚಾರಕ್ಕೆ ನೀಡಿರುವ ವಿವಾದಾಸ್ಪದ ವಿವರಣೆಯನ್ನು ಕೇಂದ್ರ ಸಚಿವೆ ಅನ್ನಪೂರ್ಣ ದೇವಿ ಮತ್ತು ಇತರರು ಖಂಡಿಸಿದ್ದಾರೆ ಮತ್ತು ನ್ಯಾಯಾಂಗದಲ್ಲಿ ಸುಧಾರಣೆಗಳನ್ನು ತರುವಂತೆ ಒತ್ತಾಯಿಸಿದ್ದಾರೆ.
ಶುಕ್ರವಾರ ಪಿಟಿಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅನ್ನಪೂರ್ಣ ದೇವಿ, ‘‘ನಾನು ಈ ತೀರ್ಪನ್ನು ಬೆಂಬಲಿಸುವುದಿಲ್ಲ. ಹಾಗಾಗಿ, ಈ ತೀರ್ಪನ್ನು ಸುಪ್ರೀಂ ಕೋರ್ಟ್ ಮರುಪರಿಶೀಲಿಸಬೇಕು. ಯಾಕೆಂದರೆ, ಅದು ನಾಗರಿಕ ಸಮಾಜದ ಮೇಲೆ ಕೆಟ್ಟ ಪರಿಣಾಮವನ್ನು ಬೀರಲಿದೆ’’ ಎಂದು ಹೇಳಿದರು.
ಸ್ತನಗಳನ್ನು ಸ್ಪರ್ಶಿಸುವುದು ಮತ್ತು ಪೈಜಾಮದ ಲಾಡಿಯನ್ನು ತುಂಡು ಮಾಡುವುದು ಅತ್ಯಾಚಾರವಾಗುವುದಿಲ್ಲ ಎಂಬುದಾಗಿ ಅಲಹಾಬಾದ್ ಹೈಕೋರ್ಟ್ ನ್ಯಾಯಾಧೀಶ ನ್ಯಾಯಮೂರ್ತಿ ರಾಮ್ ಮನೋಹರ್ ನಾರಾಯಣ ಮಿಶ್ರಾ ಅಭಿಪ್ರಾಯಪಟ್ಟಿದ್ದಾರೆ. ಆದಾಗ್ಯೂ, ಹಾಗೆ ಮಾಡುವುದು ಮಹಿಳೆಯೊಬ್ಬರನ್ನು ವಿವಸ್ತ್ರಗೊಳಿಸುವ ಅಥವಾ ಬೆತ್ತಲಾಗುವಂತೆ ಬಲವಂತಪಡಿಸುವ ಉದ್ದೇಶದಿಂದ ಆಕೆಯ ವಿರುದ್ಧ ನಡೆಸಲಾಗುವ ಕ್ರಿಮಿನಲ್ ಬಲಪ್ರಯೋಗ ಅಥವಾ ಹಲ್ಲೆ ಕೃತ್ಯವಾಗಬಹುದು ಎಂದು ಅವರು ಹೇಳಿದ್ದಾರೆ.
ಅಪರಾಧ ನಡೆಸಲು ಸಿದ್ಧತೆ ನಡೆಸುವುದು ಮತ್ತು ವಾಸ್ತವವಾಗಿ ಅಪರಾಧ ನಡೆಸುವುದರ ನಡುವೆ ವ್ಯತ್ಯಾಸವಿದೆ ಎಂಬುದಾಗಿಯೂ ಅವರು ಅಭಿಪ್ರಾಯಪಟ್ಟಿದ್ದಾರೆ.
‘‘ಆರೋಪಿಗಳಾದ ಪವನ್ ಮತ್ತು ಆಕಾಶ್ ವಿರುದ್ಧ ಹೊರಿಸಲಾಗಿರುವ ಆರೋಪಗಳು ಮತ್ತು ಪ್ರಕರಣದ ವಾಸ್ತವಾಂಶಗಳು ಅವರ ವಿರುದ್ಧ ಅತ್ಯಾಚಾರ ಯತ್ನ ಪ್ರಕರಣವನ್ನು ದಾಖಲಿಸಲು ಸಾಕಾಗುವುದಿಲ್ಲ. ಆರೋಪಿಗಳ ವಿರುದ್ಧ ಅತ್ಯಾಚಾರ ಯತ್ನ ಮೊಕದ್ದಮೆ ದಾಖಲಾಗಬೇಕಾದರೆ, ಅವರ ಪ್ರಯತ್ನಗಳು ಸಿದ್ಧತೆಯ ಹಂತವನ್ನೂ ಮೀರಿತ್ತು ಎಂಬುದಾಗಿ ಪ್ರಾಸಿಕ್ಯೂಶನ್ ಸಾಬೀತುಪಡಿಸಬೇಕಾಗುತ್ತದೆ’’ ಎಂದು ನ್ಯಾಯಾಧೀಶರು ಹೇಳಿದ್ದಾರೆ.
ಹನ್ನೊಂದು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಯತ್ನ ಪ್ರಕರಣದಲ್ಲಿ ಪವನ್ ಮತ್ತು ಆಕಾಶ್ ಆರೋಪಿಗಳಾಗಿದ್ದಾರೆ.
ರಾಜ್ಯಸಭಾ ಸದಸ್ಯೆ ಸ್ವಾತಿ ಮಳಿವಾಲ್ ಕೂಡ ಹೈಕೋರ್ಟ್ ತೀರ್ಪನ್ನು ಖಂಡಿಸಿದ್ದಾರೆ. ‘‘ಸ್ತನಗಳನ್ನು ಸ್ಪರ್ಶಿಸುವುದು, ಪೈಜಾಮದ ಲಾಡಿಯನ್ನು ತುಂಡು ಮಾಡುವುದು ಅತ್ಯಾಚಾರ ಯತ್ನವಲ್ಲ ಎಂದು ನ್ಯಾಯಾಲಯ ಹೇಳಿದೆ. ಇದು ಅತ್ಯಂತ ಸಂವೇದನಾರಹಿತ ಹೇಳಿಕೆ ಮತ್ತು ಇದು ಸಮಾಜಕ್ಕೆ ಅತ್ಯಂತ ಅಪಾಯಕಾರಿ. ಈ ವಿಷಯದಲ್ಲಿ ಸುಪ್ರೀಂ ಕೋರ್ಟ್ ಮಧ್ಯಪ್ರವೇಶ ಮಾಡಬೇಕು’’ ಎಂದು ಅವರು ಹೇಳಿದರು.
‘‘ಸಂತ್ರಸ್ತ ಬಾಲಕಿಗೆ 11 ವರ್ಷ. ಹಾಗಾದರೆ ಪೋಕ್ಸೊದಂಥ ಕಠಿಣ ಕಾನೂನುಗಳ ಅಗತ್ಯವೇನು?’’ ಎಂದು ಬಿಜೆಪಿ ಸಂಸದೆ ಸಿ.ಟಿ. ಪಲ್ಲವಿ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪ್ರಶ್ನಿಸಿದ್ದಾರೆ.
ಖ್ಯಾತ ವಕೀಲೆ ಇಂದಿರಾ ಜೈಸಿಂಗ್ ‘ಎಕ್ಸ್’ನಲ್ಲಿ ಸಂದೇಶವೊಂದನ್ನು ಹಾಕಿ, ‘‘ಈ ವಿಷಯದಲ್ಲಿ ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತ ಕ್ರಮ ತೆಗೆದುಕೊಳ್ಳಬೇಕು. ಇದಕ್ಕಿಂತ ತುಂಬಾ ಕಡಿಮೆ ತೀವ್ರತೆಯ ವಿಷಯಗಳಲ್ಲಿ ನ್ಯಾಯಾಧೀಶರನ್ನು ಸುಪ್ರೀಂ ಕೋಟ್ ತರಾಟೆಗೆ ತೆಗೆದುಕೊಂಡಿದೆ’’ ಎಂದು ಹೇಳಿದ್ದಾರೆ.